ಶನಿವಾರ, ಡಿಸೆಂಬರ್ 7, 2019
16 °C

ಬಿಸಿಲೆಯಲ್ಲೊಂದು ಕಪ್ಪೆ ಶಿಬಿರ!

Published:
Updated:
ಬಿಸಿಲೆಯಲ್ಲೊಂದು ಕಪ್ಪೆ ಶಿಬಿರ!

ಮಾರು ಮುನ್ನೂರು ಮಿಲಿಯ (ಮೂವತ್ತು ಕೋಟಿ) ವರ್ಷಗಳ ಹಿಂದೆ ಪ್ರಥಮ ಬಾರಿಗೆ ಜೀವ ನೀರಿನಿಂದ ನೆಲಕ್ಕೆ ಜಿಗಿಯಿತು. ಇದು ಮಾನವ ಚಂದ್ರನ ಮೇಲೆ ಹೆಜ್ಜೆಯೂರಿದ್ದಕ್ಕೂ ಮಿಗಿಲು! ಅದನ್ನು ಸಾಧಿಸಿದ ಕುಲ (ಉಭಯಚರಿ) ಕಪ್ಪೆಗಳದು. ಅಂದಿನಿಂದ ಇಂದಿನವರೆಗೂ ಉಳಿದು ಬಂದು, ಬೆರಗು ಹುಟ್ಟಿಸುವಂತೆ ವರ್ಷಾವಧಿ ಮತ್ತದೇ ಮಹಾನ್ ಜಗನ್ನಾಟಕವನ್ನು ಆಡುತ್ತವೆ ಈ ಕಪ್ಪೆಗಳು. ಆದರೆ ಜೀವವಿಕಾಸದ ಸರದಿಯಲ್ಲಿ ಕೇವಲ ಎರಡು ಮಿಲಿಯ (ಎರಡು ಲಕ್ಷ) ವರ್ಷಗಳ ಹಿಂದಷ್ಟೇ ಬಂದ ನಾವು (ಮಾನವರು), ಅದನ್ನು ಇನ್ನೂ ಸಮರ್ಪಕವಾಗಿ ಅರ್ಥ ಮಾಡಿಕೊಳ್ಳಲು ಸೋತಿದ್ದೇವೆ. ಅದನ್ನು ಸ್ವಲ್ಪವಾದರೂ ತುಂಬಿಕೊಡಲು ಬಿಸಿಲೆಯ ಖಾಸಗಿ ಅರಣ್ಯ – ಅಶೋಕವನದಲ್ಲಿ ಕಪ್ಪೆ ಗುರುತಿಸಿ ಶಿಬಿರ ನಡೆಯಿತು.

ಅಂತರರಾಷ್ಟ್ರೀಯ ಖ್ಯಾತಿಯ ಕಪ್ಪೆ ವಿಜ್ಞಾನಿ ಡಾ.ಕೆ.ವಿ.ಗುರುರಾಜ ಅವರ (ಕೆವಿಜಿ) ನೇತೃತ್ವದಲ್ಲಿ, ಸತತ ಆರನೇ ವರ್ಷದಲ್ಲಿ ನಡೆಯುತ್ತಿರುವ ‘ಕಪ್ಪೆ ಗುರುತಿಸಿ ಶಿಬಿರ’ವನ್ನು ಗುಬ್ಬಿ ಲ್ಯಾಬ್ಸ್ ಮತ್ತು ಮಂಗಳೂರಿನ ಕುದುರೆಮುಖ ವೈಲ್ಡ್ ಲೈಫ್ ಫೌಂಡೇಷನ್ ಜತೆಯಾಗಿ ನಡೆಸುತ್ತವೆ. ಶಿಬಿರದ ಸಂಯೋಜಕ - ವಿನೀತ್ ಕುಮಾರ್, ಕಪ್ಪೆಗಳ ಕುರಿತೇ ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ.

ಸುಮಾರು ಮೂವತ್ತೈದು ಮಂದಿಯ ಯುವಪಡೆ ಬೆಂಗಳೂರು, ಮಂಗಳೂರು ಸೇರಿದಂತೆ ದೂರದೂರುಗಳಿಂದ ಸ್ವಂತ ವ್ಯವಸ್ಥೆಗಳಲ್ಲಿ ಬಂದು, ಕಷ್ಟಗಳನ್ನೂ ಸೀಮಿತ ಸೌಕರ್ಯಗಳನ್ನೂ ನಗುನಗುತ್ತಲೇ ಅನುಭವಿಸಿ, ಎಲ್ಲ ಖರ್ಚುಗಳನ್ನು ಸಂತೋಷದಲ್ಲೇ ಕೊಟ್ಟಿದ್ದರು. ಇವರಲ್ಲಿ ಹೆಚ್ಚಿನ ಮಂದಿಯ ಕಲಿಕೆ, ವೃತ್ತಿ, ಅನ್ಯಾಸಕ್ತಿಗಳು ಹಲವಿದ್ದರೂ ಮೂರು ದಿನದ ಶಿಬಿರದ ಕೊನೆಯಲ್ಲಿ ಎಲ್ಲ ಘನ ಕಪ್ಪೆರಾಯಭಾರಿಗಳೇ ಆಗಿ ಮರಳಿದರು!

ಶುಕ್ರವಾರ ಬೆಳಿಗ್ಗೆ, ಕಾಲದ ಮಳೆಯೇ ಮುನ್ಮಳೆಯೇ ಎಂಬ ಸಂಶಯದಲ್ಲೇ ನಾವು ಕಾರೇರಿ ಬಿಸಿಲೆಯತ್ತ ಹೊರಟೆವು. ಕುಳ್ಕುಂದ – ಬಿಸಿಲೆ ದಾರಿಯ ವಿಸ್ತರಣೆ ಮತ್ತು ಕಾಂಕ್ರಿಟೀಕರಣ ಸಾಕಷ್ಟು ಪ್ರಗತಿ ಕಂಡಿತ್ತು. ಆದರೆ ಒಂದು ಮಗ್ಗುಲಿನ ಧರೆಯನ್ನು ಕತ್ತರಿಸಿದ್ದ ಕ್ರಮದಲ್ಲಿ ಅಸಂಖ್ಯ ಮರ, ಬಂಡೆಗಳು ದಾರಿಗೆ ಯಾವುದೇ ಕ್ಷಣದಲ್ಲಿ ಮಗಚುವ ಅಪಾಯ ಹೊಡೆದು ಕಾಣುತ್ತಿತ್ತು. ‘ನಾವು ಇಂದು ಪಾರಾದರೂ ಮರಳುವ ದಾರಿಯಲ್ಲಿ ಸಿಕ್ಕಿಬೀಳುವುದು ಖಾತ್ರಿ’ ಎಂದುಕೊಳ್ಳುತ್ತಲೇ ಸಾಗಿದೆವು.

ಕೊನೆಯ ಸುಮಾರು ಮೂರು ಕಿ.ಮೀ. ಉದ್ದಕ್ಕೆ ಅಗಲೀಕರಣ, ಅಂಚಿನ ಕಚ್ಚಾಮೋರಿ, ಕಿರುಸೇತುವೆಗಳು ಮತ್ತು ಮಾರ್ಗದ ಪ್ರಾಥಮಿಕ ನೆಲಗಟ್ಟೆಲ್ಲ ಹಾಕಿದ್ದಾಗಿದೆ; ಕಾಂಕ್ರಿಟೀಕರಣ ಮಾತ್ರ ಬಾಕಿ. ಕುಖ್ಯಾತ ಬೀಟೀಸ್ಪಾಟಿನ ನಡೆಮಡಿಯಲ್ಲಿ ಚೆನ್ನಾಗಿಯೇ ಇದ್ದ ಕಗ್ಗಲ್ಲ ಹಾಸನ್ನು ಕಿತ್ತು, ಬಹುವರ್ಣದ ಇಂಟರ್ಲಾಕು ಹಾಕಿದ್ದಾರೆ! ವೃತ್ತಾಕಾರದ ಮಂಟಪದ ಮಾಡಿಗೆ ಹೊಸ ಹೊದಿಕೆ ಹಾಕಿದ್ದಾರೆ.

ಇನ್ನೂ ಸಾಗಣೆ ಕಾಣದ ಹಳೆ ಕಲ್ಲ ಚಪ್ಪಡಿಗಳು, ‘ಪ್ರಕೃತಿಪ್ರಿಯರ’ ದಾಂದಲೆಗೆ ಕೈಕಾಲು ಮುರಿದುಕೊಂಡ ಕಾಂಕ್ರೀಟ್ ಆಸನಗಳು ಮತ್ತು ಮುಸುಕೆಳೆದು ಕುಳಿತ ಒಂದು ಭಾರೀ ಯಂತ್ರ (ವಿದ್ಯುಜ್ಜನಕ?) ಇನ್ನೂ ಅಭಿವೃದ್ಧಿ ಕಲಾಪ ಬಾಕಿಯಿದೆ ಎಂದೇ ಸೂಚಿಸಿತು. ಒಂಬತ್ತು ಗಂಟೆಯ ಸುಮಾರಿಗೆ ನಾವು ಬಿಸಿಲೆ ಗೇಟ್ ತಲುಪಿದ್ದೆವು. ಸುಮಾರು ಮೂವತ್ತೈದು ಮಂದಿಯ ಶಿಬಿರ, ಯೋಜನೆಯಂತೆ ಮಧ್ಯಾಹ್ನ ಊಟ ಮುಗಿಸಿದ್ದೇ ಯಾವ ಔಪಚಾರಿಕತೆಗಳು ಇಲ್ಲದೇ ಕಲಾಪಕ್ಕಿಳಿದಿತ್ತು.

ಕಪ್ಪೆ ಶಿಬಿರದ ಬಹುಪಾಲು ಚಟುವಟಿಕೆಗಳು ಬಿಸಿಲೆ ಹಳ್ಳಿಯ ಸಾರ್ವಜನಿಕ ಸ್ಥಳಗಳಲ್ಲೇ ನಡೆಯುತ್ತವೆ. ಶುದ್ಧ ವನ್ಯ ಕಲಾಪ ಮಾತ್ರ ನಮ್ಮ ಖಾಸಗಿ ಭೂಮಿ – ಅಶೋಕವನದಲ್ಲಿ ನಡೆಯುತ್ತದೆ. ಆದರೂ ನಾವು ಮೊದಲ ವರ್ಷದಿಂದ ಇಂದಿನವರೆಗೂ ಶಿಬಿರದ ಕುರಿತು ಅರಣ್ಯ ಇಲಾಖೆಗೆ ತಿಳಿವಳಿಕೆ ಮತ್ತು ಮುಕ್ತ ಆಹ್ವಾನ ಕೊಟ್ಟೇ ನಡೆಸುತ್ತಿದ್ದೇವೆ. ಆದರೆ ಇಲಾಖೆಯ ಅಜ್ಞಾನ ಬಹಳ ದೊಡ್ಡದು. ಕೆಲವು ಅಧಿಕಾರಿಗಳಿಗೆ ‘ಕಪ್ಪೆಗಳ ಅಧ್ಯಯನ’ ದೊಡ್ಡ ನಗೆಯ ಸಂಗತಿಯಾದರೆ, ಇನ್ನೂ ಕೆಲವರಿಗೆ ಏನೋ ಕಳ್ಳ ವ್ಯವಹಾರದ ಗುಮಾನಿ!

ಬ್ರಿಟಿಷ್ ಕಾಲದಲ್ಲಿ ಅರಣ್ಯವೆಂದರೆ ನೇರ ಮನುಷ್ಯ ಉಪಯೋಗಕ್ಕೇ (ಉಪಭೋಗ!) ಇರುವ ಮರವೊಂದೇ ಸತ್ಯ. ಅಲ್ಲಿ ಅಲ್ಪ ಸ್ವಲ್ಪ ಸೊಪ್ಪು, ಹೂ, ಕಾಯಿ, ಹಣ್ಣು, ತೊಗಟೆ, ಬೇರು, ಗೆಡ್ಡೆ ಎಂದು ಕಂಡರೂ ಪ್ರಧಾನವಾಗಿ ಅವರು ಲೆಕ್ಕವಿಟ್ಟದ್ದು ಮತ್ತು ತೆಗೆದಾಗ ಮರುನಾಟಿ ಮಾಡಿ ಬೆಳೆಸಿದ್ದೂ ಘನ ಮರಗಳನ್ನೇ!

ದೀಪದ ಕಂಬ, ರೈಲ್ವೇ ಹಳಿ, ಗೃಹೋಪಯೋಗಿ ಮೋಪು, ಸೌದೆಗಳ ಮಿತಿಯನ್ನು ಮೀರಿ ಅರಣ್ಯ ಇಲಾಖೆ ವನ್ಯವನ್ನು ಕಂಡದ್ದೇ ಇಲ್ಲ. ಹಾಗಾಗಿ ಸಂಶೋಧಕರು, ಉನ್ನತ ಚಿಂತಕರು ಸೇರಿ ಸ್ವತಂತ್ರ ಭಾರತದಲ್ಲಿ ‘ಅರಣ್ಯ ಇಲಾಖೆ’ ಅಲ್ಲ, ವನ್ಯ ಇಲಾಖೆ ಬೇಕು ಎಂದೇ ಸಾಧಿಸಿದರು. ಅಂಥವು ಕೇವಲ ಮರಗಳ ಮೊತ್ತವಲ್ಲ, ಜೀವವೈವಿಧ್ಯದ ಆಡುಂಬೊಲವೆಂದೇ ಗುರುತಿಸಿ, ವನಧಾಮಗಳೆಂದು ಹೆಸರಿಸಿ ಪೂರ್ಣ ರಕ್ಷಣೆ ಘೋಷಿಸಿದರು. ಆದರೂ ಮೊನ್ನೆ ಕಬಿನಿಯಲ್ಲಿ ಉಲ್ಲಾಸ ಕಾರಂತರು ಉದ್ಗರಿಸಿದಂತೆ ‘ಆರು ದಶಕಗಳಿಗೂ ಮಿಕ್ಕು ಸ್ವಾತಂತ್ರ್ಯ ನಮ್ಮಲ್ಲಿದ್ದರೂ ನಮ್ಮ ಇಲಾಖೆಗೆ ಇನ್ನೂ ಸ್ಪಷ್ಟ ವನ್ಯ ಪುನರುಜ್ಜೀವನದ ಕಲಾಪಪಟ್ಟಿ ನಿರೂಪಿಸುವುದು ಆಗಿಲ್ಲ’.

ಗುರುರಾಜರು, ಉಲ್ಲಾಸರ ಮಾತಿನ ಭಾವವನ್ನು ಇನ್ನೊಂದು ರೀತಿಯಲ್ಲಿ (ಸಖೇದ) ಹೇಳುತ್ತಾರೆ, ‘ಭಾರತೀಯ ಜೀವವೈವಿಧ್ಯದಲ್ಲಿ ಉಭಯಚರಿಗಳ ಮೂಲಾಂಶವನ್ನೇ ನಾವಿನ್ನೂ ನಿಗದಿಪಡಿಸುವುದಾಗಿಲ್ಲ. ಅಖಿಲ ಭಾರತ ಮಟ್ಟದಲ್ಲಿ ನೋಡಿದರೆ ಗಂಭೀರವಾಗಿ ಕಪ್ಪೆಯ ಬೆನ್ನಿಗೆ ಬಿದ್ದವರು ಇಂದಿಗೂ ಇಪ್ಪತ್ತು – ಮೂವತ್ತೇ ಮಂದಿ.

ಇವರಾದರೂ ಕಪ್ಪೆಗಳ ಆಂಗಿಕ ರಚನೆಗಳ ಔಚಿತ್ಯ, ಜೀವನ ಚಕ್ರದ ವಿವರಗಳು, ವರ್ತನಾ ವಿಜ್ಞಾನವೇ ಮುಂತಾದವನ್ನು ಅಧ್ಯಯನ ಮಾಡುವ ಉನ್ನತ ಆಸೆಗಳನ್ನು ಬದಿಗೊತ್ತಿ, ಕೇವಲ ತೋರನೋಟಕ್ಕೆ ಸಿಗುವ ಬಗೆತರದ ಕಪ್ಪೆಗಳ ಆಂಗಿಕ ವಿವರಗಳನ್ನು ವೈಜ್ಞಾನಿಕ ಭಾಷೆಯಲ್ಲಿ ಸ್ಪಷ್ಟಪಡಿಸಿಕೊಳ್ಳುತ್ತ, ವೈವಿಧ್ಯ ಗಣನೆ ಮಾಡುವವರಷ್ಟೇ ಆಗಿದ್ದಾರೆ.’

ಹಾಗಾಗಿ ಕೆವಿಜಿ ಏನು, ಎಲ್ಲ ಜೀವವಿಜ್ಞಾನದ ಪರಿಣತರೂ ಕಪ್ಪೆಗಳ ಕುರಿತು ದೊಡ್ಡ ಸಂದೇಹಗಳಿಗೆ ಪ್ರಾಂಜಲವಾಗಿ ‘ಗೊತ್ತಿಲ್ಲ’ ಎಂದೇ ಉತ್ತರಿಸು ತ್ತಾರೆ. ಮತ್ತು ಅದೇ ಉಸಿರಿನಲ್ಲಿ ಹೇಳುತ್ತಾರೆ: ‘ಕಪ್ಪೆ ಗುರುತಿಸುವಲ್ಲಿ ನಿಮ್ಮ ವಿದ್ಯಾರ್ಹತೆ ಬಗ್ಗೆ ಸಂದೇಹವಿಟ್ಟುಕೊಳ್ಳಬೇಡಿ. ಈ ಶಿಬಿರಕ್ಕೆ ಮತ್ತೆ ಮತ್ತೆ ಬರುವವರು ಹೆಚ್ಚಿನದೇನೋ ನಿರೀಕ್ಷೆಯಲ್ಲಿ ಬರುವುದೂ ತಪ್ಪು. ಇಲ್ಲಿ ಪ್ರಾಥಮಿಕ ಪಾಠಗಳನ್ನು ಕಲಿತು ನೀವೇ ವಿಜ್ಞಾನಿಗಳಾಗಿ!’ ಇಂಥ ಪ್ರಯತ್ನಗಳ ಫಲವಾಗಿ, ಕಳೆದ ಶತಮಾನದ ಕೊನೆಯಲ್ಲಿ ಎರಡಂಕಿ ಮೀರದಷ್ಟಿದ್ದ ಭಾರತೀಯ ಕಪ್ಪೆಗಳ ವೈವಿಧ್ಯದ ಸಂಖ್ಯೆ ಇಂದು ಮೂರು ಶತಕವನ್ನೇ ಮೀರಿ ಭರದಿಂದ ಬೆಳೆದಿದೆ.

ತೆಳು ನೀರಿನಾಳದಲ್ಲಿ ಹುಗಿದೋ ತೆರೆದ ಕಡ್ಡಿಗಂಟಿಸಿ ಮೇಲೆ ಕೆಸರು ಮೆತ್ತಿಯೋ ಒಡಕು ವಾಟೆಯ ಸಂದಿನ ತೊಟ್ಟು ನೀರಿಗೆ ನುಗ್ಗಿಯೋ ತಗ್ಗುಗಳ ತತ್ಕಾಲೀನ ನೀರಿಗೆ ತುರ್ತು ವಿಕಸನವನ್ನೇ ಹೊಂದಿಸಿಕೊಂಡೋ ಗೊದಮೊಟ್ಟೆಯ ಸ್ಥಿತಿಯನ್ನೇ ಮೊಟ್ಟೆಯೊಳಗೇ ಪೂರೈಸಿ ಮರಿಗಳನ್ನೇ ಕಾಣಿಸುವವರೆಗೂ ಮೊಟ್ಟೆ ರಕ್ಷಣಾ ಕಲಾಪಗಳನ್ನು ರೂಢಿಸಿಕೊಂಡ ನೂರೆಂಟು ಕಪ್ಪೆಗಳಿವೆ.

ನೀರಿನಾಳದಿಂದಲೋ ಭೂಗರ್ಭದಿಂದಲೋ ತೊಡಗಿ ಮಹಾವೃಕ್ಷದ ತುದಿಯವರೆಗೂ ಕಪ್ಪೆ ಎಂಬ ವಾಮನ ತ್ರಿವಿಕ್ರಮನಂತೇ ವ್ಯಾಪಿಸಿ ತೋರುತ್ತದೆ ತನ್ನ ಮಹಿಮೆ. ಒಂದೆರಡು ಸೆಂಟಿಮೀಟರ್ ಗಾತ್ರದಿಂದ (ಮರಿಯಲ್ಲ, ಪ್ರೌಢ) ತೊಡಗಿ ಗೇಣುದ್ದದ ಅಳತೆಯವೂ ಕಪ್ಪೆ ಕುಲದಲ್ಲಿವೆ. ಹವಾಮಾನ, ಭೂರಚನೆ ಮತ್ತು ನೀರು ಹಸಿರುಗಳನ್ನವಲಂಬಿಸಿ ಒಂದು ವಲಯದಿಂದ ಇನ್ನೊಂದಕ್ಕೆ ಸಂಪೂರ್ಣ ವಿಭಿನ್ನ ಅವತಾರಗಳನ್ನು ತಾಳಿವೆ ಕಪ್ಪೆಗಳು.

ಹಾಗೆಂದು ವಿಸ್ತೃತ ಭೂಮಂಡಲವನ್ನೇ ನೋಡಿದರೆ ಖಂಡಾಂತರ ಚಲನೆಗೂ ಬಲವಾದ ಪುರಾವೆ ಕೊಡುವಷ್ಟು ಕೆಲವು ಕಪ್ಪೆಜಾತಿ ವಿಶ್ವವ್ಯಾಪಿಯೂ ಆಗಿವೆ. ಆದರೆ ಬಹುತೇಕ ಕಪ್ಪೆಗಳು ಜೀವಮಾನವೇನು, ಅಸಂಖ್ಯ ತಲೆಮಾರುಗಳನ್ನೂ ಸೂಕ್ತ ವಲಯ ಐದು ಹತ್ತು ಮೀಟರ್ ವ್ಯಾಸಗಳಿಗೆ ಕುಗ್ಗಿದಾಗಲೂ ಹೊಂದಿಸಿಕೊಂಡು ಉಳಿದ ಸಾಹಸವನ್ನು ಕಾಣುತ್ತೇವೆ. ಹಾಗೇ ಇಂದು, ಮನುಷ್ಯ ಉಪದ್ವ್ಯಾಪದಲ್ಲಿ ಪೂರ್ಣ ನಶಿಸಿಯೇ ಹೋಗಿರಬಹುದಾದ ಕಪ್ಪೆ ವೈವಿಧ್ಯವೂ ಇದ್ದಿರಲೇಬೇಕು ಎಂದು ಅಂದಾಜಿಸುವುದಷ್ಟೇ ನಮಗುಳಿದಿದೆ!

ಪೀಠಿಕಾ ಮಾತುಗಳು, ಹಗಲಿನ ಸಣ್ಣ ಕ್ಷೇತ್ರಕಾರ್ಯ, ಸಂಜೆಯ ಚಹಾ. ಅನಂತರ ರಾತ್ರಿಯ ದೊಡ್ಡ ಕ್ಷೇತ್ರಕಾರ್ಯ, ಊಟ, ನಿದ್ರೆ. ಮುಂದಿನ ಒಂದೂವರೆ ದಿನವೂ ಇದೇ ಶಿಸ್ತಿನಲ್ಲಿ ಒಂದಕ್ಕೊಂದು ಪೂರಕವಾಗುತ್ತ ಆದರೆ ಅವಿರತವೆನ್ನುವಂತೇ ನಡೆದವು ಶಿಬಿರದ ಕಲಾಪಗಳು. ಕೆವಿಜಿ ತನ್ನ ಮಾತುಗಳಲ್ಲಿ ಇಲ್ಲಿ ವಾರ್ಷಿಕ ಶಿಬಿರ ತೊಡಗಿದ ಆರು ವರ್ಷಗಳಲ್ಲಿ ಜಾಗತಿಕವಾಗಿ ಕಪ್ಪೆ ತಿಳಿವಳಿಕೆಯಲ್ಲಿ ಮೂಡಿದ ಬದಲಾವಣೆ ಮತ್ತು ಹೊಸತನ್ನು ಹಂಚಿಕೊಂಡರು.

ವಿಧವಿಧವಾದ ಕಪ್ಪೆ ಸ್ವಾರಸ್ಯಗಳ ಉದಾಹರಣೆಗಳನ್ನೂ ಕೊಟ್ಟರು. ಪೂರಕವಾಗಿ ಸ್ಥಿರ ಹಾಗೂ ಚಲನಚಿತ್ರಗಳ ತುಣುಕುಗಳನ್ನೂ ತಮ್ಮ ಲ್ಯಾಪ್‌ಟಾಪ್ ಹಾಗೂ ಪ್ರಾಜೆಕ್ಟರ್ ಸಹಾಯದಲ್ಲಿ ಒದಗಿಸಿದ್ದರು. ಕೆವಿಜಿ ತಮ್ಮ ಸಂಗ್ರಹದಿಂದ ಕೆಲವು ಆಯ್ದ ಪುಸ್ತಕಗಳನ್ನೂ ತಂದು ಅಲ್ಲಿ ಎಲ್ಲರಿಗೂ ಮುಕ್ತವಾಗಿ ಸಿಗುವಂತೇ ಇರಿಸಿದ್ದರು.

ಈ ಬಾರಿ ಪೂರ್ಣ ಮಳೆಗಾಲ ಬಿಸಿಲೆಯಲ್ಲಿ ಇನ್ನೂ (ಜೂನ್ 9ರಿಂದ 11) ತೊಡಗಿಯೇ ಇರಲಿಲ್ಲ. ಭವನದ ಒತ್ತಿನ ಕೆರೆ ಗೊಸರ ಹೊಂಡವಾಗಿಯೇ ಇತ್ತು. ರಾತ್ರಿಯಲ್ಲೂ ಕಪ್ಪೆಗಳ ‘ಪ್ರೇಮ ಚಟುವಟಿಕೆ’ಗಳು ಹೆಚ್ಚು ಜಾಗೃತವಾಗಿರಲಿಲ್ಲ. ಸಣ್ಣ ಕ್ಷೇತ್ರ ಕಾರ್ಯಗಳಿಗೆ ಸಭಾಭವನದ ಆಸುಪಾಸು, ಅಶೋಕವನಕ್ಕೆ ಹೋಗುವ ಕಾಲುದಾರಿ, ಕೆರೆಗಳೆರಡರ ಏರಿ, ದಾರಿಯೊತ್ತಿನ ಕಲ್ಲಕೋರೆಗಳನ್ನು ಬಳಸಿಕೊಂಡಿದ್ದೆವು.ಚಿತ್ರ: ಶಶಿ ಮಿಶ್ರಾ

ವಿಸ್ತೃತ ಕ್ಷೇತ್ರಕಾರ್ಯಕ್ಕೆ ಮೊದಲ ಮುಸ್ಸಂಜೆಯೇ ಅಶೋಕವನಕ್ಕೆ ಹೋದೆವು. ಕತ್ತಲಾವರಿಸುತ್ತಿದ್ದಂತೆ ದಟ್ಟಕಾಡಿನ ಒಳಹೊಕ್ಕು, ವರ್ಷಪೂರ್ತಿ ಹರಿಯುವ ತೊರೆ ವಲಯದ ಉದ್ದಕ್ಕೆ, ಸುಮಾರು ಒಂದೂವರೆ ಗಂಟೆ ಹುಡುಕಾಟ ಮಾಡಿ ಮರಳಿದೆವು. ಎರಡನೇ ರಾತ್ರಿ ಹೊನ್ನಾಟ್ಲಿನ ಮಹಾಬಂಡೆ–ಅಡ್ಡಗಲ್ಯಾರು, ಇದರ ಸುತ್ತಮುತ್ತಣ ತೆರೆದ ಹುಲ್ಲಗುಡ್ಡೆಯಲ್ಲಿ ಸರ್ವೇಕ್ಷಣೆ ಮಾಡಿದೆವು.

ಬೆಳಗ್ಗಿನ ಕಾಫಿ ತಿಂಡಿಗೂ ಮುನ್ನಿನ ಕಿರುಚಾರಣಕ್ಕೆ ಮೊದಲ ದಿನ ತುಳಸಿ ಹೋಟೆಲಿನ ಎದುರಿನ ಕಲ್ಲುಗುಡ್ಡ ಏರಿದ್ದೆವು. ಪಿರಿಪಿರಿ ಮಳೆ, ದಟ್ಟ ಮಂಜು ನಮ್ಮನ್ನು ಪಶ್ಚಿಮ ಘಟ್ಟದ ವಿಹಂಗಮ ನೋಟದಿಂದ ವಂಚಿಸಿದವು. ಆದರೆ ಅಂತಿಮ ದಿನದಂದು ಹಾಗೆ ದಾರಿಯಲ್ಲೇ ಬೀಟೀಸ್ಪಾಟಿಗೆ ನಡೆದಾಗ ನಮ್ಮ ಅದೃಷ್ಟ ಖುಲಾಯಿಸಿತ್ತು; ಮೋಡ ಹರಿದು ಶಿಖರ ಕಣಿವೆಗಳ ದರ್ಶನವಾಗಿತ್ತು.

ಪುಷ್ಪಗಿರಿ ವನಧಾಮದ ವಿಸ್ತರಣೆಯೇ ಬಿಸಿಲೆ, ಅದರ ಅವಿಭಜಿತ ಅಂಗ - ಅಶೋಕವನ ಮತ್ತು ಅಲ್ಲಿನ ನಮ್ಮ ಬಹುತೇಕ ಚಟುವಟಿಕೆಯ ತಾಣಗಳು. ಈ ಸಹಜತೆ ನಮ್ಮನ್ನು ಹಕ್ಕಿ, ಕಪ್ಪೆಗಳಂಥ ಸಣ್ಣ ಜೀವಗಳತ್ತ ಸೆಳೆದಂತೆ, ಆನೆ ಹುಲಿ ಚಿರತೆಗಳಂಥ ದೊಡ್ಡ ಜೀವಗಳತ್ತ, ಹಾವು ಚೇಳುಗಳಂಥ ವಿಷ ಜೀವಿಗಳತ್ತ ಎಚ್ಚರಿಸುತ್ತಲೂ ಇರುತ್ತದೆ. ಕಳೆದ ಆರೂ ವರ್ಷಗಳಲ್ಲಿ ನಮಗೆ ಯಾವುದೇ ವನ್ಯಜೀವಿಯಿಂದ ಆತಂಕ ಬಂದುದಿಲ್ಲ.

ಮಾಮೂಲೀ ಜಿಗಣೆಗಳು, ಅಲ್ಲೊಂದು ಇಲ್ಲೊಂದು ಕಂದೊಡಿ ಹಸಿರು ಹಾವುಗಳೂ ಕೊಂಬಚ್ಚೇಳೂ ದಾಖಲೆಗೆ ಸೇರಿಕೊಂಡವು, ಅಷ್ಟೆ. ರಸ್ತೆ ಸಾವಿಗೀಡಾಗುವ ಹಾವುಗಳ ಬಗ್ಗೆ ಅಪಾರ ಕಾಳಜಿಯ ಯಶಸ್ವಿ ಮತ್ತು ಉದಯ ಹೆಗಡೆ ನಮ್ಮ ಸವಾರಿಗಳಲ್ಲೇ ಎರಡು ಮೂರು ದೊಡ್ಡ ಹಾವಿನಂಥದ್ದೇ ಜೀವಿ - ಸಿಸಿಲಿಯನ್‌ಗಳನ್ನು (ಬೆನ್ನು ಹುರಿಯಿರುವ ಉಭಯಚರಿ, ನಿರ್ವಿಷಕಾರಿ) ಸಕಾಲದಲ್ಲಿ ಗುರುತಿಸಿ ಬಚಾಯಿಸಿದ್ದು ಉಲ್ಲೇಖನಾರ್ಹ.

ಸಭಾಂಗಣದ ಕಲಾಪಗಳಲ್ಲಿ ಮುಖ್ಯ ಮಾತುಗಾರ ಕೆವಿಜಿ. ಮಣಿಪಾಲದ ಮುರಕಲ್ಲ ಪರಿಸರದ ಕಪ್ಪೆಗಳ ಕುರಿತು ಸಂಶೋಧನೆ ನಡೆಸಿರುವ ಮಧುಶ್ರೀ ಮುಡ್ಕೆ, ಕುದುರೆಮುಖ ಗಣಿಯೋಜನೆಯನ್ನೆತ್ತಂಗಡಿ ಮಾಡುವಲ್ಲಿ ಮೊದಲು, ಮತ್ತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ನಿರ್ಮಾನುಷ ಮಾಡುವಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಲೇ ಇರುವ ನಿರೇನ್ ಜೈನ್, ಖಾಸಗಿ ನೆಲೆಯಲ್ಲಿ ಶುದ್ಧ ವೈಜ್ಞಾನಿಕ ಸಂಶೋಧನೆಗಳನ್ನು ಬೆಂಬಲಿಸುವುದರೊಡನೆ, ಅವನ್ನು ಜನಮನದಲ್ಲಿ ಬಿತ್ತರಿಸುವ ಕೆಲಸವನ್ನೂ (ಗಮನಿಸಿ: ಪ್ರಜಾವಾಣಿಯಲ್ಲಿ ಗುಬ್ಬಿ ಲ್ಯಾಬ್ಸಿನ ನಿಯತ ಅಂಕಣಗಳು ಬರುತ್ತಿರುತ್ತವೆ.) ಮಾಡುತ್ತಿರುವ ಗುಬ್ಬಿ ಲ್ಯಾಬ್ಸಿನ ನಿರ್ದೇಶಕ ಎಚ್.ಎಸ್.ಸುಧೀರ್ ಮತ್ತು ಸ್ವತಃ ಕಪ್ಪೆ ಸಂಶೋಧನಾ ವಿದ್ಯಾರ್ಥಿಯಾಗಿರುವ ಶಿಬಿರ ಸಂಯೋಜಕ ವಿನೀತ್ ಕುಮಾರ್ ಕೂಡ ಮಾತಾಡಿದರು.

ಕಪ್ಪೆಗಳು ರಾತ್ರಿ ಕಾಲದಲ್ಲಿ ಚಟುವಟಿಕೆಗಳನ್ನು ಹೆಚ್ಚಿಸುವುದು ನಮಗೆ ತಿಳಿದೇ ಇದೆ. ಸಹಜವಾಗಿ ಹೆಚ್ಚಿನ ಶಿಬಿರಾರ್ಥಿಗಳೆಲ್ಲ ಒಳ್ಳೆಯ ಟಾರ್ಚು, ದೃಶ್ಯ, ಧ್ವನಿ ದಾಖಲಿಸುವ ಸಲಕರಣೆಗಳಿಂದ ಸಜ್ಜಾಗಿಯೇ ಇದ್ದರು. ಶಿಬಿರದ ಕೊನೆಕೊನೆಯ ಕಲಾಪವೊಂದರಲ್ಲಿ ಆ ಎಲ್ಲ ಸಂಗ್ರಹಗಳನ್ನು ಎಲ್ಲರೆದುರು ಪ್ರದರ್ಶಿಸಿ, ಅವರಿಂದಲೇ ವಿವರಣೆಗಳನ್ನು ಹೊರಡಿಸಿದ ಕ್ರಮ ತುಂಬ ಚೆನ್ನಾಗಿತ್ತು. ಇದು ವೈಯಕ್ತಿಕ ಹೆಚ್ಚುಗಾರಿಕೆಯನ್ನು (ಸ್ವಾರ್ಥ? ಸ್ವಾಮ್ಯ?) ಅಳಿಸಿತು. ಶಿಬಿರದ ಯಶಸ್ಸನ್ನು ಸಾರುವುದರೊಡನೆ ಅದುವರೆಗೆ ಅಸ್ಪಷ್ಟವಾಗಿ ಗ್ರಹಿಸಿದ್ದೆಲ್ಲವನ್ನು ಎಲ್ಲರಲ್ಲಿ ಪುನರ್ಮನನಗೊಳಿಸಿ ಗಟ್ಟಿಗೊಳಿಸಿತು.

ಎರಡನೇ ಮಧ್ಯಾಹ್ನಕ್ಕಾಗುವಾಗಲೇ ಎಲ್ಲೋ ಮರ ಬಿದ್ದ ನೆಪದಲ್ಲಿ ಹೋದ ಕರೆಂಟು ಮತ್ತೆ ನಾವಿರುವವರೆಗೆ ಬರಲೇ ಇಲ್ಲ. ಇದು ಸಭಾಕಲಾಪಗಳನ್ನೂ ನಮ್ಮ ದೈನಂದಿನ ನೀರಿನ ಬಳಕೆಯನ್ನೂ ತುಸು ಕಾಡಿತು. ಆದರೆ ವಿವಿಧ ಜೀವನಕ್ರಮಗಳಿಗೆ, ಬಹುತೇಕ ನಗರ ಸವಲತ್ತುಗಳಿಗೇ ರೂಢಿಸಿದ ಮೂವತ್ತೈದು ಮಂದಿ, ಹೆಣ್ಣು ಗಂಡೆಂಬ ಬೇಧವಿಲ್ಲದೆ ಸಮುದಾಯ ಭವನದ ಸೋರುವ ಛತ್ತಿನಡಿಯಲ್ಲಿ ನಿಶ್ಚಿಂತೆಯಿಂದ ಎರಡು ರಾತ್ರಿ ಸೇರಿದಂತೆ ಮೂರು ದಿನಗಳನ್ನು ಪೂರ್ಣ ಚೈತನ್ಯದಿಂದ ಕಳೆದರು.

ಕೊನೆಯಲ್ಲಿ, ಶಿಬಿರ ಕಲಾಪದ ಪೂರ್ಣ ಅರಿವಿಲ್ಲದೇ ಬಂದವರೂ ಸೇರಿದಂತೆ ಎಲ್ಲರೂ ಕಪ್ಪೆ-ರಾಯಭಾರಿಗಳೇ ಆಗಿ ಕಾಣಿಸಿದ್ದರು! ಸುಧೀರ್ ಇದೇ ಮೊದಲು ಘೋಷಿಸಿದಂತೆ, ಸೆಪ್ಟೆಂಬರಿನಲ್ಲಿ ಬರಲಿರುವ ವೃಕ್ಷ-ಕಮ್ಮಟದ ಮಧುರ ಕನಸು ಮತ್ತೆ ಕೆವಿಜಿ ಸೂಚಿಸಿದಂತೆ, ಕೇವಲ ಮಳೆಗಾಲದ ಮೊದಲ ಕಪ್ಪೆ ಅಧ್ಯಯನ ಅಲ್ಲ, ವಿವಿಧ ಋತುಮಾನಗಳ ದಾಖಲೀಕರಣಗಳ ಕುರಿತು ಅದಮ್ಯ ತುಡಿತ ತುಂಬಿಕೊಂಡು ಬಿಸಿಲೆಗೆ ಬಂದಂತೇ ಮರಳಿದೆವು.

ಪ್ರತಿಕ್ರಿಯಿಸಿ (+)