ಭಾನುವಾರ, ಡಿಸೆಂಬರ್ 8, 2019
25 °C

10,899 ಸಾವಿರ ಪೌರ ಕಾರ್ಮಿಕರ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

10,899 ಸಾವಿರ ಪೌರ ಕಾರ್ಮಿಕರ ನೇಮಕ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಒಳಗೊಂಡಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ 10,899 ಪೌರ ಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ತೀರ್ಮಾನಿಸಿದೆ.

ಹೀಗೆ ನೇಮಕಾತಿ ಮಾಡಿಕೊಳ್ಳುವಾಗ ಹಾಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಆದ್ಯತೆ ನೀಡಲು ರೂಪಿಸಿರುವ ವಿಶೇಷ ನೇಮಕಾತಿ ನಿಯಮಗಳಿಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ಸೂಚಿಸಿದೆ.

ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ,   ಕಾಯಂ ನೌಕರರಿಗೆ ₹25,000 ವೇತನ ಸಿಗಲಿದೆ.

ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡುವ ₹17,000 ಸಂಭಾವನೆಯನ್ನು ಇನ್ನು ಮುಂದೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಕಾರ್ಮಿಕರ ಶೋಷಣೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಟರಿಗೆ ವಸತಿಯುತ ಕಾಲೇಜು:

ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳಾದ ಕೋಲಾರ, ಚಿತ್ರದುರ್ಗ, ಹಾವೇರಿ, ರಾಯಚೂರು, ವಿಜಯಪುರ, ಕೊಪ್ಪಳ, ಬೀದರ, ಯಾದಗಿರಿ, ಕಲಬುರ್ಗಿ, ಚಾಮರಾಜನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವಸತಿ ಸಹಿತ ಮಾದರಿ ಪ್ರಥಮದರ್ಜೆ ಕಾಲೇಜು ಆರಂಭಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ತಲಾ ₹25 ಕೋಟಿ ವೆಚ್ಚದಲ್ಲಿ ಕಾಲೇಜು ನಿರ್ಮಾಣವಾಗಲಿದ್ದು, ಒಟ್ಟು ₹250 ಕೋಟಿ ಅನುದಾನ ನೀಡಲಾಗುತ್ತದೆ.

ನಿವೃತ್ತ ಪೊಲೀಸರಿಗೂ ಆರೋಗ್ಯ ಭಾಗ್ಯ: ಪೊಲೀಸ್ ಇಲಾಖೆಯ ನಿವೃತ್ತ ನೌಕರರು ಮತ್ತು ಅವರ ಕುಟುಂಬದವರಿಗೆ  ಆರೋಗ್ಯ ಸೇವೆ ಒದಗಿಸಲು ಸರ್ಕಾರ ನಿರ್ಧರಿಸಿದೆ. ಯೋಜನೆ ಅನುಷ್ಠಾನಕ್ಕೆ  ಆರೋಗ್ಯ ಟ್ರಸ್ಟ್‌ ಸ್ಥಾಪಿಸಲು   ₹20 ಕೋಟಿ ಅನುದಾನ ನೀಡಲು ಸಚಿವ ಸಂಪುಟ ಸಭೆ ಸಮ್ಮತಿಸಿದೆ.

ಪ್ರಮುಖ ನಿರ್ಣಯಗಳು

* ರೋಗ ಪತ್ತೆ ಉಪಕರಣ ಖರೀದಿಸಲು ₹142 ಕೋಟಿ ಮೊತ್ತದ ಪರಿಷ್ಕೃತ ಯೋಜನೆಗೆ ಅನುಮೋದನೆ.

* ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ₹10 ಕೋಟಿ ಅನುದಾನ.

* ಬೀದರ ಜಿಲ್ಲೆ  ಭಾಲ್ಕಿ ತಾಲ್ಲೂಕಿನ ಕೊಂಗಳಿ ಗ್ರಾಮದ ಹತ್ತಿರ ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಕಾಮಗಾರಿಯನ್ನು ₹11.40 ಕೋಟಿ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಪೂರ್ಣಗೊಳಿಸಲು ಒಪ್ಪಿಗೆ.

* ಬಳ್ಳಾರಿ ನಗರದ ಪಾರ್ವತಿ ನಗರದ ಬಡಾವಣೆಯಲ್ಲಿ ನ್ಯಾಯಾಲಯ ಸಂಕೀರ್ಣ ಸ್ಥಾಪಿಸುವ  ₹75.42 ಕೋಟಿ ಮೊತ್ತದ ಪರಿಷ್ಕೃತ ಯೋಜನೆಗೆ ಸಮ್ಮತಿ.

* ಬೀದರ ಜಿಲ್ಲೆ ಬಸವ ಕಲ್ಯಾಣ ತಾಲ್ಲೂಕಿನ ಜಮಖಂಡಿ ಗ್ರಾಮದ ಕೊಂಗಳಿ ಬ್ಯಾರೇಜ್‌ನಿಂದ ಚುಲ್ಕಿ ನಾಲಾ ಜಲಾಶಯ ಹಾಗೂ ಬಸವ ಕಲ್ಯಾಣ ತಾಲೂಕಿನ 15 ಕೆರೆಗಳನ್ನು ತುಂಬಿಸುವ ₹188 ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ.

ವಿಧಾನಪರಿಷತ್ತು ಯಥಾಸ್ಥಿತಿ

ವಿಧಾನಪರಿಷತ್ತು ರಚನೆ ಮತ್ತು ರದ್ದತಿ ಕುರಿತಂತೆ  ಯಥಾಸ್ಥಿತಿ ಮುಂದುವರಿಸಲು ಸಂಪುಟ ಸಭೆ  ನಿರ್ಧರಿಸಿದೆ.

ವಿಧಾನಪರಿಷತ್ತನ್ನು ಸೃಜಿಸುವಾಗ ಕನಿಷ್ಠ 40 ಸದಸ್ಯ ಬಲ ಅಥವಾ ವಿಧಾನಸಭೆ ಸದಸ್ಯ ಬಲದ ಮೂರನೇ ಒಂದರಷ್ಟು ಸದಸ್ಯರು ಇರುವಂತೆ ನೋಡಿಕೊಳ್ಳಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿತ್ತು. ಕರ್ನಾಟಕದಲ್ಲಿ ವಿಧಾನಸಭೆಯ  ಸದಸ್ಯ ಬಲ(225)ರಷ್ಟಿದ್ದು, ಅದರ ಮೂರನೇ ಒಂದರಷ್ಟು (75) ಸದಸ್ಯರನ್ನು ವಿಧಾನಪರಿಷತ್ತು ಹೊಂದಿರುವುದರಿಂದ ಈ ವಿಷಯದಲ್ಲಿ ಯಥಾಸ್ಥಿತಿ ಮುಂದುವರಿಸಲು ಸಚಿವ  ಸಂಪುಟ ನಿರ್ಧರಿಸಿದೆ.

ಪ್ರತಿಕ್ರಿಯಿಸಿ (+)