ಭಾನುವಾರ, ಡಿಸೆಂಬರ್ 8, 2019
21 °C
ಖಾಲಿಯಾದ ಹಳೆಯ ದಾಸ್ತಾನು: ಇನ್ನೂ ಬಾರದ ಹೊಸ ಉತ್ಪನ್ನ; ವರ್ತಕರಲ್ಲಿ ಹೆಚ್ಚಿದ ಗೊಂದಲ

ಚಾಕಲೇಟ್‌ ಕಹಿಯಾಗಿಸಿದ ಜಿ.ಎಸ್.ಟಿ

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

ಚಾಕಲೇಟ್‌ ಕಹಿಯಾಗಿಸಿದ ಜಿ.ಎಸ್.ಟಿ

ಹುಬ್ಬಳ್ಳಿ:  ಜಿ.ಎಸ್.ಟಿ ಭೀತಿಯಿಂದ ಸಗಟು ವ್ಯಾಪಾರಿಗಳು ಹೊಸ ಉತ್ಪನ್ನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿರುವುದರಿಂದ ಬೇಕರಿಗಳು ಚಾಕಲೇಟ್‌ಗಳಿಲ್ಲದೆ ಬಿಕೋ ಎನ್ನುತ್ತಿವೆ.

‘ಚಾಕಲೇಟ್‌ಗಳನ್ನು ಐಷಾರಾಮಿ ಉತ್ಪನ್ನಗಳ ಪಟ್ಟಿಗೆ ಸೇರಿಸುವುದರಿಂದ ಶೇ 28ರಷ್ಟು ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಚಾಕಲೇಟ್‌ ಉತ್ಪನ್ನಗಳ ಮೇಲೆ ಮೊದಲು ಶೇ 14ರಷ್ಟು ಮಾತ್ರ ತೆರಿಗೆ ಇತ್ತು. ಈಗ ಈ ಪ್ರಮಾಣ ದುಪ್ಪಟ್ಟಾಗಿದೆ. ಅದರಲ್ಲಿಯೂ ಮಾರ್ಡೆ, ಪಿಲ್ಸ್‌ಬರಿ, ಸೆಲ್‌ಬಾರ್ನ್‌ ಕಂಪೆನಿಯ ಚಾಕೊಲೇಟ್‌ಗಳ ಬೆಲೆ ದುಪ್ಪಟ್ಟಾಗಲಿದೆ’ ಎಂದು ಕೇಕ್‌ಬಾಸ್‌ ಬೇಕರಿಯ ತೇಜಸ್‌ ವೆಂಕಟಾದ್ರಿ ಹೇಳಿದರು.

‘ಜುಲೈ1ರಿಂದ ಈಚೆಗೆ ಉತ್ಪನ್ನಗಳನ್ನು ಖರೀದಿಸಲು ಸಗಟು ವ್ಯಾಪಾರಿಗಳು ಹಾಗೂ ವಿತರಕರು ಮುಂದಾಗುತ್ತಿಲ್ಲ. ಅದರ ಜೊತೆಗೆ, ಈಗಾಗಲೇ ಹಳೆಯ ದಾಸ್ತಾನು ಖಾಲಿಯಾಗಿರುವುದರಿಂದ ಬೇಕರಿಯಲ್ಲಿ ಉತ್ಪನ್ನಗಳಿಲ್ಲದೆ ಬಿಕೋ ಎನ್ನುತ್ತಿವೆ ’ ಎಂದು ಅವರು ಹೇಳಿದರು.

‘ತೆರಿಗೆ ದುಪ್ಪಟ್ಟಾಗಿರುವುದರಿಂದ ದರವೂ ಹೆಚ್ಚಾಗಲಿದೆ. ಹೊಸ ದರದಲ್ಲಿ ಸಣ್ಣ–ಪುಟ್ಟ ಬೇಕರಿಗಳು ಚಾಕೊಲೇಟ್‌ ಖರೀದಿಸುತ್ತವೆಯೋ ಇಲ್ಲವೋ ಎಂಬ ಆತಂಕ ಸಗಟು ವ್ಯಾಪಾರಿಗಳದ್ದು. ಅಲ್ಲದೆ, ಪೂರೈಕೆಯೂ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ’ ಎಂದು ತೇಜಸ್‌ ಹೇಳಿದರು.

ವರ್ತಕರಲ್ಲಿ ಗೊಂದಲ: ‘ಜಿ.ಎಸ್.ಟಿ. ಬಗ್ಗೆ ಗೊಂದಲ ಇದೆ. ಯಾರಿಗೂ ಸೂಕ್ತವಾದ ಮಾಹಿತಿಯೇ ಇಲ್ಲ. ಹಾಗಾಗಿ, ಹೊರಗಡೆಯಿಂದ ಉತ್ಪನ್ನ ತರಿಸಲು ಬೇಕರಿ ಮಾಲೀಕರು ಯೋಚಿಸುತ್ತಿದ್ದಾರೆ’ ಎಂದು ಭಗವಾನ್‌ ಸ್ವೀಟ್ಸ್‌ನ ಮಹೇಂದ್ರ ಸಿಂಗ್‌ ಠಾಕೂರ್‌ ಹೇಳಿದರು.

‘ಮೊದಲು ಬೇಕರಿ ಉತ್ಪನ್ನಗಳ ಮೇಲೆ ಶೇ 4ರಷ್ಟು ತೆರಿಗೆ ಇತ್ತು. ಈಗ ಈ ಪ್ರಮಾಣವನ್ನು ಶೇ 5ಕ್ಕೆ ಹೆಚ್ಚಿಸಲಾಗಿದೆ. ಇವುಗಳಲ್ಲಿ ಕೆಲವು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚು ಕಡಿಮೆ ಆಗುತ್ತಿದೆ. ತಂಪು ಪಾನೀಯದ ಮೇಲೆ ಶೇ 14–15ರಷ್ಟು ತೆರಿಗೆ ವಿಧಿಸಲಾಗುತ್ತಿದೆ’ ಎಂದು ಅವರು ಹೇಳಿದರು.

***

ರಸೀದಿ ಕೊಡುವ ಸಂಕಟ !

‘ಮಾರುಕಟ್ಟೆಯಲ್ಲಿ ಸರಕು ಪೂರೈಕೆ ಕಡಿಮೆಯಾಗಿರುವುದರಿಂದ ಸಹಜವಾಗಿ ವ್ಯಾಪಾರ–ವಹಿವಾಟು ಕ್ಷೀಣಿಸಿದೆ. ₹20 ಲಕ್ಷದವರೆಗೆ ತೆರಿಗೆ ಇಲ್ಲ ಎನ್ನುವುದ ನಿಜ. ಆದರೆ, ಜಿ.ಎಸ್.ಟಿ. ಬಂದ ನಂತರ ರಸೀದಿ ಕೊಡಬೇಕಾಗುತ್ತದೆ. ಅದರಲ್ಲಿಯೂ, ₹200ಕ್ಕೂ ಹೆಚ್ಚು ಮೊತ್ತದ ವ್ಯಾಪಾರ ಮಾಡಿದವರಿಗೆ ರಸೀದಿ ಕೊಡಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕೆ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವವರೆಗೂ ಬೇಕರಿ ಮಾಲೀಕರು ಉತ್ಪನ್ನಗಳನ್ನು ಖರೀದಿಸಲು ಮುಂದಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ವರ್ತಕರೊಬ್ಬರು ಹೇಳಿದರು.

‘ಮಾಲು ತರುವಾಗಲೂ ನಾವು ನಿಗದಿತ ತೆರಿಗೆ ಪಾವತಿಸಬೇಕು ಹಾಗೂ ಖರೀದಿ ಮೌಲ್ಯದ ಮೇಲೆಯೂ ತೆರಿಗೆ ಪಾವತಿಸಬೇಕು. ಹೀಗಾಗಿ, ಹೊಸದಾಗಿ ಉತ್ಪನ್ನಗಳನ್ನು ಖರೀದಿಸಲು ಯೋಚಿಸುವಂತಾಗಿದೆ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)