ಗುರುವಾರ , ಡಿಸೆಂಬರ್ 12, 2019
17 °C

ದಲಿತರ ಬಗ್ಗೆ ಈಗ ಪ್ರೀತಿ ಬಂದಿದ್ದೇಕೆ: ಬಿಜೆಪಿಗೆ ಸಚಿವ ರಮೇಶ ಜಾರಕಿಹೊಳಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಲಿತರ ಬಗ್ಗೆ ಈಗ ಪ್ರೀತಿ ಬಂದಿದ್ದೇಕೆ: ಬಿಜೆಪಿಗೆ ಸಚಿವ ರಮೇಶ ಜಾರಕಿಹೊಳಿ ಪ್ರಶ್ನೆ

ಬೆಳಗಾವಿ: ಜನಪ್ರತಿನಿಧಿಗಳ ನಡುವಣ ವಾಕ್ಸಮರಕ್ಕೆ ಇಲ್ಲಿನ ಕುಮಾರಗಂಧರ್ವ ಕಲಾಮಂದಿರದಲ್ಲಿ ಬುಧವಾರ ನಡೆದ ಅಂಬೇಡ್ಕರ್‌ ಪ್ರತಿಮೆ ಅನಾವರಣ ಸಮಾರಂಭ ಸಾಕ್ಷಿಯಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ‘ದಲಿತರ ಮನೆಯಲ್ಲಿ ಚಹಾ ಕುಡಿದು ಬರುವುದು ಅವರ ಸೇವೆಯಲ್ಲ. ದಲಿತರಾದ ರಮೇಶ ಜಿಗಜಿಣಗಿ ಅವರಿಗೆ ನಿಮ್ಮ ನಾಯಕರು ಕೇಂದ್ರದಲ್ಲಿ ಸಂಪುಟದರ್ಜೆ ಸಚಿವ ಸ್ಥಾನಮಾನ ನೀಡಿದರೆ ನಾವು ನಿಮಗೆ ಹೂಮಾಲೆ ಹಾಕುತ್ತೇವೆ. ರಾಜಕೀಯ ಭಾಷಣ ಮಾಡಿದವನಲ್ಲ ನಾನು. ದಲಿತನಾಗಿ ನೊಂದು ಈ ಮಾತು ಹೇಳುತ್ತಿದ್ದೇನೆ; ತಪ್ಪು ಭಾವಿಸಬಾರದು’ ಎಂದು ವೇದಿಕೆಯಲ್ಲಿದ್ದ ಬಿಜೆಪಿ ಸಂಸದ ಸುರೇಶ ಅಂಗಡಿ ಹಾಗೂ ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಅವರಿಗೆ ಹೇಳಿದರು. ದಲಿತರ ಮನೆಯಲ್ಲಿ ಭೋಜನ ಮಾಡುತ್ತಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಟೀಕಿಸಿದರು.

‘ರಾಜ್ಯದಲ್ಲಿ ದಲಿತರು ಬಹುಸಂಖ್ಯಾತರು ಎನ್ನುವುದು ಗೊತ್ತಾಗುತ್ತಿದ್ದಂತೆಯೇ ನಿಮಗೆ ದಲಿತರ ಬಗ್ಗೆ ಪ್ರೀತಿ ಬಂದಿದೆ’ ಎಂದು ಬಿಜೆಪಿಯವರನ್ನು ಅಣಕಿಸಿದರು.

ಈಗಿನ–ಹಿಂದಿನ ಸಂಪುಟ ನೋಡಿ: ‘ಸಿದ್ದರಾಮಯ್ಯ ಸಚಿವ ಸಂಪುಟ ನೋಡಿ, ಎಲ್ಲ ವರ್ಗದವರಿಗೂ ಅವರು ಅವಕಾಶ ಮಾಡಿಕೊಟ್ಟಿದ್ದಾರೆ. ಹಿಂದಿನ ಸಂಪುಟದಲ್ಲಿ ಯಾರ್‍ಯಾರಿದ್ದರು ಎನ್ನುವುದನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ’ ಎಂದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಸಂಸದ ಸುರೇಶ ಅಂಗಡಿ, ‘ವಾಲ್ಮೀಕಿ ಏನಾಗಿದ್ದರು? ಅವರ ಪ್ರೇರಣೆಯಿಂದಲೇ ನಾವು ರಾಮಮಂದಿರ ಕಟ್ಟಲು ಮುಂದಾಗಿದ್ದೇವೆ. ಹಿಂದುಳಿದವರು, ಮುಂದುವರಿದವರು ಎನ್ನುವ ತಾರತಮ್ಯದ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

‘ಚಿಕ್ಕವರಿದ್ದಾಗಿನಿಂದಲೂ ಅಪಮಾನ ಸಹಿಸಿಕೊಂಡು ಓದಿದ ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿ ಎಲ್ಲರಿಗೂ ಅವಕಾಶ ಒದಗಿಸಿದರು. ನಾನು ಸಂಸದನಾಗುವುದಕ್ಕೂ ಸಂವಿಧಾನವೇ ಕಾರಣ. ಅವರು ಲಂಡನ್‌ನಲ್ಲಿ ಓದಿಕೊಳ್ಳುತ್ತಿದ್ದ ತಾಣವನ್ನು ಸ್ಮಾರಕವನ್ನಾಗಿ ಮಾಡಿದ್ದೇವೆ. ಅಂದಿನ ರಾಜಕೀಯ ಪಕ್ಷಗಳು ಅಂಬೇಡ್ಕರ್‌ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಅವರ ಸಮಾಧಿ ಅಭಿವೃದ್ಧಿಪಡಿಸುವುದಕ್ಕೆ ನರೇಂದ್ರ ಮೋದಿಯೇ ಬರಬೇಕಾಯಿತು. ದೇಶದಲ್ಲಿ 70 ವರ್ಷ ಆಡಳಿತ ನಡೆಸಿದ ಸರ್ಕಾರಗಳಿಂದ ಈ ಕಾರ್ಯ ಸಾಧ್ಯವಾಗಲಿಲ್ಲ’ ಎಂದು ಕಾಂಗ್ರೆಸ್‌ನವರನ್ನು ಟೀಕಿಸಿದರು.

‘ಗೆದ್ದರೆ ಪ್ರಧಾನಿಯಾಗಿ ಬಿಡುತ್ತಾರೆ ಎಂದುಕೊಂಡು ಅಂದಿನ ರಾಜಕೀಯ ಪಕ್ಷಗಳು ಅಂಬೇಡ್ಕರ್‌ ಅವರನ್ನು ಸೋಲಿಸಿದವು’ ಎಂದು ತಿರುಗೇಟು ನೀಡಿದರು.

70 ವರ್ಷದಿಂದೇನೂ ಆಗಿಲ್ಲ ಎನ್ನಬೇಡಿ: ಕಾಂಗ್ರೆಸ್‌ ಶಾಸಕ ಫಿರೋಜ್‌ಸೇಠ್‌ ಮಾತನಾಡಿ, ‘ಹಿಂದಿನಿಂದಲೂ ಸಾಧನೆ ಮಾಡಿದವರನ್ನೆಲ್ಲಾ ಪಕ್ಕಕ್ಕೆ ಸರಿಸಿ ಇಂದು ಒಳ್ಳೆ ದಿನಗಳು ಬಂದಿವೆ ಎಂದು ಹೇಳುವುದು, ನಾನೇ ಎಲ್ಲವನ್ನೂ ಮಾಡಿದೆ ಎಂದರೆ ಹೇಗೆ? ಎಲ್ಲರಿಗೂ ಅಧಿಕಾರ, ಹಕ್ಕು ಕೊಟ್ಟವರು ಅಂಬೇಡ್ಕರ್‌ ಎನ್ನುವುದನ್ನು ಮರೆಯಬಾರದು. ದೇಶದಲ್ಲಿ 70 ವರ್ಷದಲ್ಲಿ ಏನೂ ಆಗಿಲ್ಲ ಎನ್ನುವುದು ಸರಿಯಲ್ಲ’ ಎಂದು ಪ್ರತ್ಯುತ್ತರ ನೀಡಿದರು.

ಪ್ರತಿಕ್ರಿಯಿಸಿ (+)