ಗುರುವಾರ , ಡಿಸೆಂಬರ್ 12, 2019
17 °C

ಬರ್ತ್‌ಡೇ ಬೇಡವೆಂದ ನಟ ಸುದೀಪ್‌ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

Published:
Updated:
ಬರ್ತ್‌ಡೇ ಬೇಡವೆಂದ ನಟ ಸುದೀಪ್‌ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಇನ್ನು ಮುಂದೆ ಹುಟ್ಟುಹಬ್ಬ ಆಚರಿಸುವುದಿಲ್ಲವೆಂದು ನಟ ಸುದೀಪ್ ಅವರು ಮಾಡಿರುವ ಟ್ವೀಟ್‌ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಸುದೀಪ್ ಅವರ ನಿರ್ಧಾರವನ್ನು ಸ್ವಾಗತಿಸಿದ್ದರೆ, ಕೆಲವರು ತಮ್ಮ ಅಭಿಮಾನದ ನಟನನ್ನು ನೋಡಲು ಸಿಗುತ್ತಿದ್ದ ಅವಕಾಶ ಕೈ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಸುದೀಪ್‌ ಅವರು ಮಂಗಳವಾರ ಟ್ವಿಟರ್‌ನಲ್ಲಿ ಪ್ರಕಟಿಸಿರುವ ಪತ್ರದಲ್ಲಿ ಇನ್ನು ಮುಂದೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದರು ಹಾಗೂ ಅಭಿಮಾನಿಗಳು ಆ ದಿನದಂದು ಸಾವಿರಾರು ಹಣ ತೆತ್ತು ಕಟೌಟ್‌ಗಳು, ಬ್ಯಾನರ್‌ಗಳನ್ನು ನಿರ್ಮಿಸುವುದು. ಕೇಕ್‌, ಉಡುಗೊರೆಗಳನ್ನು ತರುವುದರ ಬದಲಿಗೆ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು.

ಸುದೀಪ್ ಅವರ ಈ ಮನವಿಯನ್ನು ಹಲವು ಅಭಿಮಾನಿಗಳು ಪುರಸ್ಕರಿಸಿದ್ದಾರೆ, ಆದರೆ ಹುಟ್ಟುಹಬ್ಬದಂದು ತಾವು ಮನೆಯಲ್ಲಿ ಇರುವುದಿಲ್ಲ ಎಂದು ಹೇಳಿರುವ ಸುದೀಪ್ ಅವರ ಮಾತಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಹುಬ್ಬಹಬ್ಬ ಆಚರಿಸಿಕೊಳ್ಳದಿರುವ ನಿಮ್ಮ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ, ಆದರೆ ಮನೆಯಲ್ಲಿ ಇರದೆ ನಿಮ್ಮನ್ನು ನೋಡಲು ದೂರದೂರದಿಂದ ಬರುವ ಅಭಿಮಾನಿಗಳನ್ನು ನಿರಾಸೆ ಪಡಿಸುತ್ತಿರುವುದು ಬೇಸರ ಮೂಡಿಸಿದೆ ಎಂದು ಹಲವು ಅಭಿಮಾನಿಗಳು ಸುದೀಪ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

‘ಸುದೀಪ್ ಅವರ ದಾರಿಯನ್ನು ಎಲ್ಲ ನಟರೂ ಅನುಸರಿಸಲಿ’ ಎಂದೂ ಕೂಡ ಹಲವು ನೆಟ್ಟಿಜನರು ಹೇಳಿದ್ದಾರೆ. ‘ಇದು ಹೊಸ ಬೆಳವಣಿಗೆ, ಸಿನಿನಟರು ಹುಟ್ಟುಹಬ್ಬವನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳದೆ ಜನಪರ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ’ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುದೀಪ್ ಅವರ ಟ್ವೀಟ್‌ನಿಂದಾಗಿ ಸಿನಿಮಾ ನಟರು ಮತ್ತು ಅವರ ಜನಪರ ಕಾರ್ಯಗಳ ಬಗ್ಗೆ ವಾದವೂ ಸಾಮಾಜಿಕ ಜಾಲತಾಣದಲ್ಲಿ ಜಾಗೃತಗೊಂಡಿದೆ.

ಸುದೀಪ್ ಅವರ ಟ್ವೀಟ್‌ ಬಗ್ಗೆ ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ‘ಸುದೀಪ್ ಅವರು ಕನ್ನಡದ ನಟರಾಗಿ ಇಂಗ್ಲೀಷ್‌ನಲ್ಲಿ ಪತ್ರ ಬರೆಯಬಾರದಿತ್ತು’ ಎಂದಿದ್ದಾರೆ. ಇವರಿಗೆ ಕಟುವಾಗಿಯೇ ಟಾಂಗ್ ನೀಡಿರುವ ಸುದೀಪ್ ಅಭಿಮಾನಿಗಳು ‘ಇಷ್ಟು ವರ್ಷಗಳ ಕಾಲ ಕನ್ನಡದ ಸಿನಿಮಾಗಳಲ್ಲಿ ನಟಿಸಿ, ಕನ್ನಡದ ಕಂಪನ್ನು ಬೇರೆ ರಾಜ್ಯಗಳಿಗೂ ಹರಡುತ್ತಿರುವ ನಟ ಇನ್ನೂ ತನ್ನ ಕನ್ನಡ ಪ್ರೇಮವನ್ನು ತೋರಬೇಕು ಎಂದು ಭಾವಿಸುವ ಜನರಿಗೆ ಬುದ್ದಿ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.  

ಈ ಹಿಂದೆ ಅಭಿಮಾನಿಗಳು ತೋರಿದ್ದ ಪ್ರೀತಿಗೆ ಆಭಾರಿಯಾಗಿರುವುದಾಗಿಯೂ ಪತ್ರದಲ್ಲಿ ತಿಳಿಸಿರುವ ಸುದೀಪ್ ಅವರ ಟ್ವೀಟ್‌ ಗೆ 1700 ಮೆಚ್ಚುಗೆಗಳು ವ್ಯಕ್ತವಾಗಿದೆ, 374 ಭಾರಿ ರೀಟ್ವೀಟ್ ಆಗಿದೆ ಹಾಗೂ 274 ಮಂದಿ ಟ್ವೀಟ್‌ಗೆ ‍ಪ್ರತಿಕ್ರಿಯಿಸಿದ್ದಾರೆ.

ಕೆಲವು ಅವಕಾಶವಾದಿಗಳು ಸುದೀಪ್ ಅವರ ಹುಟ್ಟುಹಬ್ಬದ ನೆಪದಲ್ಲಿ ಚಂದಾವಸೂಲಿ ಮಾಡುತ್ತಿದ್ದುದೇ ಸುದೀಪ್ ಅವರು ಹಠಾತ್ತಾಗಿ ಈ ನಿರ್ಣಯ ತಳೆಯಲು ಕಾರಣ ಎಂಬ ಗುಲ್ಲು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಸುದೀಪ್ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳದಿರುವ ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿರುತ್ತಾರೆಯೆ ಅಥವಾ ಅಭಿಮಾನಿಗಳ ಪ್ರೀತಿಯ ಒತ್ತಡಕ್ಕೆ ಮಣಿಯುತ್ತಾರೆಯೆ ಎಂಬುದು ಸುದೀಪ್ ಹುಟ್ಟಿದ ದಿನವಾದ ಸೆ.2ರಂದೇ ಗೊತ್ತಾಗಲಿದೆ.

ಪ್ರತಿಕ್ರಿಯಿಸಿ (+)