ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನನಕ್ಕೊಂದು ಸಸಿ ನಾಟಿ ಕಡ್ಡಾಯ

ಕಾಯ್ದೆ ಜಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಸಿದ್ಧತೆ
Last Updated 12 ಜುಲೈ 2017, 6:01 IST
ಅಕ್ಷರ ಗಾತ್ರ

ಹಾವೇರಿ: ಸಾಲುಮರದ ತಿಮ್ಮಕ್ಕನವರನ್ನು ಗೌರವಿಸಿ, ‘2 ನಿಮಿಷದಲ್ಲಿ 12 ಸಾವಿರ ಸಸಿ ನೆಡುವ ಕಾರ್ಯಕ್ರಮ’ ನಡೆಸಿದ ಅಗಡಿಯ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ. ‘ಜನನಕ್ಕೊಂದು ಸಸಿ ನಾಟಿ ಕಡ್ಡಾಯ’ ಎಂಬ ಕಾಯಿದೆ ಜಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಿದ್ಧತೆ ನಡೆಸಿದ್ದಾರೆ.

ಈ ಕುರಿತು ಮಂಗಳವಾರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಈ ಬಗ್ಗೆ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಮೂಲಕ ಮಾತುಕತೆ ನಡೆದಿದೆ. ಬಸವ ತತ್ವ, ಸಸಿ ಸಂರಕ್ಷಣೆಯ ಭಕ್ತಿ, ಪರಿಸರ ಸಂರಕ್ಷಣೆ ಕುರಿತು ಪ್ರಧಾನಿ ಅವರಿಗೆ ಮಾಹಿತಿ ನೀಡಿ, ‘ಜನನಕ್ಕೊಂದು ಸಸಿ ನಾಟಿ ಕಡ್ಡಾಯ’ ಎಂಬ ಕಾಯಿದೆ ಜಾರಿಗೆ ಮನವಿ ಮಾಡುತ್ತೇವೆ. ಅಲ್ಲದೇ, ಜಯಂತಿ ಮತ್ತು ಸರ್ಕಾರಿ ಕಾರ್ಯಕ್ರಮಕ್ಕೊಂದು ಸಸಿ ನಾಟಿ ಮಾಡಲು ಆದೇಶಿಸಬೇಕು ಎಂದೂ ಮನವಿ ಸಲ್ಲಿಸುತ್ತೇವೆ’ ಎಂದರು.

‘ಪರಿಸರ ಜಾತ್ರೆ’ಯಲ್ಲಿ ಭಕ್ತರ ಸಹಕಾರದ ಮೂಲಕ ಒಟ್ಟು 13,500 ಸಸಿಗಳನ್ನು ವಿತರಿಸಿ, ಈ ಪೈಕಿ 12 ಸಾವಿರ ಸಸಿಗಳನ್ನು 2 ನಿಮಿಷದಲ್ಲಿ ಮಠವು ನಾಟಿ ಮಾಡಿಸಿದೆ. ಆದರೆ, ಪ್ರತಿ ಗಿಡಕ್ಕೆ ‘ಟ್ರೀ ಗಾರ್ಡ್’, ಬೇಸಿಗೆಯಲ್ಲಿ ನೀರಿನ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ’ ಎಂದರು.

‘ಅಲ್ಲಿ ತನಕ, ಪ್ರತಿ ಹಳ್ಳಿಯಲ್ಲಿ 10 ಸದಸ್ಯರ ‘ಬಸವ ಸಸಿ ಸ್ವಯಂ ಸೇವಕರ ತಂಡ’ವನ್ನು ರಚಿಸಿ, ನಾಟಿ ಮಾಡಿದ ಸಸಿಗಳಿಗೆ ನೀರುಣಿಸಲಾಗುವುದು. ಮುಳ್ಳುಗಂಟಿಯ ಬೇಲಿ ಹಾಕಲಾಗುವುದು. ಒಟ್ಟು, 33 ಗ್ರಾಮ ಪಂಚಾಯ್ತಿಗಳ 40 ಹಳ್ಳಿಗಳಲ್ಲಿ ಈ ಕಾರ್ಯ ನಡೆಯಲಿದೆ’ ಎಂದರು.

ಪ್ರಾರ್ಥನೆಗೆ ಫಲ ಸಿಗಬೇಕು: ‘ರೈತರು ಗೊಬ್ಬರ, ಬೀಜ, ಕೃಷಿ ಸಲಕರಣೆ ಖರೀದಿಸುತ್ತಾರೆ. ಆದರೆ, ಮಳೆಗಾಗಿ ದೇವರನ್ನು ಪ್ರಾರ್ಥಿಸುತ್ತಾರೆ. ಈ ಅನ್ನದಾತರ ‘ಭಕ್ತಿ’ಗೆ ಸ್ಪಂದಿಸುವುದು ಗುರುವಿನ ಕರ್ತವ್ಯ. ಅದಕ್ಕಿರುವ ಏಕೈಕ ಪರಿಹಾರವೇ ‘ಪರಿಸರ ಸಂರಕ್ಷಣೆ’. ಕೇವಲ ಸಸಿ ನಾಟಿ ಮಾಡಿದರೆ ಸಾಲದು. ಅದನ್ನು ಸಾಕಿ ಬೆಳೆಸಬೇಕು. ಅದಕ್ಕಾಗಿ ದೈವೀ ಭಾವನೆಯಿಂದ ‘ಬಸವ ಸಸಿ’ ನಾಮಕರಣ ಮಾಡಿ, ಸಂಸ್ಕಾರ ನೀಡಲಾಯಿತು’ ಎಂದರು.

‘ಹಣ್ಣು ನೀಡುವ ನೇರಳೆ, ಹತ್ತಿ, ಹುಣಸೆ, ಪೇರಳೆ ಮತ್ತಿತರ ಸಸಿಗಳನ್ನೇ ನಾಟಿ ಮಾಡಲಾಗಿದ್ದು, ಇದರಿಂದ ಪ್ರಾಣಿ –ಪಕ್ಷಿಗಳ ರಕ್ಷಣೆಯೂ ಸಾಧ್ಯ’ ಎಂದರು.

‘ನಂಬಿಕೆ ಹಾಗೂ ಧಾರ್ಮಿಕ ಭಾವನೆಗಳು ವೈಯಕ್ತಿಕವಾಗಿರುತ್ತವೆ. ಆದರೆ, ಕಾಣುವ ದೇವರಾದ ‘ಪರಿಸರ ಸಂರಕ್ಷಣೆ’ ಮೂಲಕ ನಾವು ಕೃಪೆಗೆ ಪಾತ್ರರಾಗಬಹುದು. ಈ ನಿಟ್ಟಿನಲ್ಲಿ ನಮ್ಮ ಗುರುಗಳಾದ ಚನ್ನಬಸವ ಸ್ವಾಮೀಜಿ ಅವರ 4ನೇ ಪುಣ್ಯಸ್ಮರಣೆಗೆ ‘ಸಸಿ ನಾಟಿ’ ಯನ್ನು ಹಮ್ಮಿಕೊಂಡೆವು. ಜೋಳಿಗೆ ಹಿಡಿಯುವ ಗುರುವಿಗೆ, ಭಕ್ತರು ದೇಣಿಗೆ ನೀಡುವಷ್ಟು ಸಾಮರ್ಥ್ಯ ದೊರಕಿಸುವ ಶಕ್ತಿ ಇರಬೇಕು. ಅದಕ್ಕಾಗಿ ‘ಮಳೆ’ ಬರಿಸಲು ವೈಜ್ಞಾನಿಕ ಹಾಗೂ ವೈಚಾರಿಕ ಪ್ರಯತ್ನ ನಡೆಸಬೇಕು’ ಎಂದರು.

***

‘ನೀರು ಹಾಕಿ: ನೆನಪಿಸಲೊಂದು ಕರೆ’

ನಾಟಿ ಮಾಡಿದ ಸಸಿಗಳಿಗೆ ಪ್ರತಿನಿತ್ಯ ನೀರುಣಿಸಲು ನೆನಪಿಸುವ ‘ವಾಯಿಸ್ ಕಾಲ್ ಸಿಸ್ಟಮ್‌’ ಜಾರಿಗೆ ಬರಲಿದೆ. ಆ ಮೂಲಕ ‘ಬಸವ ಸಸಿ’ ತಂಡದ ಸದಸ್ಯರಿಗೆ ಪ್ರತಿನಿತ್ಯ ಬೆಳಿಗ್ಗೆ ‘ಕರೆ’ ಹೋಗಲಿದೆ. ಬೆಂಗಳೂರಿನ ನೊವಲ್‌ರಿಟಿ ಕಮ್ಯೂನಿಕೇಶನ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುತ್ತಿದೆ. 
‘ಏಕಕಾಲದಲ್ಲಿ 12 ಸಾವಿರ ಸದಸ್ಯರಿಗೆ ಕರೆ ಹೋಗಲಿದ್ದು, ‘ಸಸಿಗೆ ನೀರು ಹಾಕಿ’ ಎಂದು ಸ್ವಾಮೀಜಿಯ ಮುದ್ರಿತ ಧ್ವನಿ ಮೂಲಕ ತಿಳಿಸಲಾಗುತ್ತದೆ’ ಎಂದು ಸಂಸ್ಥೆಯ ಪ್ರಕಾಶ್ ಜಿ.ಡಿ ತಿಳಿಸಿದರು.

***

‘ಬಿಎಸ್‌ವೈ ಮೂಲಕ ಮೋದಿ ಭೇಟಿ’
‘ಮುಂದಿನ ಸಂಸತ್‌ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಗಡಿಯ ಗುರುಲಿಂಗ ಸ್ವಾಮೀಜಿ ಭೇಟಿ ಮಾಡುವ ಕುರಿತು ಬಿ.ಎಸ್. ಯಡಿಯೂರಪ್ಪ ಅವರ ಮೂಲಕ  ಪ್ರಯತ್ನ ನಡೆದಿದೆ. ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.

***

‘ಶ್ರಾವಣದಲ್ಲಿ ಶೌಚಾಲಯ... ’
ಅಗಡಿ ಗ್ರಾಮದಲ್ಲಿ ಸುಮಾರು 3 ಸಾವಿರ ಮನೆಗಳಿದ್ದು, 434 ಮನೆಗಳಿಗೆ ಶೌಚಾಲಯ ಇಲ್ಲ. ಶ್ರಾವಣದಲ್ಲಿ ಈ ಮನೆಗಳಿಗೆ ಭೇಟಿ ನೀಡಿ, ಶೌಚಾಲಯ ನಿರ್ಮಿ ಸುವಂತೆ ಪ್ರಮಾಣ ಮಾಡಿಸುವ ಹಾಗೂ ಅಗತ್ಯ ಸಹಕಾರ ನೀಡುವ ಯೋಜನೆಯನ್ನು ಮಠ ಹಮ್ಮಿಕೊಂಡಿದೆ. ಅಲ್ಲದೇ, ‘ಪ್ರತಿಮನೆಗೆ ಮಳೆಕೊಯ್ಲು’ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT