ಶುಕ್ರವಾರ, ಡಿಸೆಂಬರ್ 6, 2019
19 °C
ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಸೂಚನೆ

ಟೆಂಡರ್ ಕರೆಯದಿದ್ದರೆ ಕ್ರಮದ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಂಡರ್ ಕರೆಯದಿದ್ದರೆ ಕ್ರಮದ ಎಚ್ಚರಿಕೆ

ಶಿರಸಿ: ನಗರಸಭೆಯಲ್ಲಿ ಮೂರು ವರ್ಷಗಳಿಂದ ಟೆಂಡರ್‌ ಕರೆಯದೇ ಈಗಿರುವ ಹೊರಗುತ್ತಿಗೆ ವ್ಯವಸ್ಥೆಯನ್ನೇ ಮುಂದುವರಿಸಲಾಗಿದೆ. ಒಂದು ತಿಂಗಳೊಳಗೆ ಟೆಂಡರ್ ಕರೆಯದಿದ್ದರೆ ಪೌರಾಯುಕ್ತರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಇಲ್ಲಿ ಕರೆದಿದ್ದ ಸಭೆಯಲ್ಲಿ ನಗರಸಭೆಯ ವಿವಿಧ ಕಾಮಗಾರಿಗಳ ಪ್ರಗತಿ ಮಾಹಿತಿ ಪಡೆದ ಅವರು ಕಡತಗಳ ಪರಿಶೀಲನೆ ನಡೆಸಿದರು.

‘ಹೊರಗುತ್ತಿಗೆಯನ್ನು ವರ್ಷಕ್ಕೊಮ್ಮೆ ಟೆಂಡರ್ ಕರೆಯಬೇಕು. ಆದರೆ ನಗರಸಭೆಯಲ್ಲಿ ಮೂರು ವರ್ಷಗಳಿಂದ ಟೆಂಡರ್ ಕರೆದಿಲ್ಲ. ಇದರಿಂದ ಪಾರದರ್ಶಕತೆಗೆ ಧಕ್ಕೆಯಾಗುತ್ತದೆ’ ಎಂದರು.

‘ಕಾಮಗಾರಿ ನಡೆಸುವ ಪೂರ್ವದಲ್ಲಿ ನೀಲನಕ್ಷೆ ತಯಾರಿಸಬೇಕು. ನೀಲನಕ್ಷೆ ಇಲ್ಲದೇ ಕ್ರಿಯಾಯೋಜನೆಯನ್ನು ಹೇಗೆ ತಯಾರಿಸುತ್ತೀರಿ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ‘ಕಾಮಗಾರಿಯ ಗುಣಮಟ್ಟವನ್ನು ಹೇಗೆ ಪರೀಕ್ಷಿಸುತ್ತೀರಿ’ ಎಂದು ಪ್ರಶ್ನಿಸಿದರು. 

‘ವಸತಿ ಯೋಜನೆಗಳ ಅಡಿಯಲ್ಲಿ ಮಂಜೂರು ಆಗಿರುವ ಮನೆ ನಿರ್ಮಾಣ ಯಾಕೆ ವಿಳಂಬವಾಗುತ್ತಿದೆ. 58 ಜನರು ಇನ್ನೂ ಮನೆ ಕಟ್ಟದಿರುವುದು ಗಂಭೀರ ವಿಷಯವಾಗಿದೆ. ತಕ್ಷಣ ಸ್ಥಳದ ಜಿಪಿಎಸ್ ನಡೆಸಿ ಚಿತ್ರ ಕಳುಹಿಸಬೇಕು. ಕಾಮಗಾರಿ ಪ್ರಾರಂಭಿಸದಿದ್ದರೆ ಹಣ ನೀಡಲಾಗುವುದಿಲ್ಲ’ ಎಂದು ಹೇಳಿದರು.

‘ಜಿಲ್ಲೆಯ ವಿವಿಧೆಡೆ ನಗರೋತ್ಥಾನ 2ನೇ ಹಂತದ ಕಾಮಗಾರಿ ಕಳಪೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ 3ನೇ ಹಂತದ ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಜಿಲ್ಲೆಯ ಪ್ರತಿ ಸ್ಥಳೀಯ ಸಂಸ್ಥೆಗೆ ಒಬ್ಬರು ಯೋಜನಾ ಸಮಾಲೋಚಕರನ್ನು ನೇಮಕ ಮಾಡಲಾಗುವುದು.

ಅವರೊಂದಿಗೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಯ ಕಿರಿಯ ಎಂಜಿನಿಯರ್‌ ಅನ್ನು ನಿಯೋಜಿಸಿ ಕಾಮಗಾರಿ ಉಸ್ತುವಾರಿ ವಹಿಸಲಾಗುತ್ತದೆ. ಕಾಮಗಾರಿಯಲ್ಲಿ ವಿಳಂಬವಾದರೆ ಅಥವಾ ಕಳಪೆ ಗುಣಮಟ್ಟ ಕಂಡುಬಂದಲ್ಲಿ ಇವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ನಕುಲ್ ಹೇಳಿದರು.

ನಿರೀಕ್ಷಿತ ಕೆಲಸ ಆಗುತ್ತಿಲ್ಲ: ’ಜಿಲ್ಲೆ ಹಾಗೂ ರಾಜ್ಯದ ಉಳಿದ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದಲ್ಲಿ ಶಿರಸಿ ನಗರಸಭೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಸಾಕಷ್ಟಿದ್ದಾರೆ. ಆದರೂ ಇಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳು ನಡೆಯುತ್ತಿಲ್ಲ. ನಗರಸಭೆಯ ನೌಕರರಿಗೆ ಜೂನ್ ತಿಂಗಳ ಸಂಬಳ ಆಗಿಲ್ಲ. ಪ್ರತಿ ತಿಂಗಳು 10ನೇ ತಾರೀಖಿನ ಒಳಗೆ ಸಂಬಳ ಆಗಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಎಚ್ಆರ್ಎಂಎಸ್ ಸಿಬ್ಬಂದಿ ಹಾಗೂ ಪೌರಾಯುಕ್ತರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಸಿದರು.

ನಗರದ ಕೆಲ ವಾರ್ಡ್‌ಗಳನ್ನು ಆಯ್ಕೆ ಮಾಡಿಕೊಂಡು ಕಸವನ್ನು ಪ್ರತ್ಯೇಕಿಸಿ ಕೊಡಲು ಮಾಹಿತಿ ನೀಡಬೇಕು. ಇಲ್ಲಿಂದಲೇ ಆ ಕಾರ್ಯ ಪ್ರಾರಂಭವಾಗಬೇಕು. ಯಾರು ಕಸ ಕೊಡದೇ ಖಾಲಿ ಜಾಗದಲ್ಲಿ ಅದನ್ನು ಚೆಲ್ಲುತ್ತಾರೆ ಎಂಬುದನ್ನು ಪೌರಕಾರ್ಮಿಕರು, ಸಿಬ್ಬಂದಿ ಪರಿಶೀಲಿಸಬೇಕು ಎಂದು ಹೇಳಿದರು. ಪೌರಾಯುಕ್ತ ಮಹೇಂದ್ರಕುಮಾರ, ಡಿಯುಡಿಸಿ ಆರ್.ಪಿ.ನಾಯ್ಕ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)