ಬುಧವಾರ, ಡಿಸೆಂಬರ್ 11, 2019
20 °C

ಕೃಷಿ ಸಾಲ ಸಂಪೂರ್ಣ ಮನ್ನಾಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ಸಾಲ ಸಂಪೂರ್ಣ ಮನ್ನಾಕ್ಕೆ ಒತ್ತಾಯ

ಮಾಲೂರು: ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡಲು ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಂಜಿನಪ್ಪ ತಿಳಿಸಿದರು.

ಮಂಗಳವಾರ ಕಿಸಾನ್ ಖೇತ್‌ ಮಜ್ದೂರ್ ಕಾಂಗ್ರೆಸ್ ತಾಲ್ಲೂಕು ಘಟಕದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡವರು ಮತ್ತು ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸುತ್ತಿದೆ.

ಹಲವು ರೈತಪರ ಯೋಜನೆಗಳನ್ನು ಜಾರಿಗೆ ತಂದಿದೆ. ಬರ ಸ್ಥಿತಿಯನ್ನು ಅರಿತು ರೈತರ ಸಾಲ ಮನ್ನಾ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ವಾಣಿಜ್ಯ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಕೃಷಿಗಾಗಿ ಮಾಡಿದ ಸಾಲವನ್ನೂ ಮನ್ನಾ ಮಾಡಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರು ಬಡವರು ಮತ್ತು ರೈತರ ಮೇಲೆ ಗೋಲಿಬಾರ್‌ ನಡೆಸಿ ಹತ್ಯೆ ಮಾಡಿದರು. ಈಗ ಅಧಿಕಾರದ ಆಸೆಗಾಗಿ ಮತ್ತೆ ರೈತರ ಪರ ಮಾತನಾಡುತ್ತಿದ್ದಾರೆ. ಅವರಿಗೆ ನೈತಿಕ ಮೌಲ್ಯಗಳೇ ಇಲ್ಲ ಎಂದು ಆಪಾದಿಸಿದರು.

ಕಿಸಾನ್ ಖೇತ್‌ ಮಜ್ದೂರ್ ಕಾಂಗ್ರೆಸ್ ಮಾಸ್ತಿ ಘಟಕದ ಅಧ್ಯಕ್ಷರಾಗಿ ಮುನಿಯಪ್ಪ, ಕಸಬಾ ಹೋಬಳಿ ಅಧ್ಯಕ್ಷರಾಗಿ ಲಕ್ಕೇನಹಳ್ಳಿ ಮಂಜುನಾಥ ಆಯ್ಕೆಯಾದರು. ಸಂಘಟನೆಯ 28 ಗ್ರಾಮ ಪಂಚಾಯಿತಿಗಳ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರಾದ ಆಶೋಕ್ ಕುಮಾರ್, ರಮೇಶ್, ಸುಭಾಶ್ಚಂದ್ರ ಬೋಸ್, ಕಾಂಗ್ರೆಸ್ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಚ್. ಚನ್ನರಾಯಪ್ಪ, ಕೆ.ಮುನಿರಾಜು, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ಮುಖಂಡರಾದ ಮುನಿಸ್ವಾಮಿ, ಮರಿಯಪ್ಪ, ಹೋಬಳಪುರ ರವಿ, ಗಿರಿಯಪ್ಪ, ವೆಂಕಟನಾರಾಯಣ್, ಭರತ್, ಮಂಜು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)