ಸೋಮವಾರ, ಡಿಸೆಂಬರ್ 16, 2019
17 °C

ವಿಜ್ಞಾನವನ್ನು ಧರ್ಮದ ಜತೆ ಬೆರೆಸಲಿದೆ ಆರ್‌ಎಸ್ಎಸ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವಿಜ್ಞಾನವನ್ನು ಧರ್ಮದ ಜತೆ ಬೆರೆಸಲಿದೆ ಆರ್‌ಎಸ್ಎಸ್

ನವದೆಹಲಿ: ಪ್ರಾಚೀನ ಮತ್ತು ವೇದ ವಿಜ್ಞಾನಗಳ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸಲು ಆರರಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಇದಕ್ಕೆ ಕೇಂದ್ರ ಸರ್ಕಾರದ ಕೆಲವು ಇಲಾಖೆಗಳೂ ಸಹಕಾರ ನೀಡಲಿವೆ. ತನ್ಮೂಲಕ ವಿಜ್ಞಾನವನ್ನು ಧರ್ಮದ ಜತೆ ಬೆರೆಸಲು ಆರ್‌ಎಸ್‌ಎಸ್ ಮುಂದಾಗಿದೆ ಎಂದು ಕ್ಯಾಚ್‌ನ್ಯೂಸ್ ವೆಬ್‌ಸೈಟ್ ವರದಿ ಮಾಡಿದೆ.

‘ವಿಮಾನಗಳು ವೇದಕಾಲದಲ್ಲೇ ಇದ್ದವು. ಭಗವಂತ ಗಣಪತಿಗೆ ಆನೆಯ ತಲೆ ಜೋಡಿಸಿದ್ದರಿಂದ ಆ ಕಾಲದಲ್ಲೇ ಪ್ಲಾಸ್ಟಿಕ್ ಸರ್ಜರಿ ವಿಧಾನ ಜಾರಿಯಲ್ಲಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಹಿಂದೊಮ್ಮೆ ಹೇಳಿಕೆ ನೀಡಿದ್ದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆರಂಭಗೊಳ್ಳಲಿದೆ ‘ಸೈನ್ಸ್‌ ಇಂಡಿಯಾ ಪೋರ್ಟಲ್’: ಪ್ರಾಚೀನ ಭಾರತದ ವಿಜ್ಞಾನ ವಿಸ್ಮಯಗಳ ಬಗ್ಗೆ ಅಧ್ಯಯನ ನಡೆಸುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ವಿವಿಧ ಇಲಾಖೆಗಳ ಸಹಕಾರದೊಂದಗೆ ‘ವಿಜ್ಞಾನ ಭಾರತಿ’ಯು (ವಿಭಾ/ ಆರ್‌ಎಸ್‌ಎಸ್‌ನ ವಿಜ್ಞಾನ ವಿಭಾಗ) ವಿದ್ಯುನ್ಮಾನ ತರಬೇತಿ ವ್ಯವಸ್ಥೆ ‘ಸೈನ್ಸ್‌ ಇಂಡಿಯಾ ಪೋರ್ಟಲ್’ ಆರಂಭಿಸಲಿದೆ. ಇದಕ್ಕಾಗಿ ಸುಮಾರು 1,000 ವಿಜ್ಞಾನಿಗಳು ಕಾರ್ಯನಿರ್ವಹಿಸಲಿದ್ದಾರೆ. ಮಾಜಿ ರಾಷ್ಟ್ರಪತಿ ಹಾಗೂ ಕ್ಷಿಪಣಿ ಜನಕ ಎಂಬ ಖ್ಯಾತಿವೆತ್ತ ಡಾ. ಎ.‍ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮ ದಿನವಾದ ಅಕ್ಟೋಬರ್ 15ರಂದು ‘ಸೈನ್ಸ್‌ ಇಂಡಿಯಾ ಪೋರ್ಟಲ್’ ಆರಂಭಗೊಳ್ಳಲಿದೆ. ಇದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಕೇಂದ್ರ ಭೂವಿಜ್ಞಾನ ಇಲಾಖೆ, ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆ ಬೆಂಬಲ ನೀಡಲಿವೆ.

ಪರಮಾಣು ಇಂಧನ ಆಯೋಗದ ಮಾಜಿ ಅಧ್ಯಕ್ಷ ಅನಿಲ್ ಕಾಕೋಡ್ಕರ್, ಇಸ್ರೊದ ಮಾಜಿ ಮುಖ್ಯಸ್ಥ ಜಿ. ಮಾಧವನ್ ನಾಯರ್ ‘ವಿಭಾ’ಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ದೇಶದ ಅಭಿವೃದ್ಧಿಯು ಅದರ ವಿಜ್ಞಾನ ಮತ್ತು ತಾಂತ್ರಿಕ ಪ್ರಗತಿಯನ್ನು ಅವಲಂಬಿಸಿದೆ. ಸೂಕ್ತ ಮೂಲಸೌಲಕರ್ಯ ಒದಗಿಸದೆ ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳನ್ನು ಹೊಂದುವುದು ಸಾಧ್ಯವಿಲ್ಲ’ ಎಂದು ‘ವಿಭಾ’ದ ಮಹಾಪ್ರಧಾನ ಕಾರ್ಯದರ್ಶಿ ಎ. ಜಯಕುಮಾರ್ ಹೇಳಿದ್ದಾರೆ.

ಮೋದಿ ಹೇಳಿಕೆ ಉಲ್ಲೇಖ: 2014ರಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮಹಾಭಾರತ ಕತೆಯಲ್ಲಿ ಬರುವ ಕರ್ಣನ ಪಾತ್ರದ ಬಗ್ಗೆ ವಿವರಣೆ ನೀಡಿದ್ದನ್ನೂ ಕ್ಯಾಚ್‌ನ್ಯೂಸ್ ಉಲ್ಲೇಖಿಸಿದೆ. ‘ಕರ್ಣ ಕುಂತಿಯ ಗರ್ಭದಿಂದ ಜನಿಸಿದ್ದಲ್ಲ. ವಂಶವಾಹಿ ವಿಜ್ಞಾನ ಆ ಕಾಲದಲ್ಲೇ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಇದು ಸಾಕ್ಷಿ’ ಎಂದು ಮೋದಿ ಹೇಳಿದ್ದರು. ಮೋದಿ ಮತ್ತು ಅವರ ಕೇಸರಿ ಪಡೆಯು ಧರ್ಮದ ಆಧಾರದ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತಿರುವುದಕ್ಕೆ ಇದು ನಿದರ್ಶನ ಎಂದೂ ಕ್ಯಾಚ್‌ನ್ಯೂಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿಕ್ರಿಯಿಸಿ (+)