ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿತಸ್ಥ ರಾಜಕಾರಣಿಗಳಿಗೆ ನಿರ್ಬಂಧ ಬೇಕೇ, ಬೇಡವೇ: ‘ಸುಪ್ರೀಂ’ ಪ್ರಶ್ನೆ

ಜೀವನಪರ್ಯಂತ ಚುನಾವಣೆಗೆ ಸ್ಪರ್ಧಿಸದಂತೆ ತಡೆ
Last Updated 12 ಜುಲೈ 2017, 20:08 IST
ಅಕ್ಷರ ಗಾತ್ರ

ನವದೆಹಲಿ: ‘ಶಿಕ್ಷೆಗೆ ಒಳಗಾಗಿರುವ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜೀವಮಾನವಿಡೀ ನಿರ್ಬಂಧ ಹೇರುವುದನ್ನು ನೀವು ಬೆಂಬಲಿಸುತ್ತೀರೋ, ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳಿ’ ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.

ಈ ಸಂಬಂಧ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್‌ ಮತ್ತು ನವೀನ್ ಸಿನ್ಹಾ ಅವರಿದ್ದ ಪೀಠವು, ‘ಈ ವಿಚಾರದಲ್ಲಿ ನೀವು ಸುಮ್ಮನೆ ಇರುವುದು ಸರಿಯಲ್ಲ, ಬಾಯಿಬಿಡಿ’ ಎಂದೂ ಆಯೋಗಕ್ಕೆ ತಾಕೀತು ಮಾಡಿತು.

‘ನೀವು (ಆಯೋಗ) ಸುಮ್ಮನೆ ಇರುವುದನ್ನೇ ಆಯ್ಕೆ ಮಾಡಿಕೊಂಡಿದ್ದೀರಾ? ಅರ್ಜಿದಾರರ ಬೇಡಿಕೆಯನ್ನು ಬೆಂಬಲಿಸುತ್ತೀರೋ, ಇಲ್ಲವೋ ಎಂಬುದಕ್ಕೆ  ಹೌದು ಅಥವಾ ಇಲ್ಲ ಎಂದೇ ನೀವು ಹೇಳಬೇಕು. ಶಿಕ್ಷೆಗೆ ಒಳಗಾದ ರಾಜಕಾರಣಿಗಳು ಜೀವಮಾನವಿಡೀ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಿ ಎಂದು ಅರ್ಜಿದಾರರು ಕೇಳುತ್ತಿದ್ದಾರೆ. ನೀವು, ‘ನಾವು ಈ ಬಗ್ಗೆ ಏನೂ ಹೇಳುವುದಿಲ್ಲ’ ಎಂಬಂತೆ ಸುಮ್ಮನೆ ನಿಲ್ಲುತ್ತೀರಾ? ಇಲ್ಲ. ಅದು ಸಾಧ್ಯವಿಲ್ಲ’ ಎಂದು ಪೀಠ ಛೀಮಾರಿ ಹಾಕಿತು.

ಆಗ ಆಯೋಗದ ಪರ ವಕೀಲರು, ‘ರಾಜಕಾರಣವನ್ನು ಅಪರಾಧಮುಕ್ತಗೊಳಿಸುವ ಉದ್ದೇಶವನ್ನು ಆಯೋಗ ಬೆಂಬಲಿಸುತ್ತದೆ ಎಂದು ಆಯೋಗ ಸಲ್ಲಿಸಿರುವ ಪ್ರಮಾಣಪತ್ರದ ಪ್ಯಾರಾವೊಂದರಲ್ಲಿ  ಹೇಳಲಾಗಿದೆ. ಅದನ್ನು ಪ್ರತ್ಯೇಕವಾಗಿ ಓದಬೇಕು’ ಎಂದು ಮನವಿ ಮಾಡಿಕೊಂಡರು.

ಆಗ ಪೀಠವು, ‘ಪ್ರಮಾಣಪತ್ರದ ಎಂಟನೇ ಪ್ಯಾರಾದಲ್ಲಿ ಆ ವಾಕ್ಯ ಇದೆ. ಅರ್ಜಿದಾರರ ಮನವಿಯನ್ನು ಆ ವಾಕ್ಯ ಸ್ಪಷ್ಟವಾಗಿ ಬೆಂಬಲಿಸುತ್ತದೆ. ನೇರವಾಗಿ ಅರ್ಥವಾಗುತ್ತಿರುವ ವಿಷಯವನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳಿ ಎಂದು ನೀವು ಹೇಳುತ್ತಿದ್ದೀರಿ. ಅದು ಸಾಧ್ಯವಿಲ್ಲ’ ಎಂದು ಪೀಠ ನಿರಾಕರಿಸಿತು.

ಜತೆಗೆ, ‘ಅರ್ಜಿದಾರರ ಮನವಿಯನ್ನು ಬೆಂಬಲಿಸುತ್ತೀರೋ, ಇಲ್ಲವೋ ಎಂಬುದನ್ನು ತಿಳಿಸಿ’ ಎಂದು ಮತ್ತೆ ಪ್ರಶ್ನಿಸಿತು.

ಅಲ್ಲದೆ, ‘ಈ ವಿಚಾರದಲ್ಲಿ ನಿಮ್ಮ ನಿಲುವು ಏನೆಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೀರಾ’ ಎಂದು ಪ್ರಶ್ನಿಸಿತು. ಆಗ ಆಯೋಗದ ಪರ ವಕೀಲರು, ‘ಇಲ್ಲ’ ಎಂದರು. ಅದಕ್ಕೆ ಪೀಠ, ‘ಈ ವಿಚಾರದಲ್ಲೂ ನೀವು ಸುಮ್ಮನೆ ಇರುವಂತಿಲ್ಲ’ ಎಂದಿತು. ಪ್ರತ್ಯುತ್ತರವಾಗಿ ವಕೀಲರು, ‘ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವ ಅಧಿಕಾರ ಆಯೋಗಕ್ಕೆ ಇಲ್ಲ. ಈ ಸಂಬಂಧ ಮುಂದಿನ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸುತ್ತೇವೆ’ ಎಂದರು.

ಕೇಂದ್ರ ಸರ್ಕಾರ ಸಹ ಈ ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿ, ಪ್ರಮಾಣಪತ್ರ ಸಲ್ಲಿಸಿತು. ಅರ್ಜಿಯ ವಿಚಾರಣೆಯನ್ನು ಪೀಠವು ಜುಲೈ 19ಕ್ಕೆ ಮುಂದೂಡಿತು.
‘ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಮತ್ತು ಗರಿಷ್ಠ ವಯೋಮಿತಿ ವಿಧಿಸಬೇಕು’ ಎಂದೂ ಅರ್ಜಿದಾರರು ಮನವಿ ಮಾಡಿಕೊಂಡಿದ್ದರು. ಮಾರ್ಚ್‌ 3ರಂದು ವಿಚಾರಣೆ ನಡೆಸಿದ್ದ ಪೀಠ, ತಮ್ಮ ನಿಲುವನ್ನು ತಿಳಿಸುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು.

**

ತಾರತಮ್ಯದ ಬಗ್ಗೆ ಕಳಕಳಿಯೇ?
ತಮ್ಮ ಅರ್ಜಿಯ ಪರ ತಾವೇ ವಾದ ಮಂಡಿಸುತ್ತಿದ್ದ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಒಂದು ಹಂತದಲ್ಲಿ, ‘ಶಿಕ್ಷೆಗೆ ಒಳಗಾಗುವ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಮೇಲೆ ಜೀವಮಾನವಿಡೀ ಸೇವಾ ನಿರ್ಬಂಧ ಹೇರಲಾಗುತ್ತದೆ. ಆದರೆ, ರಾಜಕಾರಣಿಗಳ ಮೇಲೆ ಆರು ವರ್ಷವಷ್ಟೇ ನಿರ್ಬಂಧವಿರುತ್ತದೆ’ ಎಂದರು.

ಆಗ ಪೀಠವು, ‘ನೀವು ಸರ್ಕಾರಿ ನೌಕರರ ಮೇಲಿನ ನಿರ್ಬಂಧವನ್ನು ಸಮರ್ಥಿಸುತ್ತಿದ್ದೀರೋ ಅಥವಾ ಈ ವಿಚಾರದಲ್ಲಿ ತಾರತಮ್ಯವಿದೆ ಎಂದು ಆರೋಪಿಸುತ್ತಿದ್ದೀರೋ’ ಎಂದು ಪ್ರಶ್ನಿಸಿತು.

**

ಈ ವಿಚಾರದಲ್ಲಿ ನಿಮ್ಮ (ಕೇಂದ್ರ ಸರ್ಕಾರ) ಮೇಲೆ ಶಾಸಕಾಂಗದ ಒತ್ತಡ ಇದ್ದರೆ, ನಮಗೆ ತಿಳಿಸಿ. ನಿಮ್ಮ ನಿಲುವು ತಿಳಿಸಲು ನಿರ್ಬಂಧ ಇದ್ದರೆ, ಅದನ್ನಾದರೂ ಸ್ಪಷ್ಟವಾಗಿ ಹೇಳಿ
–ಸುಪ್ರೀಂ ಕೋರ್ಟ್

**

ಶಿಕ್ಷೆಗೆ ಒಳಗಾದ ರಾಜಕಾರಣಿಗಳು ಚುನಾವಣೆಗೆ ಸ್ಪರ್ಧಿಸದಂತೆ ಆಜೀವಪರ್ಯಂತ ನಿರ್ಬಂಧ ಹೇರುವುದು ಸರಿಯಲ್ಲ. ಹೀಗಾಗಿ ಈ ಅರ್ಜಿಯನ್ನು ವಜಾ ಮಾಡಬೇಕು
–ಕೇಂದ್ರ ಸರ್ಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT