ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೊನ್ನು ಶಾಪವಲ್ಲ, ಕುಷ್ಠರೋಗವೂ ಅಲ್ಲ’

ಬೆಳಗಾವಿಯಲ್ಲಿ ಜನಜಾಗೃತಿ ಅಭಿಯಾನಕ್ಕೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಚಾಲನೆ
Last Updated 12 ಜುಲೈ 2017, 6:14 IST
ಅಕ್ಷರ ಗಾತ್ರ

ಬೆಳಗಾವಿ: ಭಾರತೀಯ ಚರ್ಮ, ಲೈಂಗಿಕ ಹಾಗೂ ಕುಷ್ಠರೋಗಗಳ ತಜ್ಞರ ಸಂಘ ಕರ್ನಾಟಕ ಶಾಖೆಯಿಂದ ವಿಶ್ವ ತೊನ್ನು ರೋಗ ದಿನದ ಅಂಗವಾಗಿ ಆಯೋಜಿಸಿರುವ ಜನಜಾಗೃತಿ ಅಭಿಯಾನಕ್ಕೆ ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ತೊನ್ನು ಶಾಪವಲ್ಲ, ಸಾಂಕ್ರಾಮಿಕ ಕಾಯಿಲೆಯೋ, ಅನುವಂಶೀಯವೋ, ಕುಷ್ಠ ಸಂಬಂಧಿ ರೋಗವೂ ಅಲ್ಲ. ಔಷಧ ಹಾಗೂ ಶಸ್ತ್ರಚಿಕಿತ್ಸೆಯಿಂದ ಇದನ್ನು ಹೋಗಲಾಡಿಸಿ, ವರ್ಣಮಯ ಜೀವನವನ್ನು ಮತ್ತೆ ಪಡೆಯಬಹುದು. ತೊನ್ನು ಎನ್ನುವುದು ಬಿಳಿತನದ ಕಪ್ಪು ಛಾಯೆಯಷ್ಟೆ. ಇದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ದೇವರು ನೀಡಿದ ಶಾಪವಲ್ಲ. ಮೂಢನಂಬಿಕೆಗೆ ಒಳಗಾಗಬಾರದು ಎಂದು ತಿಳಿಸಲಾಯಿತು.

ತೊನ್ನಿನ ಬಗ್ಗೆ ಹಲವು ತಪ್ಪು ಕಲ್ಪನೆಗಳಿದ್ದು, ಅವುಗಳನ್ನು ಮೊದಲು ಹೋಗಲಾಡಿಸಬೇಕು. ಅವರತ್ತ ಕಾಳಜಿ ವಹಿಸಿ, ಭರವಸೆ ತುಂಬಿ ಚಿಕಿತ್ಸೆಗೆ ಉತ್ತೇಜಿಸಿದರೆ ಗುಣಮುಖರಾಗುವಂತೆ ಮಾಡಬಹುದು. ಆಹಾರದಲ್ಲಿ ಯಾವುದೇ ಪತ್ಯವಿಲ್ಲದೆ ಆರೋಗ್ಯಕರ ಜೀವನ ನಡೆಸಬಹುದು.

ತೊನ್ನು ಎಂದರೆ ಚರ್ಮ ಬಿಳಿಯಾಗುವ ಒಂದು ಸಾಮಾನ್ಯ ಸ್ಥಿತಿ. ಪ್ರತಿಶತ ಒಬ್ಬರು ಅಥವಾ ಇಬ್ಬರಲ್ಲಿ ಕಾಣಿಸಿಕೊಳ್ಳಬಹುದು. ಮನುಷ್ಯನ ಚರ್ಮಕ್ಕೆ ಬಣ್ಣ ಕೊಡುವ ಮತ್ತು ಚರ್ಮವನ್ನು ರಕ್ಷಿಸುವ ಧಾತು ಇರುತ್ತದೆ. ಈ ಧಾತು ಚರ್ಮದಲ್ಲಿರುವ ಮಲನೋಸೈಟ್‌ ಎಂಬ ಜೀವಕೋಶಗಳಲ್ಲಿ ಉತ್ಪತ್ತಿಯಾಗುತ್ತದೆ. ಈ ಜೀವಕೋಶಗಳು ನಾಶವಾದ ಸ್ಥಳದಲ್ಲಿ ಚರ್ಮ ಬಿಳಿಯಾಗಿ ಕಾಣಿಸುತ್ತದೆ. ಇದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.

ಹೋಗಲಾಡಿಸಲು ಸಾಧ್ಯ: ಸೊರಲೆನ್‌ ಹಾಗೂ ನೀಲಾತೀತ ಕಿರಣಗಳ ಮೂಲಕ ಫೋಟೋಥೆರಫಿ ಚಿಕಿತ್ಸೆ ಲಭ್ಯವಿದೆ. ಸೊರಲೆನ್‌ ಮಾತ್ರೆಗಳನ್ನು ಸೇವಿಸಿದ ನಂತರ ಮಚ್ಚೆಗಳನ್ನು ಸೂರ್ಯನ ಕಿರಣಗಳಿಗೆ ಅಥವಾ ನೀಲಾತೀತ ಕಿರಣಗಳಿಗೆ ತೋರಿಸುವುದರಿಂದ ಮೆಲನಿನ್‌ ಧಾತುಗಳ ಉತ್ಪತ್ತಿ ಸಾಧ್ಯವಾಗುತ್ತದೆ. ಕಳವಳ ಹಾಗೂ ಖಿನ್ನತೆಗೆ ಒಳಗಾಗುವ ಅಗತ್ಯವಿಲ್ಲ. ಚರ್ಮರೋಗ ತಜ್ಞರ ಸಲಹೆ ಪಡೆಯಬೇಕು ಎಂದು ವೈದ್ಯರು ಮನವರಿಕೆ ಮಾಡಿಕೊಟ್ಟರು.

ಯುವತಿಗೆ ತೊನ್ನು ಇರುವುದು ನಿಶ್ಚಿತಾರ್ಥದ ನಂತರ ಕಂಡುಬಂದಿದ್ದರಿಂದ, ಮದುವೆ ನಿರಾಕರಿಸುವ ವರ ಹಾಗೂ ಆತನ ಪೋಷಕರಿಗೆ ವೈದ್ಯರು ಮನವರಿಕೆ ಮಾಡಿಕೊಡುವ ಪ್ರಸಂಗದ ಬೀದಿನಾಟಕವನ್ನು ವೈದ್ಯ ವಿದ್ಯಾರ್ಥಿಗಳು ಮತ್ತು ವೈದ್ಯರು ಮನೋಜ್ಞವಾಗಿ ಅಭಿನಯಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ತೊನ್ನು ಇರುವವರನ್ನು ಮದುವೆ ಆಗಬಾರದು ಎನ್ನುವುದು ತಪ್ಪು ತಿಳಿವಳಿಕೆ ಎಂದು ತಿಳಿಸಿದರು.

ಹಿರಿಯ ಚರ್ಮರೋಗ ತಜ್ಞ ಡಾ. ಎಸ್‌.ಆರ್‌. ಕುಟ್ರೆ ಮಾತನಾಡಿ, ‘ತೊನ್ನು ಗುಣಪಡಿಸಬಹುದಾದ ಸಮಸ್ಯೆ. ಮೂಢನಂಬಿಕೆಗಳಿಗೆ ಒಳಗಾಗಿ ದೇವಸ್ಥಾನಗಳಿಗೆ ತೆರಳುವ ಬದಲಿಗೆ ಚರ್ಮರೋಗ ತಜ್ಞರ ಸಲಹೆ ಪಡೆಯಬೇಕು’ ಎಂದು ಹೇಳಿದರು.

ಡಾ.ಸಿದ್ದರಾಮಪ್ಪ, ಡಾ.ಸತೀಶ, ಡಾ. ಎಂ.ಎ.ಪಾಟೀಲ, ಡಾ.ಜಯಶ್ರೀ ನಾಯಕ ಭಾಗವಹಿಸಿದ್ದರು. ತೊನ್ನು ಜಾಗೃತಿ ರಥವು ಜಿಲ್ಲೆಯಾದ್ಯಂತ ಸಂಚರಿಸಲಿದ್ದು, ಬಸ್‌ನಿಲ್ದಾಣ, ಪ್ರಮುಖ ವೃತ್ತಗಳು, ರೈಲುನಿಲ್ದಾಣ, ಆಸ್ಪತ್ರೆ ಬಳಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT