ಬುಧವಾರ, ಫೆಬ್ರವರಿ 19, 2020
24 °C

ರಾಂಪುರ ಗ್ರಾಮಕ್ಕೆ ಬೇಕಿದೆ ಸರ್ಕಾರಿ ಪ್ರೌಢಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಪುರ ಗ್ರಾಮಕ್ಕೆ ಬೇಕಿದೆ ಸರ್ಕಾರಿ ಪ್ರೌಢಶಾಲೆ

ಮೊಳಕಾಲ್ಮುರು: ತಾಲ್ಲೂಕಿನ ದೊಡ್ಡ ಗ್ರಾಮವಾದ ರಾಂಪುರದಲ್ಲಿ ವಿದ್ಯಾರ್ಥಿ ಗಳಿಗೆ ಪ್ರೌಢ ಸರ್ಕಾರಿ ಶಿಕ್ಷಣ ವ್ಯವಸ್ಥೆ ಇಲ್ಲದ ಕಾರಣ ತೀವ್ರ ತೊಂದರೆಯಾಗಿದೆ. ದೇವಸಮುದ್ರ ಹೋಬಳಿ ವ್ಯಾಪ್ತಿಯಲ್ಲಿನ 40 ಹಾಗೂ ಕೂಡ್ಲಿಗಿ ತಾಲ್ಲೂಕಿನ 10–15, ಸಂಡೂರು ತಾಲ್ಲೂಕಿನ 10, ಆಂಧ್ರದ ಗಡಿ ರಾಯ ದುರ್ಗ ತಾಲ್ಲೂಕಿನ ಹಲವು ಗ್ರಾಮಗಳಿಗೆ ರಾಂಪುರವೇ  ಕೇಂದ್ರಸ್ಥಾನವಾಗಿದೆ.

ಆದರೆ, ಇಲ್ಲಿ ಸರ್ಕಾರಿ ಪ್ರೌಢಶಿಕ್ಷಣ ವ್ಯವಸ್ಥೆಯೂ ಇಲ್ಲದ ಕಾರಣ ವಿದ್ಯಾರ್ಥಿಗಳು ಮೊಳಕಾಲ್ಮುರು, ಬಳ್ಳಾರಿ, ದೇವಸಮುದ್ರ, ನಾಗಸಮುದ್ರವನ್ನು ಅವಲಂಬಿ ಸಬೇಕಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಿಕ್ಷಣವೇ ಇಲ್ಲಿ ಕೊನೆ ಎಂದು ವಿದ್ಯಾರ್ಥಿಗಳಾದ ಶಾರದಾ, ಸತ್ಯವತಿ, ಮಂಜುನಾಥ್‌, ನಟರಾಜ ದೂರಿದ್ದಾರೆ.

ಜಿಲ್ಲೆಯಲ್ಲಿ ರಾಂಪುರ ಹತ್ತಾರು ವರ್ಷಗಳಿಂದ ರಾಜಕೀಯ ಹಾಗೂ ಸಾಮಾಜಿಕ ಶಕ್ತಿಕೇಂದ್ರ ಎಂದು ಬಿಂಬಿಸಿಕೊಂಡಿದೆ. 15 ಸಾವಿರ ಜನಸಂಖ್ಯೆ ಹೊಂದಿದೆ. ಆದರೆ, ಇಲ್ಲಿ ಸರ್ಕಾರಿ ಪ್ರೌಢಶಿಕ್ಷಣ, ಪಿಯು, ಪದವಿ ಶಿಕ್ಷಣ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ದೂರದ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ನಿತ್ಯ ನೂರಾರು ಜನ ಬಳ್ಳಾರಿಗೆ ಓಡಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡರು.

ರಾಂಪುರ ಮಾಜಿ ಶಾಸಕರಾದ ದೊಡ್ಡಬಸಣ್ಣ ಹಾಗೂ ಎನ್‌.ವೈ. ಗೋಪಾಲಕೃಷ್ಣ ಹಾಗೂ ಮಾಜಿ ಸಂಸತ್‌ ಸದಸ್ಯ ಎನ್‌.ವೈ.ಹನುಮಂತಪ್ಪ ಅವರ ಸ್ವಗ್ರಾಮ. ಜನಪ್ರತಿನಿಧಿಗಳು ಹಲವು ಬಾರಿ ಇಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸುವುದಾಗಿ ಭರವಸೆಗಳನ್ನು  ನೀಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಯಾತನೆ ಪಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

‘ಸರ್ಕಾರಕ್ಕೆ ಮನವಿ ಮಾಡಲಾಗಿದೆ’
ರಾಂಪುರದಲ್ಲಿ ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ಪ್ರೌಢಶಾಲೆ ಆರಂಭ ತುರ್ತು ಅಗತ್ಯವಿದ್ದು, ಬೇಗ ಆರಂಭಿಸುವಂತೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಅನುಮೋದನೆ ಸಿಕ್ಕಿಲ್ಲ, ಈ ವರ್ಷ ಮತ್ತೆ ಸಲ್ಲಿಸಲಾಗುವುದು ಎಂದು ಬಿಇಒ ಅಬ್ದುಲ್‌ ಬಷೀರ್‌ ಹೇಳಿದರು.

ಖಾಸಗಿ ಶಾಲೆಗಳು..
ಜನಪ್ರತಿನಿಧಿಗಳು, ರಾಜಕೀಯ ಮುಖಂಡರಿಗೆ ಸೇರಿದ ಖಾಸಗಿ ಶಾಲಾ–ಕಾಲೇಜುಗಳು ಗ್ರಾಮದಲ್ಲಿವೆ. ಇದು ಸರ್ಕಾರಿ ವ್ಯವಸ್ಥೆ ಜಾರಿಗೆ ಅಡ್ಡಿಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಬಡ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟು ಕೊಂಡು ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಬಸ್‌ ಸಂಚಾರ ಇಲ್ಲ
ಹೋಬಳಿ ಗ್ರಾಮಗಳಿಂದ ರಾಂಪುರಕ್ಕೆ ಬಂದುಹೋಗಲು ಬಸ್‌ ವ್ಯವಸ್ಥೆ ಇಲ್ಲದ ಕಾರಣ ಆಟೊಗಳಲ್ಲಿ ಜೀವಭಯದಲ್ಲಿಯೇ ವಿದ್ಯಾರ್ಥಿಗಳು ಪ್ರಯಾಣ ಮಾಬೇಕಿದೆ. ಈಚೆಗೆ ಇಲ್ಲಿ ನಡೆದ ಭೀಕರ ಆಟೊ ಅಪಘಾತದ ನಂತರವೂ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಇಲ್ಲಿ ‘ಶಿಕ್ಷಣ ಶಿಕ್ಷೆ’ಯಂತಹ ಸ್ಥಿತಿ ನಿರ್ಮಾಣವಾಗಿದೆ.

*  *

ಈ ಭಾಗದಲ್ಲಿ ಸರ್ಕಾರಿ ಜಾಗ ಲಭ್ಯವಿಲ್ಲದ ಕಾರಣ ವಿಳಂಬವಾಗಿದೆ. ಈಗ ದೇವಸಮುದ್ರ ಬಳಿ ಸ್ಥಳ ಹುಡುಕಲಾಗುತ್ತಿದೆ.
ಎನ್‌.ವೈ.ಗೋಪಾಲಕೃಷ್ಣ
ಡಾ.ನಂಜುಡಪ್ಪ ವರದಿ ಸಮಿತಿ ಅಧ್ಯಕ್ಷ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)