ಸೋಮವಾರ, ಡಿಸೆಂಬರ್ 16, 2019
23 °C

ನೀರು ಇಂಗಿಸಲು ‘ಇಂಗುಗುಂಡಿ’ ನಿರ್ಮಾಣ

ಸುಭಾಸ ಎಸ್. ಮಂಗಳೂರ Updated:

ಅಕ್ಷರ ಗಾತ್ರ : | |

ನೀರು ಇಂಗಿಸಲು ‘ಇಂಗುಗುಂಡಿ’ ನಿರ್ಮಾಣ

ಕಲಬುರ್ಗಿ: ಕೆರೆ ದಂಡೆಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ, ನೀರು ಇಂಗಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ತಾಲ್ಲೂಕು ಪಂಚಾಯಿತಿ ಯಶಸ್ವಿಯಾಗಿದೆ.

ಉದ್ಯೋಗ ಖಾತರಿ ಯೋಜನೆಯಡಿ ತಾಲ್ಲೂಕಿನ ಭೀಮಳ್ಳಿ, ಭೂಪಾಲ ತೆಗನೂರ, ಡೊಂಗರಗಾಂವ್, ಹರಸೂರ, ಕವಲಗಾ (ಬಿ), ಮರಗುತ್ತಿ, ಮೇಳಕುಂದಾ (ಬಿ), ನಾಗೂರ, ಓಕಳಿ, ಪಟ್ಟಣ, ಸಣ್ಣೂರ, ತಾಜಸುಲ್ತಾನಪುರ ಹಾಗೂ ಹತಗುಂದ ಗ್ರಾಮಗಳ ಕೆರೆ ದಂಡೆಗಳಲ್ಲಿ ಇಂಗುಗುಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಈಗ ಆ ಗುಂಡಿಗಳೆಲ್ಲವೂ ಮಳೆ ನೀರಿನಿಂದ ಭರ್ತಿಯಾಗಿವೆ.

ಮಾರ್ಚ್‌ನಿಂದ ಮೇ ಅಂತ್ಯದವರೆಗೆ 49,294 ಮಾನವ ದಿನಗಳನ್ನು ಬಳಕೆ ಮಾಡಿಕೊಂಡು ಇಂಗುಗುಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಾರ್ಮಿಕರಿಗೆ ₹1.10 ಕೋಟಿ ಕೂಲಿ ಪಾವತಿಸಲಾಗಿದೆ. ಈ ಯೋಜನೆಯಿಂದ ಗುಳೆ ತಪ್ಪಿಸುವ ಜತೆಗೆ ಸ್ಥಳೀಯವಾಗಿ ಉದ್ಯೋಗ ನೀಡಿರುವುದರಿಂದ ಗ್ರಾಮಸ್ಥರೂ ಖುಷಿಯಾಗಿದ್ದಾರೆ.

ಎಷ್ಟು ಅಳತೆ?: ಒಂದೊಂದು ಕೆರೆ ದಂಡೆಯಲ್ಲಿ ಸುಮಾರು 200ರಿಂದ 300 ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಇವು 10X8 ಅಡಿ ವಿಸ್ತೀರ್ಣ ಹೊಂದಿದ್ದು, ಒಂದು ಅಡಿ ಆಳ ಇವೆ. ಈ ಗುಂಡಿಗಳಿಂದ 52,923 ಕ್ಯೂಬಿಕ್ ಮೀಟರ್ ಮಣ್ಣನ್ನು ಹೊರತೆಗೆಯಲಾಗಿದೆ. ಈ ಗುಂಡಿಗಳಲ್ಲಿ 519 ಲಕ್ಷ ಲೀಟರ್ ನೀರು ಸಂಗ್ರಹಗೊಳ್ಳಲು ಅವಕಾಶವಿದ್ದು, ಇದರಿಂದ ಇಂಗುಗುಂಡಿ ಸುತ್ತಲಿನ ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ.

‘ಉದ್ಯೋಗ ಖಾತರಿ ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಕಲಬುರ್ಗಿ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಅಂತರ್ಜಲಮಟ್ಟ ತೀವ್ರವಾಗಿ ಕುಸಿದಿದೆ. ಹೀಗಾಗಿ ಅಂತರ್ಜಮಟ್ಟ ಹೆಚ್ಚಿಸುವ ಉದ್ದೇಶದಿಂದ ಕೆರೆ ದಂಡೆಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ.

ಇದರಿಂದ ಗ್ರಾಮಸ್ಥರಿಗೆ ಬಹಳಷ್ಟು ಅನುಕೂಲವಾಗಲಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಕಾಂತ ಜೀವಣಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತರ ಹೊಲಗಳಲ್ಲೂ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಮಳೆಗಾಲ ಮುಗಿಯುವವರೆಗೆ ನೀರು ನಿಲ್ಲುವುದರಿಂದ ಇಡೀ ಹೊಲ ತೇವಾಂಶದಿಂದ ಕೂಡಿರುತ್ತದೆ. ಇದರಿಂದ ಬೆಳೆಗಳು ಒಣಗುವ ಆತಂಕವೂ ಇರುವುದಿಲ್ಲ. ರೈತರು ಒಳ್ಳೆಯ ಇಳುವರಿ ಪಡೆಯಬಹುದಾಗಿದೆ’ ಎಂದು ಅವರು ಹೇಳಿದರು.

* * 

ಕೆರೆ ದಂಡೆಯಲ್ಲಿ ಇಂಗುಗುಂಡಿ ನಿರ್ಮಾಣದಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ದೊರಕುತ್ತದೆ. ಇದೊಂದು ಉತ್ತಮ ಯೋಜನೆ.

ಚಂದ್ರಕಾಂತ ಜೀವಣಗಿ

ಇಒ, ತಾಲ್ಲೂಕು ಪಂಚಾಯಿತಿ

ಪ್ರತಿಕ್ರಿಯಿಸಿ (+)