ಸೋಮವಾರ, ಡಿಸೆಂಬರ್ 9, 2019
25 °C

ಸರಳ ವಿನ್ಯಾಸದ ರವಿಕೆ ಮತ್ತೆ...ಮತ್ತೆ...

Published:
Updated:
ಸರಳ ವಿನ್ಯಾಸದ ರವಿಕೆ ಮತ್ತೆ...ಮತ್ತೆ...

ಫ್ಯಾಷನ್‌ ಜಗತ್ತಿನಲ್ಲಿ ಎಷ್ಟೇ ಬದಲಾವಣೆಗಳಾದರೂ ಕೊನೆಗೆ ಉಳಿಯುವುದು ಮೂಲ ವಿನ್ಯಾಸಗಳೇ. ಮಹಿಳೆಯರ ರವಿಕೆಯ ವಿನ್ಯಾಸದಲ್ಲಿಯೂ ಹಾಗೆಯೇ ಆಗಿದೆ. ಎಷ್ಟೆಷ್ಟು ವಿನ್ಯಾಸಗಳು ಬಂದರೂ ಹೆಚ್ಚಿನ ಮಹಿಳೆಯರು ಇಂದಿಗೂ ಇಷ್ಟಪಡುವುದು ಸರಳ ವಿನ್ಯಾಸದ ರವಿಕೆಗಳನ್ನೇ. ಅವು ಮಹಿಳೆಯ ವ್ಯಕ್ತಿತ್ವದ ಪ್ರತಿಬಿಂಬವೂ ಹೌದು.

ಫ್ಯಾಷನ್‌ ಎಂದ ಕೂಡಲೇ ಅದ್ಧೂರಿ ವಿನ್ಯಾಸಗಳೇ ಇರಬೇಕೆಂದೇನೂ ಇಲ್ಲ. ನಮ್ಮ ಉಡುಪುಗಳ ಆಯ್ಕೆ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಸರಳತೆಯಲ್ಲಿಯೂ ಸೌಂದರ್ಯ ಇರುತ್ತದೆ. ವಸ್ತ್ರವಿನ್ಯಾಸಕರು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಒಂದಷ್ಟು ದಿನ ಚಾಲ್ತಿಯಲ್ಲಿರುವ ವಿನ್ಯಾಸಗಳು ಮತ್ತೆ ಹಿಂದೆ ಸರಿದು ಕೊನೆಗೆ ಉಳಿಯುವುದು ಮೂಲ ಸ್ವರೂಪಗಳೇ.

ನಮ್ಮ ಅಜ್ಜಿಯಂದಿರು, ಅಮ್ಮಂದಿರು, ಅತ್ತೆಯಂದಿರು ಈಗಲೂ ಸಾಂಪ್ರದಾಯಿಕ ಸೀರೆಗಳ ರಾಯಭಾರಿಗಳಂತೆಯೇ ಕಾಣುತ್ತಾರೆ. ದಿವಂಗತ ಇಂದಿರಾಗಾಂಧಿ, ಅವರ ಸೊಸೆ ಸೋನಿಯಾ ಗಾಂಧಿ, ಮೊಮ್ಮಗಳು ಪ್ರಿಯಾಂಕಾ ಗಾಂಧಿ ಸರಳವಾದ ಸೀರೆ–ರವಿಕೆಗಳ ಮೂಲಕ ಫ್ಯಾಷನ್‌ಗೆ ತಮ್ಮದೇ ವ್ಯಾಖ್ಯಾನ ನೀಡಿದವರು. ಸಿನಿಮಾದಲ್ಲಿ ಬರುವ ಉನ್ನತ ಅಧಿಕಾರಿಗಳ ಪಾತ್ರಧಾರಿ ಹೆಣ್ಣುಮಕ್ಕಳನ್ನು ‘ಹೈನೆಕ್‌’ ರವಿಕೆ, ಗಂಜಿ ಹಾಕಿದ ಖಡಕ್ ಕಾಟನ್‌ ಸೀರೆಯಲ್ಲಿಯೇ ತೋರಿಸಲಾಗುತ್ತದೆ. ಸಾಂಪ್ರದಾಯಿಕ ಹತ್ತಿಯ ಸೀರೆಯೇ ಇರಲಿ, ರೇಷ್ಮೆಯೇ ಇರಲಿ ಯಾವುದೇ ವಿನ್ಯಾಸ, ಕುಸುರಿ ಇಲ್ಲದ ಸರಳವಾದ ರವಿಕೆಯೇ ಚಂದ.

ಮೂರ್ನಾಲ್ಕು ವರ್ಷಗಳಿಂದ ರವಿಕೆಯ ವಿನ್ಯಾಸದಲ್ಲಿ ಕ್ರಾಂತಿಯೇ ಆಗಿದೆ. ಸೀರೆಗಿಂತ ರವಿಕೆಯೇ ಭಾರ ಎಂಬಂತಾಗಿತ್ತು. ವಿನ್ಯಾಸಕಾರರಿಗೆ ಕೈತುಂಬ ಕೆಲಸ. ಜೊತೆಗೆ ಭರ್ಜರಿ ಸಂಪಾದನೆ ಕೂಡಾ. ಮದುವೆ ಮನೆಗೆ ಹೋದರೆ ಎಲ್ಲರೂ ಮದುಮಗಳಷ್ಟೇ ಅಲಂಕಾರ ಮಾಡಿಕೊಂಡಿರುತ್ತಾರೆ.

ಯಾರು ಮದುವೆ ಹೆಣ್ಣು ಎಂದು ಪತ್ತೆ ಮಾಡುವುದು ಕಷ್ಟವಾದರೂ ಅಚ್ಚರಿಯಿಲ್ಲ. ಆದರೆ, ಮದುವೆಯಂಥ ಸಮಾರಂಭಗಳಿಗೆ ತೊಡುವ ಸೀರೆಗಳಿಗಷ್ಟೇ ಈ ಅಲಂಕಾರವಿದ್ದರೆ ಚಂದ. ಪ್ರತಿದಿನ ಉಡುವ ಸೀರೆ– ರವಿಕೆ ಸರಳವಾಗಿದ್ದರೇ ಭೂಷಣ. ಇವು ಬಾಳಿಕೆಯ ದೃಷ್ಟಿಯಿಂದಲೂ ಉತ್ತಮ.

ಈಗ, ಮತ್ತೆ ರವಿಕೆಯ ಟ್ರೆಂಡ್‌ ಹಳೆಯ ಜಮಾನಕ್ಕೆ ಮರಳಿದೆ. ಈ ಟ್ರೆಂಡ್‌ಗೆ ಮುನ್ನುಡಿ ಹಾಡಿದ್ದು ಕಲಂಕರಿ ರವಿಕೆ. ಈಗ ಅದರ ಮುಂದುವರಿಕೆಯಾಗಿ ಸಾದಾ ವಿನ್ಯಾಸದ ರವಿಕೆಯನ್ನೇ ತೊಡುವುದು ಚಾಲ್ತಿಗೆ ಬಂದಿದೆ. ಮ್ಯಾಚಿಂಗ್‌ ಪರಿಕಲ್ಪನೆಯನ್ನೂ ಅದು ತೊಡೆದು ಹಾಕಿದೆ. ಮೊಣಕೈವರೆಗಿನ ತೋಳಿನ ಮತ್ತು ಹೆಚ್ಚು ಬಿಗಿಯಿಲ್ಲದ ವಿನ್ಯಾಸವನ್ನು ಹೆಚ್ಚಿನ ಮಹಿಳೆಯರು ಇಷ್ಟಪಡುತ್ತಿದ್ದಾರೆ.

ಸದಾ ಸಾದಾ ರವಿಕೆಯನ್ನೇ ತೊಡುವ ಸರಳ ಸುಂದರಿ, ಬಾಲಿವುಡ್‌ ನಟಿ ವಿದ್ಯಾಬಾಲನ್‌ ಸರಳತೆಯ ರಾಯಭಾರಿಯಂತೆ ನೋಡುಗರನ್ನು ಸೆಳೆಯುತ್ತಾರೆ. ಹೆಚ್ಚಾಗಿ ಕಾಟನ್‌, ಕಚ್ಚಾ ರೇಷ್ಮೆ ಸೀರೆಯಲ್ಲಿಯೇ ಮಿಂಚುವ ಈಕೆಯನ್ನು ನೋಡುವುದೇ ಚಂದ. ವಿದ್ಯಾ ಹೆಚ್ಚಾಗಿ ತುಂಬು ತೋಳಿನ ರವಿಕೆಯನ್ನೇ ತೊಡುತ್ತಾರೆ. ದಕ್ಷಿಣ ಭಾರತದ ನಟಿ ನಯನತಾರಾ, ಕನ್ನಡದ ನಟಿ ಶ್ರುತಿ ಕೂಡಾ ಈ ಸಾಲಿಗೆ ಸೇರುತ್ತಾರೆ.

ಇಂತಹ ಸರಳ ಸುಂದರಿಯರಿಗಾಗಿಯೇ ಕಡಿಮೆ ವಿನ್ಯಾಸದ ಜರಿಯಿಲ್ಲದ ಸೀರೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಕೆಲವು ಪ್ರಸಿದ್ಧ ಬ್ರ್ಯಾಂಡ್‌ನ ಸೀರೆಗಳು ನೋಡಲು ಸರಳವಾಗಿ ಕಂಡರೂ ದುಬಾರಿ ಬೆಲೆಯಿರುತ್ತವೆ. ಕೈಮಗ್ಗದ ಕಾಂಜೀವರಂ ಸೀರೆಗಳು ಜರಿ ಇಲ್ಲದೆ ಬರುತ್ತಿವೆ. ಇಂಥಾ ಸೀರೆಗಳಿಗೆ ಬಣ್ಣದ ಹೂಗಳಿರುವ ರವಿಕೆ ತೊಟ್ಟರೆ ಸೀರೆಯ ಅಂದ ಇನ್ನಷ್ಟು ಹೆಚ್ಚುತ್ತದೆ.

ಖಾದಿ ಬಟ್ಟೆಯ ರವಿಕೆ

ಕಾಟನ್‌ ಅಥವಾ ರೇಷ್ಮೆ ಸೀರೆಗಳಿಗೆ ಖಾದಿ ರವಿಕೆ ಸರಿಹೊಂದುತ್ತದೆ. ಸಿಂಪಲ್‌ ರವಿಕೆ ಪ್ರಿಯರಿಗೆ ಇದು ಇಷ್ಟವಾಗುತ್ತದೆ. ಮುಕ್ಕಾಲು ಅಥವಾ ತುಂಬು ತೋಳು ಇದ್ದರೆ ಚಂದ. ಅಪ್ಪಟ ಖಾದಿ, ಖಾದಿ ಸಿಲ್ಕ್‌ನಲ್ಲಿ ಎಲ್ಲಾ ಬಣ್ಣಗಳ ಬಟ್ಟೆಗಳು ಲಭ್ಯವಿದೆ.

ಹೀಗೂ ಮಾಡಬಹುದು...

ಸೀರೆಗಳಿಗೆ ಮ್ಯಾಚಿಂಗ್‌ ರವಿಕೆ ತೊಡುವ ಟ್ರೆಂಡ್‌ ಈಗ ಚಾಲ್ತಿಯಲ್ಲಿಲ್ಲ. ಸೀರೆಯ ಜೊತೆಗೆ ಬರುವ ರವಿಕೆ ಕಣಗಳಿಗಿಂತ, ತಮಗಿಷ್ಟ ಬಂದ ಬಟ್ಟೆಯಿಂದ ರವಿಕೆ ಹೊಲಿಸುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸೀರೆಯ ಬಣ್ಣಕ್ಕೆ ವ್ಯತಿರಿಕ್ತವಾದ ರವಿಕೆ ತೊಡುವುದೂ ತುಂಬ ದಿನಗಳಿಂದ ಚಾಲ್ತಿಯಲ್ಲಿದೆ. ಇವು ಹೆಚ್ಚು ಬಾಳಿಕೆಯೂ ಬರುತ್ತದೆ. ಕಾಟನ್‌, ರೇಷ್ಮೆ, ಶಿಫಾನ್‌ ಹೀಗೆ ವಿವಿಧ ಬಗೆಯ ಬಟ್ಟೆಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಖಾದಿ ಸೀರೆಗಳು ಹೆಚ್ಚಾಗಿ ತೆಳು ಮತ್ತು ಮಾಸಿದ ಬಣ್ಣದಲ್ಲಿರುತ್ತವೆ. ಅವುಗಳಿಗೆ ಗಾಢ ಬಣ್ಣದ ಹೂಗಳಿರುವ ರವಿಕೆಗಿಂತ ಉತ್ತಮ ಆಯ್ಕೆ ಇಲ್ಲ. ಬೇರೆ ಬೇರೆ ಸೀರೆಗಳಿಗೆ ಇವುಗಳನ್ನು ಮ್ಯಾಚ್ ಮಾಡಿಕೊಳ್ಳಬಹುದು ಎನ್ನುತ್ತಾರೆ ವಿಸ್ತ್ರವಿನ್ಯಾಸಕಿ ವಿದ್ಯಾ.

*ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಾನು ಸಿಂಪಲ್‌ ಹುಡುಗಿ. ನಾಟಕಗಳಲ್ಲಿ ಜಿಗಿಜಿಗಿ ಉಡುಪುಗಳನ್ನು ತೊಡುತ್ತಿದ್ದ ನನಗೆ ಅವು ನಾಟಕಗಳಿಗಷ್ಟೇ ಸರಿ ಎಂದು ಚಿಕ್ಕಂದಿನಲ್ಲಿಯೇ ನನಗನ್ನಿಸಿತ್ತು. ಹೊರಗೆ ಹೋಗುವಾಗ ಹೆಚ್ಚು ಅಲಂಕಾರ ಮಾಡಿಕೊಂಡರೆ ನಾಟಕ ಮಾಡಲು ಹೋಗುತ್ತಿದ್ದೇನೇನೋ ಎಂದು ಮುಜುಗರವಾಗುತ್ತಿತ್ತು. ಹಾಗಾಗಿ ಹೊರಗೆ ಹೋಗುವಾಗಲೂ ಸಿಂಪಲ್‌ ಆಗಿಯೇ ಇರುತ್ತೇನೆ.

ನಟಿಯಾಗಿರುವ ಕಾರಣ ಹೊರಗೆ ಹೋದಾಗ ಹೆಚ್ಚು ಜನ ಭೇಟಿಯಾಗುತ್ತಾರೆ, ಫೋಟೊ ತೆಗೆಯುತ್ತಾರೆ. ಡೀಪ್‌ನೆಕ್‌ ರವಿಕೆ ತೊಟ್ಟಿದ್ದರೆ ಸೀರೆ ಸರಿಪಡಿಸಿಕೊಳ್ಳುವುದೇ ಕೆಲಸವಾಗುತ್ತದೆ. ಅದಕ್ಕಾಗಿ ಸೀರೆಗಳಿಗೆ ಉದ್ದ ತೋಳಿನ ಟೀಶರ್ಟ್‌ ತೊಡುತ್ತೇನೆ. ನನ್ನ ಬಳಿ ಎಲ್ಲಾ ಬಣ್ಣದ ಟೀಶರ್ಟ್‌ಗಳಿವೆ. ಅದನ್ನು ತೊಟ್ಟರೆ ಆರಾಮವಾಗಿ ಓಡಾಡಲು ಸಾಧ್ಯವಾಗುತ್ತದೆ. ಇಸ್ತ್ರಿಯೂ ಬೇಕಾಗಿಲ್ಲ.

–ಶ್ರುತಿ, ಹಿರಿಯ ನಟಿ

ಪ್ರತಿಕ್ರಿಯಿಸಿ (+)