ಸೋಮವಾರ, ಡಿಸೆಂಬರ್ 16, 2019
25 °C

ಕ್ರೋಮ್‌ನಲ್ಲಿ ಪಾಪ್‌–ಅಪ್‌ ಬ್ಲಾಕ್‌ ಮಾಡುವುದು ಹೇಗೆ?

ದಯಾನಂದ Updated:

ಅಕ್ಷರ ಗಾತ್ರ : | |

ಕ್ರೋಮ್‌ನಲ್ಲಿ ಪಾಪ್‌–ಅಪ್‌ ಬ್ಲಾಕ್‌ ಮಾಡುವುದು ಹೇಗೆ?

ಯಾವುದಾದರೂ ವಸ್ತು ಇಲ್ಲವೇ ವಿಷಯದ ಬಗ್ಗೆ ಅನುಮಾನ ಮೂಡಿದಾಗ ಅಕ್ಕಪಕ್ಕದವರನ್ನು ಕೇಳುವುದು ಈಗ ಹಳೆಯ ರೂಢಿ! ಈಗೇನಿದ್ದರೂ ಗೂಗಲ್‌ಗುರುವನ್ನು ಕೇಳುವ ಅಭ್ಯಾಸ ಹಲವರದ್ದು. ಇಂತಹ ಹುಡುಕಾಟಕ್ಕೆ ಅನೇಕರ ಆಯ್ಕೆ ಗೂಗಲ್‌ ಕ್ರೋಮ್‌ ಬ್ರೌಸರ್‌.

ಗೂಗಲ್‌ ಕ್ರೋಮ್‌ ಬ್ರೌಸರ್‌ ಮೂಲಕ ಯಾವುದೇ ಹುಡುಕಾಟ ಸುಲಭ. ಆದರೆ, ಬ್ರೌಸರ್‌ನಲ್ಲಿ ಮೂಡಿಬರುವ ಪಾಪ್‌–ಅಪ್‌ಗಳು ಬಹುತೇಕರಿಗೆ ಕಿರಿಕಿರಿ ಎನಿಸಬಹುದು. ಪರದೆಯ ಮೇಲೆ ಮೂಡಿ, ಯಾವುದಾದರೂ ಒಂದು ಆಯ್ಕೆಗಾಗಿ ಪೀಡಿಸುವ ಪಾಪ್‌–ಅಪ್‌ಗಳು ಕೆಲವೊಮ್ಮೆ ಬ್ರೌಸಿಂಗ್‌ನ ಹುಡುಕಾಟದ ತಾಳ್ಮೆ ಪರೀಕ್ಷೆಗೂ ಮುಂದಾಗುತ್ತವೆ!

ಹೀಗೆ ಪಾಪ್‌–ಅಪ್‌ಗಳು ಕಿರಿಕಿರಿ ಎನಿಸುವವರು ಇವನ್ನು ಬ್ಲಾಕ್‌ ಮಾಡಬಹುದು. ಆಂಡ್ರಾಯ್ಡ್‌ ಮೊಬೈಲ್‌ ಫೋನ್‌ಗಳ ಗೂಗಲ್‌ ಕ್ರೋಮ್‌ ಆ್ಯಪ್‌ನಲ್ಲಿ ಪಾಪ್‌– ಅಪ್‌ ಬ್ಲಾಕ್‌ ಮಾಡುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ. ನಿಮ್ಮ ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ಗೂಗಲ್‌ ಕ್ರೋಮ್‌ ಆ್ಯಪ್‌ ತೆರೆಯಿರಿ. ಆ್ಯಪ್‌ ಲಾಂಚ್‌ ಆದ ಬಳಿಕ ಬಲ ಭಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೆನು ಬಟನ್‌ ಮೇಲೆ ಕ್ಲಿಕ್ಕಿಸಿ. ಈಗ ತೆರೆದುಕೊಳ್ಳುವ ಆಯ್ಕೆಗಳ ಪೈಕಿ ಕೆಳಗೆ ಕಾಣುವ ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್‌ ಮಾಡಿ.

ಸೆಟ್ಟಿಂಗ್ಸ್‌ನ ಅಡ್ವಾನ್ಸ್ಡ್‌ ಆಯ್ಕೆಯ ಕೆಳಗಿನ ಸೈಟ್‌ ಸೆಟ್ಟಿಂಗ್ಸ್‌ ಮೇಲೆ ಕ್ಲಿಕ್‌ ಮಾಡಿ. ಈ ಆಯ್ಕೆಗಳಲ್ಲಿ ಕಾಣುವ ಪಾಪ್‌–ಅಪ್ಸ್‌ ಮೇಲೆ ಕ್ಲಿಕ್ಕಿಸಿ. ಇಲ್ಲಿ ಕಾಣುವ ಬಟನ್‌ ಎಡಕ್ಕೆ ಎಳೆದರೆ ಪಾಪ್‌–ಅಪ್‌ಗಳು ಬ್ಲಾಕ್‌ ಆಗುತ್ತವೆ. ಮತ್ತೆ ನೀವು ಪಾಪ್‌–ಅಪ್‌ ಬ್ಲಾಕ್‌ ತೆಗೆಯಬೇಕೆಂದರೆ ಪಾಪ್‌–ಅಪ್‌ ಆಯ್ಕೆಗೆ ಹೋಗಿ ಬಟನ್‌ ಅನ್ನು ಬಲಕ್ಕೆ ಎಳೆದರೆ ಪಾಪ್‌–ಅಪ್‌ ಅಲೋ ಎನೆಬಲ್‌ ಆಗುತ್ತದೆ. ಪಾಪ್‌–ಅಪ್‌ ಎನೆಬಲ್‌ ಆದರೆ ಬ್ರೌಸಿಂಗ್‌ ಮಾಡುವಾಗ ಪಾಪ್‌–ಅಪ್‌ಗಳು ನಿಮ್ಮ ಪರದೆಯ ಮೇಲೆ ಮತ್ತೆ ಕಾಣಿಸಿಕೊಳ್ಳುತ್ತವೆ.

ಹ್ಯಾಕರ್‌ಗಳು ಪಾಪ್‌–ಅಪ್‌ಗಳನ್ನು ಗಾಳದಂತೆ ಬಳಸುವುದರಿಂದ ಬ್ರೌಸಿಂಗ್‌ ಅಭ್ಯಾಸ ಹೆಚ್ಚಾಗಿರುವ ಹಲವರು ಪಾಪ್‌–ಅಪ್‌ಗಳನ್ನು ಬ್ಲಾಕ್‌ ಮಾಡುವುದು ಸಾಮಾನ್ಯ. ಇದರಿಂದ ಪಾಪ್‌–ಅಪ್‌ ಮೇಲೆ ಕ್ಲಿಕ್ಕಿಸಿ ಅನಗತ್ಯವಾಗಿ ಇಂತಹ ಗಾಳಗಳಿಗೆ ಸಿಕ್ಕಿಕೊಳ್ಳುವುದಕ್ಕಿಂತ ಪಾಪ್–ಅಪ್‌ ಬ್ಲಾಕ್‌ ಮಾಡುವುದು ಒಳ್ಳೆಯದು. ಪಾಪ್‌–ಅಪ್‌ಗಳು ನಿಮಗೂ ಕಿರಿಕಿರಿ ಎನಿಸಿದ್ದರೆ ಈ ಆಯ್ಕೆಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.

ಪ್ರತಿಕ್ರಿಯಿಸಿ (+)