ಶುಕ್ರವಾರ, ಡಿಸೆಂಬರ್ 13, 2019
20 °C

ಶಿಕ್ಷಕರ ಕೊರತೆ: ಶೈಕ್ಷಣಿಕ ಚಟುವಟಿಕೆ ಕುಂಠಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಕರ ಕೊರತೆ: ಶೈಕ್ಷಣಿಕ ಚಟುವಟಿಕೆ ಕುಂಠಿತ

ಭಾಲ್ಕಿ: ತಾಲ್ಲೂಕು ಕೇಂದ್ರದಿಂದ 20 ಕಿ.ಮೀ ದೂರದಲ್ಲಿರುವ ಖಟಕ ಚಿಂಚೋಳಿ ಗ್ರಾಮದ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ವಿವಿಧ ಸಮಸ್ಯೆಗಳಿಂದ ಸೊರಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಕುಂಠಿತಗೊಂಡಿದೆ.ಸಮಾಜ ವಿಜ್ಞಾನ, ವಿಜ್ಞಾನ, ದೈಹಿಕ ಶಿಕ್ಷಣ, ಕಂಪ್ಯೂಟರ್‌ ಹಾಗೂ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೆಟ್ಟು ಬಿದ್ದಿದೆ.

ಪ್ರಸ್ತುತ ಶಾಲೆಯಲ್ಲಿ 8 ರಿಂದ 10ನೇ ತರಗತಿವರೆಗಿನ ಮೂರು ತರಗತಿಗಳಲ್ಲಿ ಒಟ್ಟು 231 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕ ಮಾಡಿಲ್ಲ. ಸರ್ಕಾರದಿಂದ ಶಾಲೆಗೆ ಸಾಕಷ್ಟು ಕಂಪ್ಯೂಟರ್‌ ವಿತರಿಸಲಾಗಿದೆ. ಶಿಕ್ಷಕರಿಲ್ಲದೆ ಕಂಪ್ಯೂಟರ್‌ಗಳು ಧೂಳು ತಿನ್ನುತ್ತಿವೆ.

ಖಾಸಗಿ ಶಾಲೆಗಳ ಹಾವಳಿಯಿಂದ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಸೊರಗುತ್ತಿವೆ. ಇಂತಹದರಲ್ಲಿ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಉತ್ತಮವಾಗಿದ್ದರೂ ಶಿಕ್ಷಕರು ಮಾತ್ರ ಇಲ್ಲ.

ಅನೇಕ ಸಮಸ್ಯೆಗಳ ನಡುವೆಯೂ 2015–16ನೇ ಸಾಲಿನಲ್ಲಿ ಈ ಶಾಲೆಯ ವಿದ್ಯಾರ್ಥಿಗಳಾದ ಮೇಘರಾಣಿ ಅಶೋಕ ಶೇ 91, ಶ್ವೇತಾ ಸತೀಶ ಶೇ 86, ಕೈಲಾಸ ಸುರೇಶ 85 ಪ್ರತಿಶತ ಅಂಕ ಪಡೆದು ಪ್ರತಿಭೆ ಮೆರೆದಿದ್ದಾರೆ.

ಗ್ರಾಮೀಣ ಮಕ್ಕಳಲ್ಲಿಯೂ ಪ್ರತಿಭೆ ಇದೆ. ಆದರೆ ಪ್ರೋತ್ಸಾಹ ಮತ್ತು ಸೌಲಭ್ಯದ ಕೊರತೆಯಿಂದ ಪ್ರತಿಭಾ ಪ್ರದರ್ಶನಕ್ಕೆ ಅಡ್ಡಿಯಾಗಿದೆ. ಶಿಕ್ಷಕರ ಕೊರತೆಯಿಂದ 2016–17ನೇ ಸಾಲಿನಲ್ಲಿ ಶಾಲೆಯ ಫಲಿತಾಂಶ ಕೇವಲ ಶೇ 60 ರಷ್ಟು ಬಂದಿದೆ. 2015–16 ರಲ್ಲಿ ಶೇ 68 ರಷ್ಟಿತ್ತು ಎನ್ನುತ್ತಾರೆ ಪಾಲಕರು.

ದೈಹಿಕ ಶಿಕ್ಷಣ ಶಿಕ್ಷಕ, ಸುಸಜ್ಜಿತ ಆಟದ ಮೈದಾನ ಇಲ್ಲದಿರುವುದರಿಂದ ಮಕ್ಕಳ ಕ್ರೀಡಾ ಚಟುವಟಿಕೆಗೆ ತೊಂದರೆಯಾಗಿದೆ. ಶಾಲೆಯಲ್ಲಿ ಎರಡು ಶೌಚಾಲಯಗಳಿದ್ದು, ಅವುಗಳು ಸಿಬ್ಬಂದಿ ಬಳಕೆಗೆ ಸೀಮಿತವಾಗಿದೆ. ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲ. ಹಾಗಾಗಿ, ಮಕ್ಕಳು ನರಕಮಯ ಸಂಕಟ ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

‘ಶಾಲೆಯ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕಳೆದ ವರ್ಷ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದೇವೆ. ನಮ್ಮ ಎಲ್ಲ ಸಮಸ್ಯೆಗಳನ್ನು ಶೀಘ್ರ ಪರಿಹರಿಸದಿದ್ದಲ್ಲಿ  ತರಗತಿ ಬಹಿಷ್ಕರಿಸಿ ಮತ್ತೆ ಪ್ರತಿಭಟನೆ ನಡೆಸಲಾಗುವುದು’ ಎಂದು ವಿದ್ಯಾರ್ಥಿಗಳು ಎಚ್ಚರಿಸುತ್ತಾರೆ.

ಜುಲೈ 1ರಂದು ನಡೆದ ಜನಸ್ಪಂದನೆ ಸಭೆಯಲ್ಲಿ ಸಮಸ್ಯೆಗಳ ಕುರಿತು ತಹಶೀಲ್ದಾರ್‌ ಮನೋಹರ ಸ್ವಾಮಿ ಅವರ ಗಮನವೂ ಸೆಳೆಯಲಾಗಿದೆ. ಆದರೆ ಕಾಟಾಚಾರಕ್ಕೆ ನಡೆದ ಸಭೆಯಲ್ಲಿ ಪ್ರಮುಖ ಇಲಾಖೆ ಅಧಿಕಾರಿಗಳು ಗೈರಾಗಿದ್ದರು ಎಂದು ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮದು ಗ್ರಾಮ ಪಂಚಾಯಿತಿ ಕೇಂದ್ರ ಆಗಿದೆ. ನಮ್ಮ ಗ್ರಾಮದವರೇ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರಿದ್ದಾರೆ. ಆದ್ಯಾಗೂ ನಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯ  ಅತಂತ್ರವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ’ ಗ್ರಾಮಸ್ಥರು.

* * 

ಶಿಕ್ಷಕರ ಕೊರತೆ ಎದುರಿಸುತ್ತಿರುವ ಶಾಲೆಗಳಿಗೆ ಶೀಘ್ರದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು.

ಸಿ.ನಾಗರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ

 

ಪ್ರತಿಕ್ರಿಯಿಸಿ (+)