ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳನ್ನು 20 ವರ್ಷಗಳಿಂದ ಕೋಣೆಯಲ್ಲೇ ಕೂಡಿಹಾಕಿದ್ದ ಪೋಷಕರು

ಮಹಿಳಾ ಪೊಲೀಸರಿಂದ ರಕ್ಷಣೆ
Last Updated 12 ಜುಲೈ 2017, 10:01 IST
ಅಕ್ಷರ ಗಾತ್ರ

ಪಣಜಿ, ಗೋವಾ: ಗೋವಾದ ಕ್ಯಾಂಡೋಲಿಮ್‌ ಗ್ರಾಮದ ಕುಟುಂಬವೊಂದು ಸತತ 20 ವರ್ಷಗಳಿಂದ ಮಗಳನ್ನು ಮನೆಯ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದ ಅಮಾನವೀಯ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಸ್ಥಳೀಯ ಸ್ವಯಂಸೇವಾ ಸಂಸ್ಥೆಯೊಂದು ಮಹಿಳಾ ಪೊಲೀಸರ ನೆರವಿನಿಂದ ಆಕೆಯನ್ನು ರಕ್ಷಿಸಿದೆ.

ತನ್ನ ಪೋಷಕರಿಂದಲೇ ಬಂಧನಕ್ಕೊಳಗಾದ ಈ ಮಹಿಳೆ ಹೆಸರು ಸುನೀತಾ. ಇವರು 20 ವರ್ಷಗಳಿಂದ ಕತ್ತಲಕೋಣೆಯಲ್ಲೇ ಕಾಲ ಕಳೆದಿದ್ದಾರೆ. 20 ವರ್ಷಗಳಿಂದ ಕತ್ತಲಕೋಣೆಯೇ ಪ್ರಪಂಚವಾಗಿದ್ದ ಸುನೀತಾ ಅವರಿಗೆ ಈಗ 50 ವರ್ಷ ವಯಸ್ಸು.

ಮಗಳ ಮಾನಸಿಕ ಆರೋಗ್ಯ ಸರಿಯಿಲ್ಲ ಎಂಬ ಕಾರಣಕ್ಕೆ ಸುನೀತಾ ಅವರನ್ನು ಅವರ ಪೋಷಕರು ಮನೆಯ ಕೋಣೆಯೊಂದರಲ್ಲಿ ಕೂಡಿ ಹಾಕಿ ಕಿಟಕಿಯ ಮೂಲಕ ಆಹಾರ, ನೀರು ಒದಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಈ ಸ್ಥಿತಿಯನ್ನು ಕಂಡಿದ್ದ ವ್ಯಕ್ತಿಯೊಬ್ಬರು ‘ಬೈಲಾಂಚೊ ಸಾಧ್’ ಎಂಬ ಸ್ವಯಂಸೇವಾ ಸಂಸ್ಥೆಗೆ ಇ–ಮೇಲ್‌ ಮೂಲಕ ವಿಷಯ ತಿಳಿಸಿದ್ದಾರೆ. ಈ ಸಂಸ್ಥೆಯ ಸದಸ್ಯರು ಈ ಮಾಹಿತಿಯನ್ನು ಪೊಲೀಸರಿಗೆ ಮುಟ್ಟಿಸಿ ಆಕೆಯ ರಕ್ಷಣೆಗೆ ನೆರವಾಗಿದ್ದಾರೆ.

‘ಸುನೀತಾ ಅವರನ್ನು ರಕ್ಷಿಸಲು ಮನೆಗೆ ಹೋದಾಗ ಅವರು ನಗ್ನ ಸ್ಥಿತಿಯಲ್ಲಿದ್ದರು ಮತ್ತು ಕೋಣೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸುನೀತಾ ಅವರು ಮುಂಬೈ ಮೂಲದ ಒಬ್ಬನನ್ನು ಮದುವೆಯಾಗಿದ್ದರು. ಆತನಿಗೆ ಮೊದಲೇ ಮದುವೆಯಾಗಿತ್ತು. ಈ ವಿಷಯ ಗೊತ್ತಾದ ಮೇಲೆ ಆತನಿಂದ ದೂರವಾಗಿ ಸುನೀತಾ ತವರಿಗೆ ಬಂದಿದ್ದರು. ಅವರು ಇಲ್ಲಿಗೆ ಬಂದ ಮೇಲೆ ಅಸಹಜವಾಗಿ ವರ್ತಿಸಲು ಶುರು ಮಾಡಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಸುನೀತಾ ಅಸಹಜವಾಗಿ ವರ್ತಿಸುತ್ತಿದ್ದರಿಂದ ಪೋಷಕರು ಅವರನ್ನು ಮನೆಯ ಕೋಣೆಯಲ್ಲಿ ಕೂಡಿ ಹಾಕಿದ್ದರು. 20 ವರ್ಷಗಳಿಂದಲೂ ಅವರಿಗೆ ಕಿಟಕಿ ಮೂಲಕವೇ ಆಹಾರ, ನೀರು ನೀಡುತ್ತಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುನೀತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರನ್ನೂ ಬಂಧಿಸಿಲ್ಲ. ಕುಟುಂಬದವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT