ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರವಸ್ಥೆಯಲ್ಲಿ ಶಿಕ್ಷಕರ ವಸತಿಗೃಹಗಳು

ಮುಶಿಗೇರಿ ಪ್ರಾಥಮಿಕ ಶಾಲೆ ಶಿಕ್ಷಕರಿಗಾಗಿ ನಿರ್ಮಾಣ; ಮೂಲಸೌಕರ್ಯಗಳಿಂದ ವಂಚಿತ ತಾಣ
Last Updated 12 ಜುಲೈ 2017, 5:46 IST
ಅಕ್ಷರ ಗಾತ್ರ

ಗಜೇಂದ್ರಗಡ: ಒಡೆದ ಕಿಟಕಿ ಗಾಜುಗಳು, ಮದ್ಯಪಾನ ಮಾಡಿ ಬಿಸಾಡಿರುವ ಮದ್ಯದ ಬಾಟಲಿಗಳು, ರಾಶಿ ರಾಶಿ ಕಸ, ಗಿಡಗಂಟಿಗಳ ನಡುವೆ ಹುದುಗಿರುವ ವಸತಿ ಗೃಹಗಳು... ಇದು ಸಮೀಪದ ಮುಶಿಗೇರಿ ಗ್ರಾಮದ ಪ್ರಾಥಮಿಕ ಶಿಕ್ಷಕರಿ ಗಾಗಿ ನಿರ್ಮಿಸಿರುವ ವಸತಿ ಗೃಹಗಳ ಕಥೆ!

ಸಮೀಪದ ಮುಶಿಗೇರಿಯಲ್ಲಿ ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಶಾಲಾ ಶಿಕ್ಷಕರ ವಸತಿಗಾಗಿ ನಿರ್ಮಿಸಿರುವ ಎಂಟು ಮನೆಗಳ ಸಂಕೀರ್ಣ ಗುರು ಭವನದ ಕಥೆ.
ಹಳ್ಳಿಗಳಲ್ಲಿ ಶಾಲಾ ಶಿಕ್ಷಕರಿಗೆ ಇರಲು ಬಾಡಿಗೆ ಮನೆಗಳು ಸಿಗುವುದಿಲ್ಲ. ಬೇಕೆಂದರೆ ಇಲ್ಲಿಂದ ಸುಮಾರು 8 ಕಿ.ಮೀ ದೂರದ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ಇರಬೇಕಾಗುತ್ತದೆ.

ಇದರಿಂದ ಶಿಕ್ಷಕರಿಗೂ ಓಡಾಡಲು ತೊಂದರೆ. ಜೊತೆಗೆ ಮಕ್ಕಳಿಗೂ ಶಾಲಾ ಅವಧಿಯ ನಂತರ ಶಿಕ್ಷಕರು ಸಿಗುವುದಿಲ್ಲ. ಹೀಗಾಗಿ ಶಿಕ್ಷಕರಿಗೆ ಅನುಕೂಲವಾಗಲಿ ಎಂದು 2011ರ ಸೆ. 2ರಂದು ಅಂದಿನ ಶಾಸಕ ಕಳಕಪ್ಪ ಬಂಡಿ ಸಾರ್ವಜನಿಕ ಶಿಕ್ಷಣ ಇಲಾಖೆ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಸುಮಾರು ₹ 76 ಲಕ್ಷ ವೆಚ್ಚದಲ್ಲಿ 8 ಶಿಕ್ಷಕರ ವಸತಿ ಗೃಹಗಳ ಭೂಮಿಪೂಜೆ ನೆರವೇರಿಸಿದ್ದರು.

2014ರ ಜುಲೈ 19ರಂದು ಶಾಸಕರಾಗಿದ್ದ ಜಿ.ಎಸ್. ಪಾಟೀಲ ಉದ್ಘಾಟನೆ ನೆರವೇರಿಸಿ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದ್ದರು.

ಆದರೆ, ಇಂದು ಈ ವಸತಿ ಗೃಹಗಳ ಸುತ್ತ ಮುತ್ತ ಮುಳ್ಳು ಕಂಟಿಗಳು ಬೆಳೆದು ಹಾವು ಚೇಳುಗಳ ಆವಾಸ ಸ್ಥಾನವಾಗಿವೆ. ಮೂಲ ಸೌಕರ್ಯಗಳಿಂದ ವಂಚಿತವಾ ಗಿದ್ದು, ಜನವಸತಿಯಿಂದ ದೂರವಿರುವು ದರಿಂದ ಇಲ್ಲಿ ಶಿಕ್ಷಕರು ವಾಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಹೀಗಾಗಿ, ವಸತಿ ಗೃಹಗಳು ಪುಢಾರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಕಿಡಿಗೇಡಿ ಗಳು ಕಿಟಕಿ ಗಾಜು, ನೀರಿನ ಟ್ಯಾಂಕ್‌ ಒಡೆದು ಹಾಕಿದ್ದು,  ವಸತಿ ಗೃಹಗಳು ಅಕ್ಷರಶಃ ಕಸದ ತೊಟ್ಟಿಯಂತಾಗಿವೆ. ವಸತಿಗೃಹದಲ್ಲಿನ ಸಮಸ್ಯೆ ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರು  ಹಲವು ಬಾರಿ  ಬಿ.ಇ.ಓ ಮತ್ತು ಡಿ.ಡಿ.ಪಿ.ಐ ಗಳಿಗೆ  ಮನವಿ ಸಲ್ಲಿಸಿದ್ದಾರೆ.

‘ಈ ವಸತಿ ಗೃಹಗಳು ನಮ್ಮ ಶಾಲೆಯ ಆವರಣದಲ್ಲಿಲ್ಲ. ಜನವಸತಿಯಿಂದ ದೂರ ಇದ್ದು, ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಈ ವಸತಿ ಗೃಹಗಳನ್ನು ಬೇರೆಯವರಿಗೆ ನೀಡಿ ಎಂದು ಹಲವು ಬಾರಿ ಮನವಿ ಮಾಡಿರುವೆ’ ಎಂದು ಶಿಕ್ಷಕ ಎನ್.ಆರ್. ಬೇವಿನಮರದ ತಿಳಿಸಿದರು.

‘ನಾನು ಈ ವಸತಿ ಗೃಹಗಳಲ್ಲಿ ಒಂದು ವರ್ಷ ವಾಸವಾಗಿದ್ದೆ. ಆದರೆ, ಇಲ್ಲಿ ಮೂಲ ಸೌಕರ್ಯಗಳಿಲ್ಲದ ಕಾರಣ, ಗಿಡ–ಗಂಟಿಗಳಿರುವುದರಿಂದ ಹಾವು ಚೇಳುಗಳು ಹೆಚ್ಚಾಗಿದ್ದು,  ವಾಸಿಸಲು ಆಗಲಿಲ್ಲ. ಆದ್ದರಿಂದ ನಾನು ಬೇರೆ ಕಡೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ವಸತಿ ಗೃಹಗಳಲ್ಲಿ ವಾಸವಿರದಿದ್ದರೂ ಮೂಲ ವೇತನದಲ್ಲಿ ಶೇ 10ರಷ್ಟನ್ನು ಶಿಕ್ಷಣ ಇಲಾಖೆ ಕಡಿತಗೊಳಿಸುತ್ತಿರುವುದ ರಿಂದ ಶಿಕ್ಷಕರು ಮುಶಿಗೇರಿ ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಎ.ಎಸ್. ಬಣಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವಸತಿ ಗೃಹಗಳು ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಆವರಣ ದಲ್ಲಿ ಇರುವುದರಿಂದ ಆಯಾ ಕಾಲೇಜು ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಕೊಟ್ಟು ನಮ್ಮ ವೇತನದಲ್ಲಿ ಶೇ 10ರಷ್ಟು ಹಣ ಕಡಿತಗೊಳಿಸುವುದನ್ನು ನಿಲ್ಲಿಸಬೇಕು ಎಂದು ಶಿಕ್ಷಕರಾದ ಎಂ.ಎಚ್.ಪೂಜಾರ, ಬಿ.ಎಂ. ಚೌಡಿ, ವಿ.ವಿ. ಗಟ್ಟಿ, ಜೆ.ಎಚ್‌. ಚಿಲ್ಲಾಪುರ ಒತ್ತಾಯಿಸುತ್ತಾರೆ.

***

ಶಿಕ್ಷಣ ಇಲಾಖೆಯಿಂದ ಎಚ್‌.ಆರ್.ಎಂ.ಎಸ್ ಯೋಜನೆ ಅಡಿಯಲ್ಲಿ ಬರುವ ಹಣವನ್ನು ನೀರು ಮತ್ತು ಕರೆಂಟ್ ಬಿಲ್‌ಗಾಗಿ ಪಾವತಿಸುತ್ತಿದ್ದೇವೆ
ಬಿ.ವೈ. ಹುದ್ದಾರ, ಪಿಡಿಒ, ಮುಶಿಗೇರಿ

***

ಅಲ್ಲಿ ಎಲ್ಲವೂ ಸರಿಯಾಗಿದೆ. ಅದರ ನಿರ್ವಹಣೆಗಾಗಿ ಗ್ರಾಮ ಪಂಚಾಯಿತಿಯವರಿಗೆ ಇಲಾಖೆಯಿಂದ ಅನುದಾನವನ್ನು ಕೊಡುತ್ತಿದ್ದೇವೆ
ಡಿ.ಐ. ಅಸುಂಡಿ, ಕ್ಷೇತ್ರ ಶಿಕ್ಷಣಾಧಿಕಾರಿ, ರೋಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT