ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿ ಹರಿಯುತ್ತಿದೆ ಆಸ್ಪತ್ರೆ ಕೊಳಚೆ ಗುಂಡಿ

Last Updated 12 ಜುಲೈ 2017, 6:51 IST
ಅಕ್ಷರ ಗಾತ್ರ

ಅರಸೀಕೆರೆ: ಜೆ.ಸಿ. ಆಸ್ಪತ್ರೆ ಆವರಣದ ಒಳಗೆ ತ್ಯಾಜ್ಯ ಗುಂಡಿ ಭರ್ತಿಯಾಗಿ ಉಕ್ಕಿ ಹರಿಯುತ್ತಿದೆ. 7–8 ವರ್ಷಗಳಿಂದ ಈ ಗುಂಡಿ ಹೀಗೆಯೇ ತೆರೆದಿದೆ. ಗುಂಡಿಯಲ್ಲಿ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳು ಇವೆ.

ಈ ರೀತಿ ವಾತಾವರಣವಿದ್ದರೂ ತನಗೇನೂ ಸಂಬಂಧ ಇಲ್ಲ ಎಂಬಂತೆ ನಗರಸಭೆ ಆಡಳಿತ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ನಗರದಾದ್ಯಂತ ಡೆಂಗಿ, ವೈರಲ್‌ ಜ್ವರದ ಹಾವಳಿ ಇದೆ. ಒಂದೆಡೆ ಕೆಟ್ಟ ವಾಸನೆ, ಇನ್ನೊಂದೆಡೆ ಸೊಳ್ಳೆಗಳ ಕಾಟ... ಈ ನಡುವೆ ಆಸ್ಪತ್ರೆ ತ್ಯಾಜ್ಯವೂ ರಸ್ತೆಯಲ್ಲಿ ಹರಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ರಸ್ತೆ ಬದಿಯಲ್ಲಿರುವ ಚರಂಡಿಗಳಲ್ಲಿರುವ ಕೊಳಚೆ ನೀರು ಹರಿದುಹೋಗುವಂತೆ ಮಾಡಿ, ಪ್ರತಿದಿನ ಸ್ವಚ್ಛತಾ ಕಾರ್ಯ ಕೈಗೊಂಡು ಆರೋಗ್ಯಕರ ವಾತಾವರಣ ನಿರ್ಮಿಸಿ ಎಂದು ನಗರಸಭೆ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗೆ ಈ ಭಾಗದ ನಿವಾಸಿಗಳು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಬಡಾವಣೆ ನಿವಾಸಿ ಗೋಪಾಲ್‌ ಆರೋಪಿಸಿದ್ದಾರೆ. ನಗರದ ಶಿವಾನಂದ ಕಾಲೊನಿ ಬಡಾವಣೆ ರಸ್ತೆಯ ಮೇಲೆಯೂ ಒಳಚರಂಡಿ ನೀರು ಹರಿಯುತ್ತಿದ್ದು, ಅಸಹ್ಯ ವಾತಾವರಣ ನಿರ್ಮಾಣವಾಗಿದೆ.

ಶೀಘ್ರದಲ್ಲಿ ಒಳಚರಂಡಿ ದುರಸ್ತಿ
ಅರಸೀಕೆರೆ: ಆಸ್ಪತ್ರೆ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ. ಸೋಮವಾರ ನಡೆದ ಸಭೆಗೆ ಅವರನ್ನು ಕರೆಸಿ ತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಆಸ್ಪತ್ರೆಯ ಒಳಚರಂಡಿ ಒಡೆದಿರುವುದರಿಂದ ತ್ಯಾಜ್ಯ ಗುಂಡಿ ತುಂಬಿ ಹರಿಯುತ್ತಿದೆ. ನಗರದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಶೀಘ್ರದಲ್ಲಿ ಅದರ ದುರಸ್ತಿಯನ್ನೂ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಪ್ರತಿಕ್ರಿಯಿಸಿದ್ದಾರೆ.

ಹೆಚ್ಚುವರಿ ಡಯಾಲಿಸಿಸ್‌ ಯಂತ್ರ ಅಳವಡಿಕೆಗೆ ತೀರ್ಮಾನ
ಅರಸೀಕೆರೆ: ತಾಲ್ಲೂಕಿನಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿರುವುದರಿಂದ ದಾನಿಗಳ ನೆರವು ಪಡೆದು ಮತ್ತೊಂದು ಡಯಾಲಿಸಿಸ್‌ ಯಂತ್ರವನ್ನು ಒದಗಿಸಲು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಧ್ಯಕ್ಷತೆಯಲ್ಲಿ ರಕ್ಷಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು, ‘ಆಸ್ಪತ್ರೆಯಲ್ಲಿ ಈಗಾಗಲೇ ಎರಡು ಡಯಾಲಿಸಿಸ್‌ ಕೇಂದ್ರಗಳಿವೆ. ಆದರೆ, ಇವುಗಳ ನಿರ್ವಹಣೆಗೆ ತಜ್ಞರಿಲ್ಲ. ಅನಿವಾರ್ಯವಾಗಿ ಆಸ್ಪತ್ರೆಯ ದಾದಿಯರಿಗೆ ತರಬೇತಿ ನೀಡಿ ಬಳಸಲಾಗುತ್ತಿದೆ’ ಎಂದರು.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿರುವುದರಿಂದ ಮತ್ತೊಂದು ಯಂತ್ರ ಸ್ಥಾಪಿಸುವ ಆಗತ್ಯವಿದೆ ಎಂದು ಹೇಳಿದಾಗ ಸಭೆ ಒಪ್ಪಿಗೆ ಸೂಚಿಸಿತು.
ಗುತ್ತಿಗೆದಾರರಿಗೆ ತರಾಟೆ: ಜೆ.ಸಿ. ಆಸ್ಪತ್ರೆಯಲ್ಲಿ ಕುಡಿಯುವ ನೀರು, ವಿದ್ಯುತ್‌ ಸಮಸ್ಯೆ ತೀವ್ರವಾಗಿದೆ. ರೋಗಿಗಳು ಪರದಾಡುವಂತಾಗಿದೆ. ಸ್ವಚ್ಛತೆ ಬಗ್ಗೆಯೂ ಸಾರ್ವಜನಿಕರಿಂದ ವ್ಯಾಪಕ ದೂರುಗಳಿವೆ.

ನಿರ್ವಹಣಾ ಗುತ್ತಿಗೆದಾರರು ಏನು ಮಾಡುತ್ತಿದ್ದಾರೆ ಎಂದು ಸದಸ್ಯರು ಹಾಗೂ ಶಾಸಕರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಗುತ್ತಿಗೆದಾರ ಪ್ರಕಾಶ್‌ ಭರವಸೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಕಾರದೊಂದಿಗೆ ಶಾಸಕರ ಹಾಗೂ ನಗರಸಭೆ ನಿಧಿಯಿಂದ ಆಸ್ಪತ್ರೆ ಆವರಣದಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ತೆರೆಯಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಜೆ.ಸಿ.ಆಸ್ಪತ್ರೆಯಲ್ಲಿ ಮೂರು ಹಾಸಿಗೆಗಳ ತುರ್ತು ನಿಗಾ ಘಟಕ ತೆರೆಯಲು ಈಗಾಗಲೇ ಸರ್ಕಾರ ಅನುಮೋದನೆ ನೀಡಿದೆ. ಆಸ್ಪತ್ರೆ ಕಟ್ಟಡದಲ್ಲಿಯೇ ಕೆಲಸ ಮಾಡುತ್ತಿರುವ ತಾಲ್ಲೂಕು ಆರೋಗ್ಯ ಇಲಾಖೆಯ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸುವುದಕ್ಕಾಗಿ ಕಟ್ಟಡವನ್ನು ಬಿಟ್ಟುಕೊಡುವಂತೆ ದೂರವಾಣಿ ಮೂಲಕ ಜಿಲ್ಲಾ ವೈದ್ಯಾಧಿಕಾರಿಗೆ ಮನವಿ ಮಾಡಿದರು.ಕಚೇರಿಯನ್ನು ಶೀಘ್ರದಲ್ಲಿ ತೆರವು ಮಾಡಿಸಿಕೊಡುವುದಾಗಿ ವೈದ್ಯಾಧಿಕಾರಿ ತಿಳಿಸಿದರು.

ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ತಾ.ಪಂ. ಅಧ್ಯಕ್ಷೆ ಮಂಜುಳಾಬಾಯಿ ಚಂದ್ರನಾಯಕ್‌, ನಗರಸಭೆ ಪೌರಾಯುಕ್ತ ಸಿ.ಆರ್‌.ಪರಮೇಶ್‌, ತಾಲ್ಲೂಕು ವೈದ್ಯಾಧಿಕಾರಿ ಡಾ.ನಾಗಪ್ಪ, ನಗರ ಪೊಲೀಸ್‌ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಪ್ರಭಾಕರ್‌, ಜೆ.ಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಕ್ರಪಾಣಿ, ರಕ್ಷಾ ಸಮಿತಿ ಸದಸ್ಯರಾದ ಎಂ.ವೈ.ಖಾನ್‌, ಖ್ವಾಜಾ ಮೊಹಿದ್ದೀನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT