ಶುಕ್ರವಾರ, ಡಿಸೆಂಬರ್ 6, 2019
19 °C

ಅಕ್ಕಿರಾಂಪುರ ಜನರ ಜಲಜಾಗೃತಿ

Published:
Updated:
ಅಕ್ಕಿರಾಂಪುರ ಜನರ ಜಲಜಾಗೃತಿ

ಕೊರಟಗೆರೆ: ಅಂತರ್ಜಲಕ್ಕೆ ಎದುರಾಗುವ ಅಪಾಯಗಳನ್ನು ತಡೆದರೆ ನೀರು ಸಮೃದ್ಧವಾಗಿ ದೊರೆಯುತ್ತದೆ ಎನ್ನುವುದಕ್ಕೆ ತಾಲ್ಲೂಕಿನ ಅಕ್ಕಿರಾಂಪುರ ನಿದರ್ಶನವಾಗಿದೆ.

8-10 ವರ್ಷಗಳ ಹಿಂದೆ ಗ್ರಾಮದ ಹಿರಿಯರು, ರೈತರು ಅಕ್ಕಿರಾಂಪುರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಹರಿಯುವ ಜಯಮಂಗಲಿ ನದಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗೆ ನಿರ್ಣಯ ಕೈಗೊಂಡರು.

ನದಿಪಾತ್ರದಲ್ಲಿ ರಾತ್ರೋರಾತ್ರಿ ಹತ್ತಾರು ಲಾರಿಗಳಲ್ಲಿ ಮರಳು ತುಂಬಿ ತುಮಕೂರು ಮತ್ತು ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಇದರಿಂದ ಅಕ್ಕಿರಾಂಪುರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಕುಸಿದಿತ್ತು. ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿರಲಿಲ್ಲ.

ಮನೆ ನಿರ್ಮಿಸಲು ಅಗತ್ಯವಿರುವ ಮರಳನ್ನು ಆಯಾ ಗ್ರಾಮಗಳ ಟ್ರ್ಯಾಕ್ಟರ್ ಗಳಲ್ಲಿ ಭಾನುವಾರ ಮಾತ್ರ ಸಾಗಿಸಿಕೊಳ್ಳಬಹುದು. ಬೇರೆ ಗ್ರಾಮದ ಅಥವಾ ಗೊತ್ತಿಲ್ಲದ ಟ್ರ್ಯಾಕ್ಟರ್ ಅಥವಾ ಲಾರಿಗಳಿಗೆ ನದಿ ತೀರಕ್ಕೆ ಹೋಗಲು ಅವಕಾಶವನ್ನು ಗ್ರಾಮಸ್ಥರು ನೀಡಲಿಲ್ಲ.

‘ಮರಳು ಸಾಗಾಣಿಕೆ ತಡೆಯಲು ಪ್ರತಿಯೊಬ್ಬರು ಮುಂದಾಗಿದ್ದಾರೆ. ಇದರಿಂದ ಅಂತರ್ಜಲಕ್ಕೆ ಎದುರಾದ ಅಪಾಯ ತಪ್ಪಿತು’ ಎನ್ನುವರು ಗ್ರಾಮದ ನವೀನ್ ಕುಮಾರ್. 

‘ಇತ್ತೀಚಿನ ದಿನಗಳಲ್ಲಿ ಕಡಿಮೆ ಆಳದಲ್ಲಿಯೇ ನೀರು ದೊರೆಯುತ್ತಿದೆ.

ಇಲ್ಲಿಯವರೆಗೂ ಈ ಭಾಗಗಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ’ ಎಂದು ತಿಳಿಸುವರು  ಗ್ರಾಮದ ಯುವಕ ನದೀಮ್ ಪಾಷಾ. ಈ ಭಾಗದಲ್ಲಿ ಕೇವಲ 40-50 ಅಡಿಗಳಿಗೆ ನೀರು ಹರಿಸುವ ಫಿಲ್ಟರ್ ಬೋರ್‌ಗಳನ್ನು ಕಾಣಬಹುದು.

ಸಮೀಪದಲ್ಲಿಯೇ ಬರ: ಅಕ್ಕಿರಾಂಪುರದಿಂದ ನಾಲ್ಕು ಕಿಲೋಮೀಟರ್ ದೂರದ ಹೊಳವನಹಳ್ಳಿಯಲ್ಲಿ ಜಯಮಂಗಲಿ ನದಿ ಪಾತ್ರ ಇದ್ದರೂ ಸಾವಿರ ಅಡಿ ಕೊರೆದರು ಅಲ್ಲಿ ಒಂದು ಹನಿ ನೀರು ದೊರೆಯುತ್ತಿಲ್ಲ. ಇದಕ್ಕೆ ಕಾರಣ ಈ ಭಾಗದಲ್ಲಿ ಮರಳು ದಂಧೆ  ಅಧಿಕವಾಗಿದೆ. ಜಲಮೂಲಗಳನ್ನು ಸಂರಕ್ಷಿಸಿದರೆ ಅಪಾಯ ಎದುರಾಗುವುದಿಲ್ಲ ಎನ್ನುವುದಕ್ಕೆ ಅಕ್ಕಿರಾಂಪುರದ ಜನರು ನಿದರ್ಶನವಾಗಿದ್ದಾರೆ.

40 ಅಡಿಗೆ ನೀರು ಬಂದಿತು

‘ನಿಮ್ಮೂರಲ್ಲಿ ಬೋರ್ ಹಾಕಿಸಿದರೆ ಎಷ್ಟು ಅಡಿ ಆಳಕ್ಕೆ ನೀರು ಸಿಕ್ಕುತ್ತದೆ’ ತಾಲ್ಲೂಕಿನ ಯಾವುದೇ ಭಾಗದ ಜನರಿಗೆ ಈ ಪ್ರಶ್ನೆ ಕೇಳಿದರೆ ‘800ರಿಂದ 1 ಸಾವಿರ ಅಡಿ’ ಎನ್ನುವ ಉತ್ತರವನ್ನು ಥಟ್ಟನೆ ಹೇಳುವರು.

ಆದರೆ ಅಚ್ಚರಿ ಎನ್ನುವಂತೆ ಗ್ರಾಮದ ರೈತ ಲಕ್ಷ್ಮಿಕಾಂತ ರಾಜು ಅವರ ಜಮೀನಿನಲ್ಲಿ ಕೇವಲ 40 ಅಡಿಗೆ 2.5 ಇಂಚು ನೀರು ದೊರೆತಿದೆ. ಕೊಳವೆಬಾವಿಯಲ್ಲಿ ಇಣುಕಿ ನೋಡಿದರೆ ನೀರು ಕಾಣುತ್ತದೆ! ಇದಕ್ಕೆಲ್ಲ ಕಾರಣ ಗ್ರಾಮಸ್ಥರು ಮರಳು ರಕ್ಷಣೆಗೆ ಕೈಗೊಂಡ ನಿರ್ಣಯ

ಪ್ರತಿಕ್ರಿಯಿಸಿ (+)