ಗುರುವಾರ, 28 ಮಾರ್ಚ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್‌ ಬಲೂನ್‌

Last Updated 12 ಜುಲೈ 2017, 19:30 IST
ಅಕ್ಷರ ಗಾತ್ರ

ಅವನೊಬ್ಬ ಪುಟ್ಟ ಬಾಲಕ. ಒಂದು ದಿನ ಶಾಲೆಗೆ ಹೋಗುವ ದಾರಿಯಲ್ಲಿ ಅವನಿಗೊಂದು ರಕ್ತಗೆಂಪು ಬಣ್ಣದ ಬಲೂನು ಸಿಗುತ್ತದೆ. ಬೀದಿದೀಪಕ್ಕೆ ಸಿಕ್ಕಿಕೊಂಡಿದ್ದ ಅದನ್ನು ಆ ಬಾಲಕ ಬಿಡಿಸಿ ತನ್ನೊಟ್ಟಿಗೆ ಶಾಲೆಗೆ ತೆಗೆದುಕೊಂಡು ಹೋಗುತ್ತಾನೆ.

ಅದು ಸಾಮಾನ್ಯ ಬಲೂನಲ್ಲ. ಸ್ವಂತ ಬುದ್ಧಿಯಿಂದ ವರ್ತಿಸಬಲ್ಲ, ತನ್ನನ್ನು ಪ್ರೀತಿಸುವವರನ್ನು ಗುರ್ತಿಸಬಲ್ಲ, ಅವರ ಸಾಂಗತ್ಯವನ್ನು ಅರಸಿಕೊಂಡು ಹೋಗುವ ವಿಶೇಷ ಬಲೂನು! ಆ ಬಲೂನು ಸಿಕ್ಕಿದಾಗಿನಿಂದ ಬಾಲಕನ ಜಗತ್ತೇ ಬದಲಾಗುತ್ತದೆ. ಮಳೆ ಬಂದರೆ ತೋಯದಂತೆ ಕೊಡೆಯ ಅಡಿಯಲ್ಲೇ ಕೊಂಡೊಯ್ಯುವಷ್ಟು, ಸ್ಕೂಲ್‌ ಬಸ್ಸಿನಲ್ಲಿ ಬಲೂನು ತೆಗೆದುಕೊಂಡು ಹೋಗಲು ಸಾಧ್ಯವಾಗದಿದ್ದಾಗ ಓಡಿಕೊಂಡೇ ಹೋಗುವಷ್ಟು ಬಲೂನನ್ನು ಪ್ರೀತಿಸುತ್ತಾನೆ.

ಆ ಬಲೂನು ಕೂಡ ಬಾಲಕನನ್ನು ಕೋಣೆಯಲ್ಲಿ ಕೂಡಿ ಹಾಕಿದ ಶಾಲೆಯ ಪ್ರಾಂಶುಪಾಲರನ್ನು ಸತಾಯಿಸಿ ಅವನನ್ನು ಬಿಡುಗಡೆ ಮಾಡುವಷ್ಟು, ಹುಡುಗನ ಕೋಣೆಯ ಕಿಟಕಿಯಾಚೆಯೇ ರಾತ್ರಿಯಿಡೀ ಕಾಯುವಷ್ಟು ಅವನನ್ನು ಇಷ್ಟಪಡುತ್ತದೆ.

ಇಂಥದ್ದೊಂದು ವಿಶಿಷ್ಟ, ಮುಗ್ಧ ಕಥನದ ಎಳೆಯಿಟ್ಟುಕೊಂಡು ಆಲ್ಬರ್ಟ್‌ ಲ್ಯಾಮೋರಿಸ್‌ ನಿರ್ದೇಶಿಸಿದ ಸಿನಿಮಾ ‘ದ ರೆಡ್‌ ಬಲೂನ್‌’. ಫ್ರೆಂಚ್‌ ದೇಶದ ಈ ಸಿನಿಮಾ ಅವಧಿ ಕೇವಲ ಮೂವತ್ತೈದು ನಿಮಿಷ. 1956ರಲ್ಲಿ ಬಿಡುಗಡೆಯಾದ ಈ ಚಿತ್ರ ನಿರ್ಮಿಸಿದ್ದೂ ಆಲ್ಬರ್ಟ್‌ ಲ್ಯಾಮೋರಿಸ್‌ ಅವರೇ. ಅಷ್ಟೇ ಅಲ್ಲ, ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಬಾಲಕನೂ ಅವರ ಮಗ ಪ್ಯಾಸ್ಕಲ್‌ ಲ್ಯಾಮೋರಿಸ್‌.

ಬಾಲಕ ಮತ್ತು ಬಲೂನಿನ ಸಂಬಂಧದ ಮೇಲೆ ಪಟ್ಟಣದ ಇತರ ಹುಡುಗರ ಕಣ್ಣು ಬೀಳುತ್ತದೆ. ಆ ಬಲೂನನ್ನು ಕದ್ದು ತೆಗೆದುಕೊಂಡು ಹೋಗಿ ಹಗ್ಗದಿಂದ ಕಟ್ಟಿ ಕಲ್ಲು ಹೊಡೆದು ಹಿಂಸಿಸುತ್ತಾರೆ. ಕೊನೆಯಲ್ಲಿ ಬಾಲಕನನ್ನು ಬಿಟ್ಟುಹೋಗಲಾಗದ ಬಲೂನು ಕಲ್ಲೇಟು ತಿಂದು ಸಾಯುತ್ತದೆ. ಮರುಕ್ಷಣದಲ್ಲಿಯೇ ನಗರದ ಎಲ್ಲ ಬಲೂನುಗಳೂ ಹಾರಿಬಂದು ಬಾಲಕನನ್ನು ಸುತ್ತುವರಿದು ಅವನನ್ನು ಎತ್ತಿಕೊಂಡು ಹಾರಿಹೋಗುವುದರೊಂದಿಗೆ ಸಿನಿಮಾ ಮುಗಿಯುತ್ತದೆ.

ಒಂದು ಬಲೂನು ಮತ್ತು ಒಬ್ಬ ಬಾಲಕನ ನಡುವಿನ ಬಾಂಧವ್ಯದ ಸುತ್ತ ಹೆಣೆದುಕೊಂಡಿರುವ ಈ ಸಿನಿಮಾ ಮೇಲು ನೋಟಕ್ಕೆ ಚೆಂದದೊಂದು ಮಕ್ಕಳ ಸಿನಿಮಾದಂತೆ ಕಂಡರೂ ಫ್ರೆಂಚ್‌ ದೇಶದ ಅಂದಿನ ಕಾಲದ ಹಲವು ಸ್ಥಿತ್ಯಂತರಗಳನ್ನು ಧ್ವನಿಸುವ ಹಲವು ಆಯಾಮಗಳೂ ಈ ಚಿತ್ರದಲ್ಲಿವೆ ಎಂಬುದನ್ನು ವಿಶ್ಲೇಷಕರು ಗುರ್ತಿಸಿದ್ದಾರೆ.

ಈ ಚಿತ್ರ ಚಿತ್ರೀಕರಣಗೊಂಡಿದ್ದು ಪ್ಯಾರೀಸ್‌ನ ಒಂದು ಭಾಗ ಬಿಲೇವಿಲ್ಲೆಯಲ್ಲಿ. ಈ ಚಿತ್ರದ ಚಿತ್ರೀಕರಣದ ಸ್ವಲ್ಪೇ ವರ್ಷಗಳ ನಂತರ, ಅಂದರೆ 1960ರಲ್ಲಿ, ಫ್ರೆಂಚ್‌ ಸರ್ಕಾರ ಕೊಳೆಗೇರಿ ನಿರ್ಮೂಲನೆಯ ಉದ್ದೇಶದಿಂದ ಬಿಲೇವಿಲ್ಲೆಯ ಬಹುತೇಕ ಪ್ರಾಚೀನ ಕಟ್ಟಡಗಳನ್ನು ನೆಲಸಮಗೊಳಿಸಿತು. ನಂತರದ 20 ವರ್ಷಗಳ ಕಾಲ ಅದು ನಿರ್ಜನ ಪ್ರದೇಶವಾಗಿಯೇ ಉಳಿದಿತ್ತು. ಈ ಸಿನಿಮಾದಲ್ಲಿ ಕಾಣುವ ಯಾವ ಕಟ್ಟಡವೂ ಪ್ರಸ್ತುತ ಆ ಸ್ಥಳದಲ್ಲಿ ಇಲ್ಲ. ಆದ್ದರಿಂದ ಒಂದು ಪ್ರಾಚೀನ ಪ್ರದೇಶದ ದಾಖಲೆಯಾಗಿಯೂ ಈ ಚಿತ್ರವನ್ನು ನೋಡಬಹುದು.

ಇದು ಮನುಷ್ಯನೊಳಗಿನ ಮುಗ್ಧತೆ ಮತ್ತು ಕ್ರೌರ್ಯಗಳ ಕಥೆ ಹೇಳುತ್ತದೆ, ಇದು ಬಂಡವಾಳಶಾಹಿ ಮತ್ತು ಕ್ರಿಶ್ಚಿಯಾನಿಟಿಯ ಕುರಿತಾದ ಸಿನಿಮಾ, ಮಹಾಯುದ್ಧದ ಬಗೆಗಿನ ಸೂಚ್ಯ ವ್ಯಾಖ್ಯಾನಗಳಿವೆ, ಹೀಗೆ ಅನೇಕ ರೀತಿಯಲ್ಲಿ ಈ ಚಿತ್ರವನ್ನು ಜಗತ್ತಿನ ಹಲವು ಸಿನಿಮಾ ವಿಶ್ಲೇಷಕರು ವ್ಯಾಖ್ಯಾನಿಸಿದ್ದಾರೆ. ಅವ್ಯಾವುದರ ಗೊಡವೆ ಇಲ್ಲದೆಯೂ ಒಂದು ಆಹ್ಲಾದಕರ ಭಾವವನ್ನು ಉದ್ದೀಪಿಸಿಕೊಳ್ಳಬಯಸುವವರೂ ಈ ಸಿನಿಮಾವನ್ನು ನೋಡಬಹುದು.

ಯೂ ಟ್ಯೂಬ್‌ ಕೊಂಡಿ: goo.gl/HxAc5Y

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT