ಶನಿವಾರ, ಡಿಸೆಂಬರ್ 7, 2019
24 °C

ಸ್ಯಾನಿಟರಿ ಪ್ಯಾಡ್‌ ಜಿಎಸ್‌ಟಿ ತೆರಿಗೆ ಬೇಡ

Published:
Updated:
ಸ್ಯಾನಿಟರಿ ಪ್ಯಾಡ್‌ ಜಿಎಸ್‌ಟಿ ತೆರಿಗೆ ಬೇಡ

ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಜಿಎಸ್‌ಟಿ ತೆರಿಗೆ ವಿಧಿಸಿರುವ ಬಗ್ಗೆ ಓದುಗರ ಪ್ರತಿಕ್ರಿಯೆ ಕೇಳಿದ್ದೆವು. ಅತ್ಯುತ್ತಮ ಸ್ಪಂದನ ದೊರಕಿದೆ. ಅವುಗಳನ್ನು ಪ್ರತಿದಿನ ಇಲ್ಲಿ ಪ್ರಕಟಿಸಲಾಗುತ್ತಿದೆ. ಅಂದ ಹಾಗೆ ನಿಮ್ಮ ಪ್ರಕಾರ, ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಶೇ.12 ತೆರಿಗೆ ವಿಧಿಸಿದ್ದು ಸರಿಯೇ? ನಿಮ್ಮ ಅಭಿಪ್ರಾಯವನ್ನು ಬರೆದು, ನಿಮ್ಮ ಭಾವಚಿತ್ರದೊಂದಿಗೆ ನಮಗೆ ಕಳುಹಿಸಿ. ನಮ್ಮ ವಾಟ್ಸಾಪ್‌ ಸಂಖ್ಯೆ: 95133 22931; ಇಮೇಲ್: metropv@prajavani.co.in

*

ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ಜಿಎಸ್‌ಟಿ ತೆರಿಗೆ ಹೇರಿರುವುದು ಮಹಿಳೆಯರಿಗೆ ನಿಜವಾಗಲೂ ಬೇಸರದ ವಿಷಯ. ಪ್ಯಾಡ್‌ಗಳು ಎಲ್ಲಾ ವರ್ಗದ ಮಹಿಳೆಯರು ಪ್ರತಿ ತಿಂಗಳು ಅತ್ಯವಶ್ಯವಾಗಿ ಬಳಸುವ ವಸ್ತು. ಈಗಾಗಲೇ ಬೆಲೆಗಳ ಬೆಲೆ ದುಬಾರಿಯೇ ಇರುವುದರಿಂದ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಹಾಕಿರುವ ತೆರಿಗೆಯನ್ನು ರದ್ದುಪಡಿಸಬೇಕು.

ಇಂದಿನ ಮಾರುಕಟ್ಟೆಯಲ್ಲಿ ಪ್ಯಾಡ್‌ಗಳಿಗೆ ಬದಲಾಗಿ ಟ್ಯಾಂಪೂನ್‌ಗಳು, ಶೀ–ಕಪ್‌ಗಳು ಲಭ್ಯ. ಆದರೆ ಭಾರತೀಯ ಮಹಿಳೆಯರು ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರಿಗೆ ಇದರ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಇಂತಹ ಹೊಸ ಪ್ರಯೋಗಗಳನ್ನು ಅನುಸರಿಸಲು ಕೊಂಚ ಸಮಯ ಬೇಕಾಗುತ್ತದೆ.

–ಸೌಮ್ಯ ವಸಂತ ಕುಮಾರ್‌, ಎಚ್‌ಎಸ್‌ಆರ್‌ ಲೇಔಟ್‌

*

'ಇ' ಶತಮಾನದ ಮಹಿಳೆಗೆ 'ಆ' ದಿನದ ಮುಜುಗರ ತಡೆದ ಅತ್ಯುತ್ತಮ ಕೊಡುಗೆ 'ಈ' ಸ್ಯಾನಿಟರಿ ನ್ಯಾಪ್‌ಕಿನ್‌ಗಳು. ಇದಕ್ಕೆ ಜಿಎಸ್‌ಟಿ ತೆರಿಗೆ ಹೇರುವುದು ಖಂಡಿತ ತರವಲ್ಲ.

–ಆರ್‌.ಗೀತಾ ಹೆಬ್ಬಾರ್‌, ಕುಮಾರ ಪಾರ್ಕ್‌ ಪೂರ್ವ

*

ನಾನು ಸ್ಯಾನಿಟರಿ ನ್ಯಾಪ್‌ಕಿನ್‌ ಮೇಲೆ ಜಿಎಸ್‌ಟಿ ತೆರಿಗೆಯನ್ನು ವಿರೋಧಿಸುತ್ತೇನೆ. ಅದು ಐಷಾರಾಮಿ ವಸ್ತು ಅಲ್ಲ. ಈಗ ಹಳೆ ಮಾದರಿಯಲ್ಲಿ ಬಟ್ಟೆಗಳನ್ನು ಬಳಸುವುದು ಉದ್ಯೋಗಸ್ಥ ಮಹಿಳೆಯರಿಗೆ ಸುಲಭವಲ್ಲ. ಮತ್ತು ಆರೋಗ್ಯಕ್ಕೂ ಅದು ಒಳ್ಳೆಯದಲ್ಲ.

–ಸೀತಾ ನಿರಂಜನ್‌, ಬ್ರೈನ್‌ಒಟ್ರಿಕ್ಸ್‌ ಅಬಾಕಸ್‌ ನಿರ್ದೇಶಕಿ, ಉತ್ತರಹಳ್ಳಿ

*

ದಯವಿಟ್ಟು ಸ್ಯಾನಿಟರಿ ನ್ಯಾಪ್‌ಕಿನ್ ಮೇಲೆ ತೆರಿಗೆ ಹಾಕಬೇಡಿ. ನಮ್ಮ ಮನೆಯಲ್ಲಿ ನಾನೂ ನನ್ನ ತಂಗಿ ಅಮ್ಮ ಸೇರಿ ಮೂವರು ಮಹಿಳೆಯರಿದ್ದೇವೆ. ಇಂದಿನ ದಿನಬಳಕೆಯ ಅಗತ್ಯ ವಸ್ತುಗಳನ್ನ ಖರೀದಿಸುವುದಕ್ಕೇ ನಮ್ಮಂತಹ ಕೆಳಮಧ್ಯಮ ವರ್ಗದವರಿಗೆ ಕಷ್ಟವಾಗುತ್ತಿದೆ. ಪ್ರತಿ ತಿಂಗಳು ನ್ಯಾಪ್‌ಕಿನ್‌ಗಾಗಿ ಅಮ್ಮನ ಬಳಿ ಹಣಕೇಳುವಾಗ ಅಮ್ಮನ ಕಷ್ಟ ನನಗೆ ಕಣ್ಣೀರು ತರಿಸುತ್ತದೆ. ಇದನ್ನು ನೋಡಿದಾಗಲೆಲ್ಲಾ ಯಾಕಾದರೂ ಹೆಣ್ಣಾಗಿ ಹುಟ್ಟಿದೆನೋ ಎಂದೆನಿಸುತ್ತದೆ. ದಯವಿಟ್ಟು ತೆರಿಗೆ ಹಾಕದೆ ನಮಗೆ ಉಪಕರಿಸಿ.

–ಪತ್ತಂಗಿ ಎಂ.ಕೀರ್ತಿ

ಬೆಂಗಳೂರು

*

ಋತುಚಕ್ರ ಮಹಿಳೆಯರ ಸಹಜ ಕ್ರಿಯಯಾಗಿವುದರಿಂದ ಕೇಂದ್ರ ಸರ್ಕಾರ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಜಿಎಸ್‌ಟಿಯಿಂದ ಹೊರ ತರಬೇಕು. ಎಲ್ಲಾ ಮಹಿಳೆಯರಿಗೂ ಸಹಕಾರ ಸಂಘಗಳು, ಶಾಲಾ- ಕಾಲೇಜು, ಸ್ವ ಸಹಾಯ ಗುಂಪುಗಳು, ಅರೋಗ್ಯ ಕೇಂದ್ರಗಳು ಹಾಗೂ ನ್ಯಾಯಬೆಲೆ ಅಂಗಡಿ ಮೂಲಕ ಉಚಿತ ವಿತರಣೆ ಮಾಡಬೇಕು. ಇದರ ಜೊತೆಗೇ ಋತುಚಕ್ರ ಮೇಲಿನ ಮೌಢ್ಯತೆಯನ್ನು ಹೋಗಲಾಡಿಸಲು ಶಾಲಾ ಮಟ್ಟದಲ್ಲೇ ಕಾರ್ಯಕ್ರಮ ರೂಪಿಸಬೇಕು.

- ಶಿವರಾಜು.ಎಂ ಹೊಸಹಳ್ಳಿ

ವಿಜಯನಗರ

*

ನಗರ ಪ್ರದೇಶದಲ್ಲಿರುವ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಕೊಳ್ಳಲು ಕಷ್ಟವಾಗಲಾರದು. ಆದರೆ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಖರೀದಿಸಲು ಕಷ್ಟವಾಗುತ್ತದೆ. ಅವರು ಮತ್ತೆ ವಾಪಸ್‌ ಬಟ್ಟೆ ಬಳಸಲು ಆರಂಭಿಸಬಹುದು. ಅವರಲ್ಲಿ ಸ್ವಚ್ಛತೆ ಬಗ್ಗೆ ಕಡಿಮೆ ಜ್ಞಾನ ಇರುವುದರಿಂದ ರೋಗಗಳು ಬರಬಹುದು. ಹೀಗಾಗಿ ಮಹಿಳೆಯರ ಆರೋಗ್ಯ ಹಾಗೂ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಜಿಎಸ್‌ಟಿಯಿಂದ ಪ್ಯಾಡ್‌ಗಳನ್ನು ಮುಕ್ತಗೊಳಿಸಬೇಕು

– ಜಯಂತಿ ಚಂದ್ರಶೇಖರ

ಪ್ರತಿಕ್ರಿಯಿಸಿ (+)