ಶನಿವಾರ, ಡಿಸೆಂಬರ್ 14, 2019
25 °C

ಮುಂಗಾರಿನ ಕಣ್ಣಾಮುಚ್ಚಾಲೆ ನಡುವೆ ಕೈ ಹಿಡಿದ ಟೊಮೆಟೊ

ರಾಮರಡ್ಡಿ ಅಳವಂಡಿ Updated:

ಅಕ್ಷರ ಗಾತ್ರ : | |

ಮುಂಗಾರಿನ ಕಣ್ಣಾಮುಚ್ಚಾಲೆ ನಡುವೆ ಕೈ ಹಿಡಿದ ಟೊಮೆಟೊ

ತುಮಕೂರು: ಸತತ ಬೆಲೆ ಕುಸಿತಕ್ಕೆ ನಲುಗಿ ಆರಕ್ಕೇರದೇ ಮೂರಕ್ಕಿಳಿಯದೇ ಸಂಕಷ್ಟ ಎದುರಿಸುತ್ತಿದ್ದ ಜಿಲ್ಲೆಯ ಟೊಮೆಟೊ ಬೆಳೆಗಾರರ ಮೊಗದಲ್ಲಿ ಹದಿನೈದು ದಿನಗಳಿಂದ ಮಂದಹಾಸ ಕಾಣುತ್ತಿದೆ. ವಾಣಿಜ್ಯ ಬೆಳೆಗಾರರು ಸೇರಿ ಎಲ್ಲ ರೈತರು ಮಳೆಗಾಗಿ ಕಾಯುತ್ತಿದ್ದರೆ ನೀರು, ಮಳೆ ಕೊರತೆಯ ನಡುವೆಯೇ ಕಷ್ಟಪಟ್ಟು ತಾವು ಬೆಳೆದ ಟೊಮೆಟೊಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿರುವುದೇ ಈ ಮಂದಹಾಸಕ್ಕೆ ಕಾರಣವಾಗಿದೆ.

ಬಹಳ ದಿನಗಳೇನಲ್ಲ. ಒಂದೂವರೆ ತಿಂಗಳ ಹಿಂದಷ್ಟೇ  25 ಕೆ.ಜಿ ಟೊಮೆಟೊ ತುಂಬಿದ ಚೀಲ ಬರೀ ₹ 50, 70ಕ್ಕೆ ಮಾರಾಟವಾಗುತ್ತಿತ್ತು. ಈ ಕನಿಷ್ಠ ಬೆಲೆಗೆ ತಮ್ಮ ಉತ್ಪನ್ನ ಮಾರಾಟವಾದ ರೈತರ ಕರುಳು ಚುರುಗುಟ್ಟುತ್ತಿತ್ತು. ಮತ್ತೊಂದೆಡೆ ಬೆಳೆಗೆ ಮಾಡಿದ ಖರ್ಚು ಹೊರಡಲಿಲ್ಲ. ಏನು ಮಾಡುವುದು ಎಂದು ರೈತರು ದಿಕ್ಕು ತೋಚದಂತಾಗಿದ್ದರು.

ಬಂದಷ್ಟು ಬರಲಿ. ಗಿಡಗಳನ್ನ ಕಾಪಾಡಿಕೊಳ್ಳೋಣ. ಬರದಲ್ಲಿ ಇದನ್ನೂ ಕಳೆದುಕೊಂಡರೆ ಏನೂ ಇಲ್ಲ ಎಂದು ನೀರು ಹರಿಸಿ ಟೊಮೆಟೊ ಬೆಳೆ ಸಂರಕ್ಷಣೆ ಮಾಡಿಕೊಂಡು ಬಂದ ರೈತರ ನಿರೀಕ್ಷೆಯನ್ನು ಬೆಳೆ ಹುಸಿ ಮಾಡಲಿಲ್ಲ. ಇದ್ದಕ್ಕಿದ್ದಂತೆಯೇ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಅಟ್ಟ ಏರಿದ್ದು, ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಕಳೆದ ಒಂದು ತಿಂಗಳಿಂದ ತುಮಕೂರು ಎಪಿಎಂಸಿ ಮಾರುಕಟ್ಟೆಯಲ್ಲಿ 25 ಕೆ.ಜಿ ಟೊಮೆಟೊ ತುಂಬಿದ ಚೀಲ ₹ 800, 900 ಮತ್ತು 1100ಕ್ಕೆ ಮಾರಾಟ ಆಗುತ್ತಾ  ಬಂದಿದೆ.

ಮಂಗಳವಾರ ಇದ್ದಕ್ಕಿದ್ದಂತೆಯೇ  22 ಕೆ.ಜಿ ಟೊಮೆಟೊ ತುಂಬಿದ ₹ 1300ಕ್ಕೆ ಮಾರಾಟವಾದರೆ 25 ಕೆ.ಜಿ ತುಂಬಿದ ಚೀಲ 1400ಕ್ಕೆ ಮಾರಾಟ ಆಗಿದೆ!

ಮಾರುಕಟ್ಟೆಗೆ ಟೊಮೆಟೊ ಮಾರಾಟ ಮಾಡಲು ಬಂದ ರೈತರಲ್ಲಿ ಆಷಾಢದಲ್ಲೂ ಯುಗಾದಿ ಹಬ್ಬದ ಸಂಭ್ರಮ ಕಂಡು ಬಂದಿತು. ಕೆಲವರಂತೂ ಕುಣಿದು ಕುಪ್ಪಳಿಸಿದರು.

ಇದೇ ಬೆಲೆ ಇನ್ನೊಂದಿಷ್ಟು ದಿನ ಸ್ಥಿರವಾಗಿರಲಿ ಎಂದು ಎಪಿಎಂಸಿ ಆವರಣದಲ್ಲಿರುವ ದೇವರುಗಳಿಗೆ ಹೋಗಿ ಪ್ರಾರ್ಥಿಸಿದರು.

ಉತ್ತರ ಭಾರತದ ರಾಜ್ಯಗಳಿಂದ ಬೇಡಿಕೆ

ಉತ್ತರ ಭಾರತದ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಅಲ್ಲಿ ಬೆಳೆ ಕಡಿಮೆ ಆಗಿದೆ. ಹೀಗಾಗಿ, ರಾಜ್ಯದಿಂದ ಟೊಮೆಟೊ ಪೂರೈಕೆಯಾಗುತ್ತಿದ್ದು, ಬೆಲೆ ಹೆಚ್ಚಾಗಲು ಕಾರಣವಾಗಿದೆ. ನಮ್ಮ ರೈತರಿಗೂ ಒಂದಿಷ್ಟು ಅನುಕೂಲವಾಗಿದೆ. ಇನ್ನೂ 15–20 ದಿನ ಇದೇ ರೀತಿ ಬೆಲೆ ಸ್ಥಿರವಾಗಿರುತ್ತದೆ ಎಂದು ಟೊಮೆಟೊ ಸಗಟು ಖರೀದಿದಾರರಾದ ಸೂರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಎರಡೂವರೆ ಎಕರೆಯಲ್ಲಿ ₹ 5 ಲಕ್ಷ  ಆದಾಯ

ಬಹಳ ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದೇವೆ. ಪ್ರತಿ ವರ್ಷ 25 ಕೆ.ಜಿ ಚೀಲಕ್ಕೆ ಗರಿಷ್ಠ ಎಂದರೆ ₹ 1000ಕ್ಕೆ ಮಾರಾಟ ಆಗಿತ್ತು. ಅದೂ ಕೂಡಾ ಒಂದೆರಡು ದಿನ ಇರುತ್ತಿತ್ತು. ಈ ವರ್ಷ ಬೆಲೆ 15–20 ದಿನಗಳಿಂದ ಸ್ಥಿರವಾಗಿದೆ ಎಂದು ತುಮಕೂರು ತಾಲ್ಲೂಕಿನ  ಗಂಗಸಂದ್ರ ಗ್ರಾಮದ ರೈತ ದಿನೇಶ್ ‘ಪ್ರಜಾವಾಣಿ’ಗೆ  ತಿಳಿಸಿದರು.

ಎರಡೂವರೆ ಎಕರೆಯಲ್ಲಿ ಟೊಮೆಟೊ ಬೆಳೆದಿದ್ದು, ಈಗಾಗಲೇ ₹ 5 ಲಕ್ಷ ಆದಾಯ ಬಂದಿದೆ. ಇದೇ ರೀತಿ ಬೆಲೆ ಇದ್ದರೆ ₹ 8–10 ಲಕ್ಷ ಆದಾಯ ನಿರೀಕ್ಷೆ ಮಾಡಿದ್ದೇನೆ. ಬರೀ ಖರ್ಚು ಮಾಡಿ ಹೈರಾಣಾಗಿದ್ದ ನಮಗೆ ಈಗ ಒಂದಿಷ್ಟು ಉಸಿರಾಡುವಂತಾಗಿದೆ ಎಂದು ಹೇಳಿದರು.

ಕೋಲಾರದಲ್ಲಿರುವುದು ಬೃಹತ್ ಟೊಮೆಟೊ ಮಾರುಕಟ್ಟೆ. ಅಲ್ಲಿ ಈಗ 15 ಕೆ.ಜಿ ಟೊಮೆಟೊ ಚೀಲ ₹ 1000ಕ್ಕೆ  ಮಾರಾಟ ಆಗುತ್ತಿದೆ. ಇಲ್ಲಿಂದ ನಾವು ಅಲ್ಲಿಗೆ  ಮಾರಾಟ ಮಾಡಲು ನಾವು ಹೋದರೆ ಖರ್ಚು ಅಷ್ಟೇ ಬರುತ್ತದೆ. ಹೀಗಾಗಿ, ತುಮಕೂರಿನಲ್ಲಿಯೇ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

₹ 1300 , 22 ಕೆ.ಜಿ ಟೊಮೆಟೊ ಚೀಲದ ಬೆಲೆ

₹ 50 ಒಂದೂವರೆ ತಿಂಗಳ ಹಿಂದೆ 1 ಕೆ.ಜಿಗೆ ಇದ್ದ ಬೆಲೆ

₹ 900 ಕೋಲಾರ ಮಾರುಕಟ್ಟೆಯಲ್ಲಿ 15 ಕೆ.ಜಿ ಚೀಲದ ಬೆಲೆ

 

ಪ್ರತಿಕ್ರಿಯಿಸಿ (+)