ಭಾನುವಾರ, ಡಿಸೆಂಬರ್ 8, 2019
19 °C

ಮದ್ದುಗುಂಡು ಖರೀದಿ ಅಧಿಕಾರ ಸೇನೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಮದ್ದುಗುಂಡು ಖರೀದಿ ಅಧಿಕಾರ ಸೇನೆಗೆ

ನವದೆಹಲಿ: ಸೇನೆಯನ್ನು ‘ಅಲ್ಪಾವಧಿ ಮತ್ತು ತೀವ್ರವಾದ’ ಯುದ್ಧಕ್ಕೆ ಸನ್ನದ್ಧವಾಗಿ ಇರಿಸುವುದಕ್ಕಾಗಿ ಕೆಲವು ವಿಧದ ಮದ್ದುಗುಂಡು ಹಾಗೂ ಬಿಡಿಭಾಗಗಳನ್ನು ಖರೀದಿಸುವ ಅಧಿಕಾರವನ್ನು ಸೇನಾ ಉಪಮುಖ್ಯಸ್ಥರಿಗೆ ಕೇಂದ್ರ ಸರ್ಕಾರ ನೀಡಿದೆ.

46 ವಿಧದ ಮದ್ದುಗುಂಡುಗಳು ಮತ್ತು 10 ವಿವಿಧ ಆಯುಧಗಳ ಬಿಡಿಭಾಗಗಳ ಖರೀದಿಗೆ ಉಪಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ. 20 ವಿಧದ ಶಸ್ತ್ರಾಸ್ತ್ರಗಳು ಮತ್ತು ಆರು ರೀತಿಯ ಸ್ಫೋಟಕಗಳ ಖರೀದಿಗೆ ಸೇನೆಗೆ ಅಧಿಕಾರ ನೀಡುವ ಬಗ್ಗೆ ರಕ್ಷಣಾ ಸಚಿವಾಲಯ ಪರಿಶೀಲನೆ ನಡೆಸುತ್ತಿದೆ.

ಸೇನೆಯ ಸನ್ನದ್ಧತೆಯನ್ನು ಕಾಯ್ದುಕೊಳ್ಳಲು ಬೇಕಿರುವಷ್ಟು ಮದ್ದುಗುಂಡು ಮತ್ತು ಬಿಡಿಭಾಗಗಳ ಈಗಿನ ಮಾರುಕಟ್ಟೆ ಮೌಲ್ಯ ಸುಮಾರು ₹40,000 ಕೋಟಿ. ಆದರೆ ಸೇನೆಯಲ್ಲಿ ಸ್ವಲ್ಪ ಮದ್ದುಗುಂಡು ಸಂಗ್ರಹ ಇರುವುದರಿಂದ ಇಷ್ಟೊಂದು ದೊಡ್ಡ ಮೊತ್ತ ಅಗತ್ಯ ಇಲ್ಲ ಎಂದು ಮೂಲಗಳು ತಿಳಿಸಿವೆ.

ಸೇನೆಯ ಯುದ್ಧಸನ್ನದ್ಧ ಸ್ಥಿತಿಯ ಬಗ್ಗೆ ಮಹಾಲೇಖಪಾಲರು (ಸಿಎಜಿ) ಮತ್ತು ಸಂಸದೀಯ ಸಮಿತಿ ಪ್ರಶ್ನೆಗಳನ್ನು ಎತ್ತಿದ್ದವು. ಕಳೆದ ವರ್ಷ ಉರಿ ಸೇನಾ ನೆಲೆಯ ಮೇಲೆ ನಡೆದ ದಾಳಿಯ ತನಿಖೆ ನಡೆಸಿದ ಆಂತರಿಕ ಸಮಿತಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು.

‘ಮದ್ದುಗುಂಡು ಮತ್ತು ಬಿಡಿಭಾಗಗಳ ತ್ವರಿತ ಖರೀದಿಗೆ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರವನ್ನು ಸೇನೆ ಒತ್ತಾಯಿಸುತ್ತಲೇ ಇತ್ತು’ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೇನೆಯಲ್ಲಿ ಮದ್ದುಗುಂಡುಗಳ ಭಾರಿ ಕೊರತೆ ಇದೆ ಎಂದು 2015ರಲ್ಲಿ ಸಿಎಜಿ ವರದಿ ಹೇಳಿತ್ತು. 40 ದಿನಗಳ ಯುದ್ಧಕ್ಕೆ ಸಾಕಾಗುವಷ್ಟು ಮದ್ದುಗುಂಡು ಸಂಗ್ರಹದಲ್ಲಿ ಇರಬೇಕು ಎಂಬುದು ನಿಯಮ. ಆದರೆ ಮದ್ದುಗುಂಡುಗಳ ಭಾರಿ ಕೊರತೆಯಿಂದಾಗಿ ಈ ನಿಯಮವನ್ನು 20 ದಿನಗಳ ಮದ್ದುಗುಂಡುಗಳಿಗೆ ಇಳಿಸಲಾಗಿತ್ತು.

ಪ್ರತಿಕ್ರಿಯಿಸಿ (+)