ಶನಿವಾರ, ಡಿಸೆಂಬರ್ 7, 2019
16 °C

ಅಚ್ಚುಕಟ್ಟಿಗೆ ನೀರು ಕೊಡಲು ರೈತರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಚ್ಚುಕಟ್ಟಿಗೆ ನೀರು ಕೊಡಲು ರೈತರ ಆಗ್ರಹ

ತುಮಕೂರು: ‘ಏನ್ ಸ್ವಾಮಿ ನಮ್ಮ ಬದುಕು. ಸಮುದ್ರದ ದಂಡೆಯಲ್ಲಿದ್ದರೂ ಉಪ್ಪಿಗೆ ಬರ. ನಮ್ಮ ಅಪ್ಪ, ತಾತ, ಮುತ್ತಾತ ನೆಚ್ಚಿಕೊಂಡು ಕೃಷಿ ಮಾಡಿಕೊಂಡು ಬಂದ ಕೆರೆ ನೀರು ಈಗ ನಮ್ಮ ಬದುಕಿಗೆ ಇಲ್ಲ. ನಮಗಷ್ಟೇ ಅಲ್ಲ.

ದನಕರುಗಳಿಗೂ ನೀರು ಸಿಗುತ್ತಿಲ್ಲ. ಹನಿ ನೀರು ರೈತರ ಜಮೀನಿಗೆ ಹರಿಯದಂತೆ ತೂಬಿಗೆ ಕಾಂಕ್ರೀಟ್ ಹಾಕಿ ಆಡಳಿತ ವರ್ಗ ಕಠೋರವಾಗಿ ವರ್ತಿಸಿದೆ. ರೈತರು ಮನುಷ್ಯರಲ್ಲವೇ? ನಾವೂ ಬದುಕಬಾರದೇ? ಬರೀ ನಗರದವರಿಗೆ ನೀರು ಕೊಟ್ಟರೆ ಸಾಕೆ?’

ಇವು ಬುಗುಡನಹಳ್ಳಿ, ಅಮಾನಿಕೆರೆ ಅಚ್ಚುಕಟ್ಟುಪ್ರದೇಶದ ರೈತರ ಗೋಳಿನ ಮಾತುಗಳು. ನೀರಿಲ್ಲದೇ ತಾವು ಅನುಭವಿಸುತ್ತಿರುವ ಸಂಕಷ್ಟದ ಸ್ಥಿತಿಯನ್ನು ಸೋಮವಾರ  ‘ಪ್ರಜಾವಾಣಿ’ಯೊಂದಿಗೆ ತಮ್ಮ ನೋವು ಬಿಚ್ಚಿಟ್ಟ ಪರಿ ಇದು.

‘ಒಂದು ದಶಕದಲ್ಲಿ ನಮ್ಮೂರು ಕೆರೆಯನ್ನು ಏನೇನು ಹಾಳು ಮಾಡಬೇಕಿತ್ತೋ ಆ ರೀತಿ ಮಾಡಿಬಿಟ್ಟಿದ್ದಾರೆ. ಈಗ ನಾವು ಬೀದಿಗೆ ಬಂದು ನೀರು ಕೊಡಿ ಎಂದು ಕೇಳಬೇಕಾದ ದೈನೇಸಿ ಸ್ಥಿತಿಗೆ ಬಂದಿದ್ದೇವೆ’ ಎಂದರು.

ಬುಗುಡನಹಳ್ಳಿ,ಅಮಾನಿಕೆರೆಯ ಅಚ್ಚುಕಟ್ಟು ಪ್ರದೇಶಕ್ಕೆ ಪುರಾತನ ಕಾಲದಿಂದಲೂ ನೀರು ಸಿಗುತ್ತಿತ್ತು. ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದೆವು. ಆದರೆ  ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಬುಗುಡನಹಳ್ಳಿ  ಕೆರೆಯನ್ನು ತೆಗೆದುಕೊಂಡು ಬಳಿಕ ಕೃಷಿಗೆ ನೀರು ಇಲ್ಲದಂತೆ ಮಾಡಿದ್ದಾರೆ ಎಂಬುದು ಈ ಭಾಗದ ರೈತರ ಆರೋಪ.

‘ನಾಲ್ಕೈದು ವರ್ಷಗಳಿಂದ  ಹೋರಾಟ ಮಾಡುತ್ತಿದ್ದರೂ ಅಚ್ಚುಕಟ್ಟಿಗೆ ನೀರು ಬಿಡುತ್ತಿಲ್ಲ. ಕೆರೆಯನ್ನು ಕುಡಿಯುವ ನೀರಿಗೆ ಬಳಸಿಕೊಳ್ಳುವ ಮುನ್ನ ಆಗಿನ ಶಾಸಕರು, ಅಧಿಕಾರಿಗಳು ಕೃಷಿಗೂ ನೀರು ಕೊಡುವುದಾಗಿ ವಾಗ್ದಾನ ನೀಡಿದ್ದರು. ಆದರೆ ಈಗ ನಮಗೆ ವಂಚನೆ ಮಾಡಲಾಗಿದೆ’ ಎಂದು ರೈತ ಮುಖಂಡರೊಬ್ಬರು ತಿಳಿಸಿದರು.

‘ದನ–ಕರುಗಳಿಗೂ ನೀರು ಸಿಗುತ್ತಿಲ್ಲ. ಕೊಳವೆ ಬಾವಿ ಕೊರೆಸಿದರೂ ನೀರು ಸಿಕ್ಕಿಲ್ಲ. ಸಾಲದ ಸುಳಿಗೆ ಸಿಲುಕಿದ್ದೇವೆ. ಕೂಡಲೇ ಈ ಸಮಸ್ಯೆ ಪರಿಹರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೆ ನೀರು ಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬುಗುಡನಹಳ್ಳಿ ಶಾಖೆಯ ಮುಖಂಡರು, ಸದಸ್ಯರು ಶಾಸಕ ಬಿ.ಸುರೇಶ್‌ಗೌಡರಿಗೆ ಮನವಿ ಮಾಡಿದರು.

ವಿರೋಧ: ಬುಗುಡನಹಳ್ಳಿ ಕೆರೆಯಿಂದ ಹಿರೇಹಳ್ಳಿ ಮತ್ತು ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ನೀರು  ಹರಿಸುವುದಕ್ಕೆ ಸಂಘಟನೆಯ ಮತ್ತು ಈ ಭಾಗದ ಬುಗುಡನಹಳ್ಳಿ, ಮುದಿಗೆರೆ, ಕನ್ನೇನಹಳ್ಳಿ, ಒಕ್ಕೊಡಿ, ಪೇರಮನಹಳ್ಳಿ, ಪುಟ್ಟನಹಳ್ಳಿ, ಗೌಡಿಹಳ್ಳಿ, ಕುಪ್ಪೂರು ಪ್ರದೇಶದ ರೈತರು ವಿರೋಧವಿದೆ ಎಂದು ಮುಖಂಡರಾದ ಎಚ್.ನಾಗರಾಜ, ಎಂ.ಜಿ.ರವಿ, ರವಿಕುಮಾರ್, ಮೃತ್ಯುಂಜಯ, ಬಿ.ಸಿ.ನಾಗರಾಜ್, ಯು.ಸಿ.ಗೋವಿಂದರಾಜ, ಶಿವಣ್ಣ, ಬಿ.ಟಿ.ಚಂದ್ರಶೇಖರ್, ಡಿ.ಚಿರಂಜೀವಿ ಮನವಿಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)