ಶುಕ್ರವಾರ, ಡಿಸೆಂಬರ್ 6, 2019
19 °C

ನಾಗರ ನಡೆ: ಶೌಚಾಲಯ ನಿರ್ಮಾಣಕ್ಕೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗರ ನಡೆ: ಶೌಚಾಲಯ ನಿರ್ಮಾಣಕ್ಕೆ ಹಿನ್ನಡೆ

ತೀರ್ಥಹಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಬಯಲು ಶೌಚಮುಕ್ತ ಯೋಜನೆಗೆ ‘ನಾಗರ ನಡೆ’ ನಂಬಿಕೆ ಅಡ್ಡಿಯಾಗಿದೆ.

ತಾಲ್ಲೂಕಿನ ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಬ್ಬಣಗದ್ದೆ ಹಾಗೂ ಸೀಕೆ ಗ್ರಾಮದ ಹರಿಜನ ಕಾಲೊನಿ ಪ್ರದೇಶದಲ್ಲಿ ‘ನಾಗರ ನಡೆ’ (ನಾಗರಹಾವು ಸಂಚರಿಸುವ ಪ್ರದೇಶ) ಇದೆ ಎಂಬ ಕಾರಣಕ್ಕೆ ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಮಸ್ಥರು ಒಪ್ಪುತ್ತಿಲ್ಲ.

‘ನಾಗರ ನಡೆ’ ನಂಬಿಕೆಯಿಂದಾಗಿ ಈ ಪ್ರದೇಶದಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಂಡರೆ ಕುಟುಂಬಕ್ಕೆ ಒಳ್ಳೆಯದಾಗುವುದಿಲ್ಲ ಎಂಬ ನಂಬಿಕೆ ಬೇರೂರಿದೆ. ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಶೌಚಾಲಯವನ್ನು ನಿರ್ಮಿಸಿಕೊಳ್ಳುತ್ತಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಧನರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಶೌಚಾಲಯ ಇಲ್ಲದೇ ಇರುವ 8,772 ಕುಟುಂಬಗಳನ್ನು ಗುರುತಿಸಲಾಗಿತ್ತು. ಈಗ 8,758 ಶೌಚಾಲಯಗಳು ಪೂರ್ಣಗೊಂಡಿದ್ದು, 14 ಶೌಚಾಲಯಗಳ ನಿರ್ಮಾಣ ಮಾತ್ರ ಬಾಕಿ ಉಳಿದಿದೆ. ಸರ್ಕಾರ ನೀಡುವ ಸೌಲಭ್ಯವನ್ನು ಕೂಡ ನಂಬಿಕೆಗೆ ಜೋತುಬಿದ್ದ ಜನ ತಿರಸ್ಕರಿಸುತ್ತಿದ್ದಾರೆ.

ಶೌಚಾಲಯ ನಿರ್ಮಿಸಿಕೊಳ್ಳಲು ಸಾಮಾನ್ಯ ವರ್ಗಕ್ಕೆ ₹12 ಸಾವಿರ ಹಾಗೂ ಪರಿಶಿಷ್ಟ ಜಾತಿ, ಪಂಗಡ ವರ್ಗಕ್ಕೆ ₹15 ಸಾವಿರ ಅನುದಾನ ದೊರೆಯುತ್ತಿದೆ.  ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಯಂದು ತೀರ್ಥಹಳ್ಳಿಯನ್ನು ಸಂಪೂರ್ಣ ಬಯಲು ಶೌಚಮುಕ್ತ ತಾಲ್ಲೂಕು ಎಂದು ಘೋಷಣೆ ಮಾಡಲು ತಾಲ್ಲೂಕು ಆಡಳಿತ ಯೋಚಿಸಿತ್ತು.

2016–17ನೇ ಸಾಲಿನಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ₹ 1.6 ಕೋಟಿ ಖರ್ಚಾಗಿದೆ. ಈ ಹಣದಲ್ಲಿ 1,333 ಶೌಚಾಲಯಗಳನ್ನು ನಿರ್ಮಿಸ ಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿಯ ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕ ಎಚ್‌.ಡಿ.ನವೀನ್‌ ಕುಮಾರ್‌ ಮಾಹಿತಿ ನೀಡಿದರು.

ಅಂಕಿ ಅಂಶಗಳು

8,772 ಉದ್ದೇಶಿತ ಶೌಚಾಲಯಗಳು

8,758 ಪೂರ್ಣಗೊಂಡ ಶೌಚಾಲಯಗಳು

₹ 1.6ಕೋಟಿ ಶೌಚಾಲಯ ನಿರ್ಮಾಣಕ್ಕೆ ವೆಚ್ಚ

1,333 ನಿರ್ಮಾಣಗೊಂಡ ಶೌಚಾಲಯಗಳು

* * 

‘ನಾಗರ ನಡೆ’ ನಂಬಿಕೆಯಿಂದ ಶೌಚಾಲಯ ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜನರ ಮನವೊಲಿಸಲಾಗುತ್ತಿದೆ. ಶೌಚಾಲಯ ನಿರ್ಮಿಸಿಕೊಟ್ಟರೂ ಬಳಸುತ್ತಿಲ್ಲ.

ಧನರಾಜ್‌, ಕಾರ್ಯನಿರ್ವಹಣಾಧಿಕಾರಿ. ತಾ.ಪಂ, ತೀರ್ಥಹಳ್ಳಿ.

 

ಪ್ರತಿಕ್ರಿಯಿಸಿ (+)