ಶನಿವಾರ, ಡಿಸೆಂಬರ್ 7, 2019
25 °C

ಚಾಲನೆ ಸುಲಭಗೊಳಿಸಿದ ಜಿಎಲ್‌ಸಿ 300

Published:
Updated:
ಚಾಲನೆ ಸುಲಭಗೊಳಿಸಿದ ಜಿಎಲ್‌ಸಿ 300

ಭಾರತದಲ್ಲಿ ಬಹಳ ಹಿಂದಿನಿಂದಲೂ ಮರ್ಸಿಡಿಸ್ ಬೆಂಜ್ ಕಾರುಗಳು ಮಾರುಕಟ್ಟೆಯಲ್ಲಿವೆ. ದಶಕದ ಹಿಂದೆ ಯೂರೋಪ್‌ನ ಬಿಎಂಡಬ್ಲ್ಯು, ಔಡಿ ಮೊದಲಾದ ಐಷಾರಾಮಿ ಕಾರು ತಯಾರಕ ಕಂಪೆನಿಗಳು ಭಾರತಕ್ಕೆ ಕಾಲಿಟ್ಟ ನಂತರ ಎಂ.ಬೆಂಜ್‌ ಕಾರುಗಳಿಗೆ ಪೈಪೋಟಿ ಹೆಚ್ಚಿತು.

ಈ ಎಲ್ಲಾ ಕಂಪೆನಿಗಳು ಎಲ್ಲಾ ವರ್ಗದ ಕಾರುಗಳನ್ನು ಅಭಿವೃದ್ಧಿಪಡಿಸಿದರೂ, ಆಯಾ ವರ್ಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿವೆ. ಅದು ಎಂಜಿನ್‌, ಚಾಲನಾ ಅನುಭವ, ಸ್ವಯಂ ನಿಯಂತ್ರಣ... ಹೀಗೆ ಒಂದಿಲ್ಲೊಂದು ಕ್ಷೇತ್ರದಲ್ಲಿ ಈ ಕಾರುಗಳು ವೈಶಿಷ್ಟ್ಯ ಹೊಂದಿವೆ. ಅಂತಹ ವಿಶೇಷ ಕಾರ್‌ಗಳಲ್ಲಿ ಒಂದು ಮರ್ಸಿಡಿಸ್ ಬೆಂಜ್ ಜಿಎಲ್‌ಸಿ 300.

ಕಂಪೆನಿಯ ಆಹ್ವಾನದ ಮೇರೆಗೆ, ಸುಮಾರು 600 ಕಿ.ಮೀಗಳಷ್ಟು ದೂರ ಈ ಎಸ್‌ಯುವಿಯನ್ನು ಚಲಾಯಿಸಲಾಯಿತು. ಇದು 2,000 ಸಿ.ಸಿ ಎಂಜಿನ್‌ ಸಾಮರ್ಥ್ಯದ, ಟರ್ಬೊ ಚಾರ್ಜರ್ ಇರುವ ಪೆಟ್ರೋಲ್‌ ಎಂಜಿನ್‌ ಇರುವ ಎಸ್‌ಯುವಿ. ಎಂಜಿನ್ ಗರಿಷ್ಠ 241 ಬಿಎಚ್‌ಪಿ ಮತ್ತು 370 ಎನ್‌ಎಂ ಟಾರ್ಕ್‌ ಉತ್ಪಾದಿಸುತ್ತದೆ. ಹೀಗಾಗಿ ವೇಗ ಮತ್ತು ವೇಗ ವರ್ಧನೆ ಉತ್ತಮವಾಗೇ ಇತ್ತು. ನಿಂತಲ್ಲಿಂದ 0–100 ಕಿ.ಮೀ/ವೇಗವನ್ನು ಕೇವಲ 6.5 ಸೆಕೆಂಡ್‌ನಲ್ಲಿ ಮುಟ್ಟುವಷ್ಟು ಶಕ್ತಿಯುತವಾಗಿದೆ.

ಕಾರಿನ ಗರಿಷ್ಠ ವೇಗ 211 ಕಿ.ಮೀ/ಗಂಟೆ. ಆದರೆ, ಉತ್ತಮ ರಸ್ತೆ ಸಿಗದ ಕಾರಣ ನಾವು ಗರಿಷ್ಠ 197 ಕಿ.ಮೀ/ಗಂಟೆ ವೇಗವನ್ನಷ್ಟೇ ಮುಟ್ಟಲು ಸಾಧ್ಯವಾಯಿತು. ಈ ಎಸ್‌ಯುವಿಯಲ್ಲಿ ನಾಲ್ಕು ಡ್ರೈವಿಂಗ್ ಮೋಡ್‌ಗಳಿವೆ.

ಕಂಫರ್ಟ್‌ ಮೋಡ್: ಇದು ಉತ್ತಮ ಶಕ್ತಿ ಮತ್ತು ಇಂಧನ ಕ್ಷಮತೆ ಇರುವ ಮೋಡ್. ಇದರಲ್ಲಿ ಉತ್ತಮ ವೇಗವರ್ಧನೆ ಮತ್ತು ಉತ್ತಮ ವೇಗವನ್ನು ಕಾಯ್ದುಕೊಳ್ಳಬಹುದು. ರಾಷ್ಟ್ರೀಯ ಹೆದ್ದಾರಿ 48ರಲ್ಲಿ (ಈ ಮೊದಲು ಎನ್‌.ಎಚ್‌ 4) ಎಸ್‌ಯುವಿ ಟಾಪ್‌ ಗಿಯರ್‌ಗೆ (9ನೇ ಗಿಯರ್‌) ಬದಲಾಗಲೇ ಇಲ್ಲ.

ಇಕೊ ಮೋಡ್: ಇದು ಇಂಧನ ಕ್ಷಮತೆಯ ಮೋಡ್. ಇದರಲ್ಲಿ ಕಾರು ಒಂದು ಲೀಟರ್ ಪೆಟ್ರೋಲ್‌ಗೆ ಗರಿಷ್ಠ 8.9 ಕಿ.ಮೀ ಕ್ರಮಿಸಿತು. ಇದರ ಹೊರತಾಗಿಯೂ ಎಂಜಿನ್ ಉತ್ತಮ ಶಕ್ತಿ ನೀಡುತ್ತಿತ್ತು. ಈ ಒಂದು ಮೋಡ್‌ನಲ್ಲಿ ಮಾತ್ರ 9ನೇ ಗಿಯರ್‌ಗೆ ಬದಲಾಗಲು ಅವಕಾಶ ದೊರೆಯಿತು.

ಸ್ಪೋರ್ಟ್ಸ್ ಮೋಡ್‌: ಇದು ಎಂಜಿನ್‌ ಚುರುಕುತನವನ್ನು ಹೆಚ್ಚಿಸುತ್ತದೆ. ಇದರಲ್ಲಿ 160 ಕಿ.ಮೀ/ಗಂಟೆ ವೇಗ ಮುಟ್ಟಿದರೂ, ಕಾರು 7ನೇ ಗಿಯರ್‌ನಲ್ಲೇ ಇತ್ತು. ಇದರಲ್ಲಿ ವೇಗವರ್ಧನೆ ಉತ್ತಮವಾಗಿತ್ತು. ವೇಗ ಹೆಚ್ಚಿದಷ್ಟೂ, ನಿಯಂತ್ರಣ ಕಷ್ಟವಾಗುವ ಕಾರಣ, ಈ ಮೋಡ್‌ನಲ್ಲಿ ಎಸ್‌ಯುವಿಯ ಸಸ್ಪೆನ್ಷನ್‌ ಗಡಸಾಗುತ್ತದೆ. ಇದರಿಂದ ತಿರುವುಗಳಲ್ಲಿ ವಾಹನ ವಾಲುವುದಿಲ್ಲ. ಸಣ್ಣ–ಪುಟ್ಟ ಹಳ್ಳ–ದಿಣ್ಣೆಗಳಲ್ಲಿ ಎಗರುವುದಿಲ್ಲ. ಜತೆಗೆ ಸ್ಟೀರಿಂಗ್ ಸಹ ಹೆಚ್ಚು ಭಾರವಾಗುತ್ತದೆ. ಇದರಿಂದ ನಿಯಂತ್ರಣ ಸುಲಭವಾಗುತ್ತದೆ.

ಸ್ಪೋರ್ಟ್ಸ್+ ಮೋಡ್: ಇದರಲ್ಲಿ ಎಂಜಿನ್ ಮತ್ತಷ್ಟು ಚುರುಕಾಗುತ್ತದೆ. ಗಿಯರ್ ಬದಲಾವಣೆ ನಿಧಾನವಾಗುತ್ತದೆ. ಅಂದರೆ, ಎಂಜಿನ್‌ನ ವೇಗ ಹೆಚ್ಚುತ್ತದೆ. ಇದರಲ್ಲಿ ಇಂಧನ ದಕ್ಷತೆ ಕಡಿಮೆ. ಆದರೆ ಶಕ್ತಿ ಅಪಾರ. 120 ಕಿ.ಮೀ/ವೇಗದಲ್ಲಿ ಚಲಿಸುತ್ತಿದ್ದರೂ, ಎಸ್‌ಯುವಿ ಇನ್ನೂ 5ನೇ ಗಿಯರ್‌ನಲ್ಲೇ ಇತ್ತು. ಆದರೆ, ಥ್ರೋಟಲ್ ಪೆಡಲ್ ತುಳಿಯುತ್ತಿದ್ದಂತೆ ಚಾಲಕ, ಪ್ರಯಾಣಿಕರೆಲ್ಲರೂ ಹಿಂಬದಿಗೆ ಸರಿಯುವಷ್ಟು ವೇಗವಾಗಿ ಎಸ್‌ಯುವಿ ಮುನ್ನುಗ್ಗುತ್ತಿತ್ತು. ಸ್ಫೋರ್ಟ್ಸ್ ಮೋಡ್‌ನಲ್ಲಿ ಆಗುವ ಸಸ್ಪೆನ್ಷನ್ ಮತ್ತು ಸ್ಟೀರಿಂಗ ಬದಲಾವಣೆ ಇದರಲ್ಲೂ ಆಗುತ್ತದಾದರೂ, ಹೆಚ್ಚಾಗಿರುವ ಎಂಜಿನ್‌ ಶಕ್ತಿಗೆ ಸರಿಸಮನಾಗಿ ಬದಲಾಗುವುದಿಲ್ಲ. ಹೀಗಾಗಿ ಸ್ಪೋರ್ಟ್ಸ್+ ಮೋಡ್‌ಗಿಂತಲೂ, ಸ್ಪೋರ್ಟ್ಸ್ ಮೋಡ್ ಹೆಚ್ಚು ಸುರಕ್ಷಿತ. ಆದರೆ, ಸ್ಪೋರ್ಟ್ಸ್+ ಮೋಡ್‌ ಹೆಚ್ಚು ರೋಮಾಂಚನಕಾರಿಯಾದ ಅನುಭವ ನೀಡಿತು.

ಇನ್ನು ಇದರಲ್ಲಿ ಆಲ್‌ ವ್ಹೀಲ್‌ ಡ್ರೈವ್‌ ತಂತ್ರಜ್ಞಾನವಾದ 4 ಮ್ಯಾಟಿಕ್ ಇದೆ. ಇದು ಕಚ್ಚಾರಸ್ತೆಗಳಲ್ಲಿ ಬಳಕೆಗೆ ಬರುವ ಸವಲತ್ತು. ಇದರಲ್ಲಿ ಬೇರೆ ಆಯ್ಕೆಗಳಿಲ್ಲ. ಹೀಗಾಗಿ ಬಂಡೆಗಲ್ಲು, ನೀರು ನಿಂತ ಬಂಡೆ ಮತ್ತು ಒದ್ದೆ ಹುಲ್ಲು ಹಾಸಿನ ಮೇಲಷ್ಟೇ ಚಾಲನೆ ಮಾಡಲಾಯಿತು.

ಉಳಿದಂತೆ ಸ್ಟೀರಿಂಗ್ ನಿಯಂತ್ರಣ ಮತ್ತು ಬ್ರೇಕಿಂಗ್‌ ಉತ್ತಮವಾಗಿದೆ. ರಾಜ್ಯ ಹೆದ್ದಾರಿಗಳಲ್ಲೂ ಭಾರಿ ವೇಗದಲ್ಲಿ ಚಲಾಯಿಸಲು ಧೈರ್ಯ ನೀಡುವಷ್ಟು ಉತ್ತಮ ಬ್ರೇಕಿಂಗ್ ವ್ಯವಸ್ಥೆ ಇದೆ. ಹೀಗಾಗಿ, ವೇಗ ಮತ್ತು ರೋಮಾಂಚನಕಾರಿ ಚಾಲನೆ ಬಯಸುವವರಿಗೆ ಈ ಎಸ್‌ಯುವಿ ಹೇಳಿ ಮಾಡಿಸಿದಂತಿದೆ. ಎಕ್ಸ್‌ ಷೋರೂಂ ಬೆಲೆ ₹ 50.2 ಲಕ್ಷದಿಂದ ₹ 59.5 ಲಕ್ಷದವರೆಗೆ ಇದೆ.

ಪ್ರತಿಕ್ರಿಯಿಸಿ (+)