ಭಾನುವಾರ, ಡಿಸೆಂಬರ್ 8, 2019
25 °C
ಕಂಪೆನಿಗಳ ಮಹಿಳಾಸ್ನೇಹಿ ನಿಯಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ

ಋತುಸ್ರಾವದ ಮೊದಲ ದಿನ ಮಹಿಳೆಯರಿಗೆ ರಜೆ ಘೋಷಿಸಿದ ಭಾರತದ 2 ಕಂಪೆನಿಗಳು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಋತುಸ್ರಾವದ ಮೊದಲ ದಿನ ಮಹಿಳೆಯರಿಗೆ ರಜೆ ಘೋಷಿಸಿದ ಭಾರತದ 2 ಕಂಪೆನಿಗಳು

ನವದೆಹಲಿ: ಮಹಿಳೆಯರ ಅತ್ಯವಶ್ಯಕ ವಸ್ತುವಾದ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಎನ್‌ಡಿಎ ಸರ್ಕಾರ ಶೇ 12 ರಷ್ಟು ಜಿಎಸ್‌ಟಿ  ತೆರಿಗೆ ವಿಧಿಸಿರುವುದರ ಬಗ್ಗೆ ದೇಶದಾದ್ಯಂತ ಎಲ್ಲರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಋತುಸ್ರಾವದ ಮೊದಲ ದಿನ ಮಹಿಳೆಯರಿಗೆ ರಜೆ ನೀಡುವುದಾಗಿ ಹೇಳಿರುವ ಭಾರತದ 2 ಕಂಪೆನಿಗಳ ಮಹಿಳಾಸ್ನೇಹಿ ನಿಯಮ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 

ಒಟ್ಟು 75 ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ಮುಂಬೈ ಮೂಲದ ಕಂಪೆನಿಯಾದ ಕಲ್ಚರಲ್ ಮಷಿನ್‌ ‘ಮಹಿಳೆಯರು ಋತುಸ್ರಾವದ ಮೊದಲ ದಿನ ರಜೆ ತೆಗೆದುಕೊಳ್ಳಬಹುದು’ ಎಂದು ಹೇಳಿದೆ.

ಅಲ್ಲದೇ ಈ ಕಂಪೆನಿಯ ನಿರ್ಣಯವನ್ನು ಸ್ವಾಗತಿಸಿದ ಗೋಜೂಪ್ ಕಂಪೆನಿ ಕೂಡ ಈ ನಿಯಮವನ್ನು ಜಾರಿಗೆ ತಂದಿದೆ. ಈ ನಿರ್ಣಯದ ಬಗ್ಗೆ ಕಲ್ಚರಲ್ ಮಷಿನ್‌ ಕಂಪೆನಿ ಮಹಿಳಾ ಉದ್ಯೋಗಿಗಳ ಅಭಿಪ್ರಾಯವನ್ನು ಸಂಗ್ರಹಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಮಹಿಳೆಯರು ಕಂಪೆನಿಯ ಹೊಸ ನಿಯಮದಿಂದ ಆಶ್ಚರ್ಯಕ್ಕೊಳಗಾಗಿದ್ದು, ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. 

ಈ ವಿಡಿಯೊದಲ್ಲಿ ಕಲ್ಚರಲ್ ಮೆಷಿನ್ ಕಂಪೆನಿಯ ಎಚ್‌ಆರ್ ದೇವಾಲಿನಾ ಮಜುಂದಾರ್ ಕೂಡ ಮಾತನಾಡಿದ್ದು, ‘ನಮ್ಮ ಸಂಸ್ಥೆಯ ಮೌಲ್ಯಗಳಿಗೆ ಇದು ಹೊಸ ಸೇರ್ಪಡೆ ಎಂದು ಅಭಿಪ್ರಾಯಪಟ್ಟಿದ್ದಾರೆ’. 

‘ನಮ್ಮ ಕಂಪೆನಿಯಲ್ಲಿ ಒಟ್ಟು 75 ಮಹಿಳಾ ಉದ್ಯೋಗಿಗಳಿದ್ದಾರೆ. ಮಹಿಳೆಯರು ಋತುಸ್ರಾವದ ಮೊದಲ ದಿನ ಬಹಳ ಹಿಂಸೆ, ನೋವು ಅನುಭವಿಸುತ್ತಾರೆ. ಎಂದಿನಂತೆ ಕೆಲಸ ಕಾರ್ಯಗಳಲ್ಲಿ ಚಟುವಟಿಕೆಯಿಂದ ಭಾಗವಹಿಸಲು ಕಷ್ಟಸಾಧ್ಯವಾಗುತ್ತದೆ. ಇದು ಖಂಡಿತವಾಗಿಯೂ ಮುಜುಗರದ ಸಂಗತಿಯಲ್ಲ, ಜೀವನದ ಒಂದು ಭಾಗ’ ಎಂದು ಹೇಳಿದ್ದಾರೆ.

ಕಂಪೆನಿಯ ಮತ್ತೊಬ್ಬ ಮುಖ್ಯಸ್ಥರಾದ ರುಚಿರ್ ಜೋಶಿ ಅವರು, ‘ ಪುರುಷರು ಕೂಡ ಋತುಸ್ರಾವದ ವೇಳೆ ಮಹಿಳೆಯರು ಅನುಭವಿಸುವ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ಕಂಪೆನಿಯ ಈ ಹೊಸ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಬಾರದು. ಮಹಿಳೆಯರು ಈ ಸಮಯದಲ್ಲಿ ಕೆಲಸ ಮಾಡದೆ ಕುಳಿತಿರುವುದನ್ನು ನೋಡಿ ಪುರುಷ ಉದ್ಯೋಗಿಗಳು ದೂರು ನೀಡಿರುವುದನ್ನು ನಾನು ಕಂಡಿದ್ದೇನೆ.

ಆದರೆ ನಿಜವಾಗಿಯೂ ಈ ದಿನಗಳಲ್ಲಿ ಮಹಿಳೆಯರು ಅನುಭವಿಸುವ ನೋವನ್ನು  ನಾವು ಅರ್ಥಮಾಡಿಕೊಂಡಿಲ್ಲ. ಈ ವೇಳೆ ಮಹಿಳೆಯರಿಗೆ ಕಚೇರಿಗೆ ಬಂದು ಲವಲವಿಕೆಯಿಂದ ಕೆಲಸ ಮಾಡಲು ಆಗುವುದಿಲ್ಲ. ಹಾಗಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ’ ಎಂದು ಹೇಳಿದ್ದಾರೆ.

ಈ ಎರಡು ಕಂಪೆನಿ ಜಾರಿಗೆ ತಂದಿರುವ ನಿಯಮವನ್ನು ದೇಶದಾದ್ಯಂತ ಜಾರಿಗೆ ತರಬೇಕೆಂದು ಕಲ್ಚರಲ್ ಕಂಪೆನಿಯು,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್  ಅವರಿಗೆ ಅರ್ಜಿ ಸಲ್ಲಿಸಿದೆ.

ಪ್ರತಿಕ್ರಿಯಿಸಿ (+)