ಬುಧವಾರ, ಡಿಸೆಂಬರ್ 11, 2019
20 °C

ಭಾರತ ಶ್ರೇಷ್ಠ ತಂಡವಾಗಲಿದೆ

Published:
Updated:
ಭಾರತ ಶ್ರೇಷ್ಠ ತಂಡವಾಗಲಿದೆ

ನವದೆಹಲಿ: ಭಾರತದಲ್ಲಿ ಹಿಂದೆಂದೂ ಇರದಂತಹ ಶ್ರೇಷ್ಠ ಟೆಸ್ಟ್‌ ಕ್ರಿಕೆಟ್ ತಂಡವನ್ನು ರೂಪಿಸುವ ಅವಕಾಶ ಈಗ ಇದೆ ಎಂದು ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಬುಧವಾರ   ಅವರು ಲಂಡನ್‌ನಿಂದ ‘ಇಂಡಿಯಾ ಟುಡೆ’ ನಿಯತಕಾಲಿಕೆ ಯೊಂದಿಗೆ ಮಾತನಾಡಿದರು.

‘ತಂಡದಲ್ಲಿ ಪ್ರತಿಭಾವಂತ ಮಧ್ಯಮವೇಗಿ ಬೌಲರ್‌ಗಳಿದ್ದಾರೆ.  ವಿಶ್ವದ ಯಾವುದೇ ಪಿಚ್‌ನಲ್ಲಿಯೂ ಉತ್ತಮವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಅವರಿಗೆ ಇದೆ. ಆದ್ದರಿಂದ ವಿದೇಶದಲ್ಲಿಯೂ ನಮ್ಮ ತಂಡ ಶ್ರೇಷ್ಠ ಸಾಧನೆ ಮಾಡುವುದು ಖಚಿತ’ ಎಂದು ಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ಅವರನ್ನು ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು.  ಹೋದ ತಿಂಗಳು ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ನಂತರ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

‘ವಿರಾಟ್ ಕೊಹ್ಲಿ ಅವರೊಬ್ಬ ಚಾಂಪಿಯನ್ ಕ್ರಿಕೆಟಿಗ. ಆದರೆ ಅವರು ಯಶಸ್ಸಿನ ತುತ್ತತುದಿಯನ್ನು ಏರುವುದು ಬಾಕಿ ಇದೆ.  ಮುಂದಿನ ಐದಾರು ವರ್ಷಗಳು ಕೊಹ್ಲಿ ಅವರಿಗೆ ಮಹತ್ವದ ಸಮಯವಾಗಿದೆ’ ಎಂದರು.

‘ಮಹೇಂದ್ರಸಿಂಗ್ ದೋನಿ ಮತ್ತು ಯುವರಾಜ್ ಸಿಂಗ್ ಅವರು ಅನುಭವಿ ಮತ್ತು ಶ್ರೇಷ್ಠ ಕ್ರಿಕೆಟಿಗರಾಗಿದ್ದಾರೆ.  ಎಲ್ಲದಕ್ಕೂ ಒಂದು ಸಂದರ್ಭ ಬರಬೇಕು. ಅದು ಬಂದಾಗ ಯೋಚಿಸುತ್ತೇವೆ. ನಾನಿನ್ನೂ ಭಾರತ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್‌ಗೆ ಮರಳಬೇಕಿದೆ. ನಾಯಕ ಕೊಹ್ಲಿ ಜೊತೆಗೆ ಚರ್ಚಿಸಿದ ನಂತರ ಮುಂದಿನ ಯೋಜನೆಗಳನ್ನು ರೂಪಿಸುತ್ತೇವೆ’ ಎಂದು ರವಿಶಾಸ್ತ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಮ್ಮ ಹಾಗೂ ಸಿಎಸಿ ಸದಸ್ಯ ಸೌರವ್ ಗಂಗೂಲಿ ನಡುವಣ ಭಿನ್ನಾಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ಅವರು, ‘ನಾವಿಬ್ಬರೂ ಭಾರತ ತಂಡದ ಮಾಜಿ ನಾಯಕರಾಗಿದ್ದೇವೆ.  ಕ್ರಿಕೆಟ್‌ನ ಒಳಿತಿಗಾಗಿ ಚರ್ಚೆ, ವಾದಗಳು ಸಹಜ. ಕೋಚ್‌ ನೇಮಕ ಸಂದರ್ಶನದಲ್ಲಿ ಸೌರವ್ ನನಗೆ ಒಂದಷ್ಟು ಉತ್ತಮ ಪ್ರಶ್ನೆಗಳನ್ನು ಕೇಳಿದ್ದರು. ಕ್ರಿಕೆಟ್‌ನ ಸುಧಾರಣೆ ಮತ್ತು ಬೆಳವಣಿಗೆಗೆ ಎಲ್ಲರೂ ಜೊತೆಯಾಗಿ ಸಾಗುತ್ತೇವೆ. ವೈಯಕ್ತಿಕ ಭಿನ್ನಾಭಿಪ್ರಾಯಗಳು ಇಲ್ಲಿ ನಗಣ್ಯ’ ಎಂದರು.

‘ಹೊಸ ಸವಾಲುಗಳಿಗೆ  ಸಿದ್ಧನಾಗಿ ದ್ದೇನೆ. ನನ್ನ ಜೀವನದಲ್ಲಿ ಆಟಗಾರನಾಗಿ, ಕ್ರಿಕೆಟ್ ವೀಕ್ಷಕ ವಿವರಣೆಗಾರನಾಗಿ ಹಲವು ಸವಾಲಿನ ಸಂದರ್ಭಗಳನ್ನು ಎದುರಿಸಿ ಗೆದ್ದಿದ್ದೇನೆ. ಕಠಿಣ ಸವಾಲು ಗಳನ್ನು ಪ್ರೀತಿಸುತ್ತೇನೆ’ ಎಂದು ಮಾಜಿ ಆಲ್‌ರೌಂಡರ್ ರವಿಶಾಸ್ತ್ರಿ ಹೇಳಿದರು.

ಪ್ರತಿಕ್ರಿಯಿಸಿ (+)