ಭಾನುವಾರ, ಡಿಸೆಂಬರ್ 15, 2019
18 °C

ಕಬ್ಬಿಣ ಅದಿರು ಗಣಿಗಾರಿಕೆ: ಸುಪ್ರೀಂಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಬ್ಬಿಣ ಅದಿರು ಗಣಿಗಾರಿಕೆ: ಸುಪ್ರೀಂಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ನಾಲ್ಕು ಕೋಟಿ ಮೆಟ್ರಿಕ್‌ ಟನ್‌ ಅದಿರು ಗಣಿಗಾರಿಕೆಗೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ್‌ ಕುಲಕರ್ಣಿ ತಿಳಿಸಿದ್ದಾರೆ.

ಕಬ್ಬಿಣ ಅದಿರು ಪೂರೈಕೆ ಕುರಿತು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಸಚಿವರು ಈ ವಿವರ ನೀಡಿದರು.

ರಾಜ್ಯದಲ್ಲಿ ಉಕ್ಕು ತಯಾರಿಕೆಗೆ ಅಗತ್ಯವಿರುವಷ್ಟು ಕಬ್ಬಿಣದ ಅದಿರು ಪೂರೈಕೆಯಾಗುತ್ತಿಲ್ಲ. ಸುಪ್ರೀಂಕೋರ್ಟ್‌ ಮೂರು ಕೋಟಿ ಮೆಟ್ರಿಕ್‌ ಟನ್‌ಗಿಂತ ಹೆಚ್ಚು ಅದಿರು ಗಣಿಗಾರಿಕೆ ಮಾಡದಂತೆ ನಿರ್ಬಂಧ ವಿಧಿಸಿದೆ. ರಾಜ್ಯದಲ್ಲಿ ಈಗ 2.6 ಕೋಟಿ ಮೆಟ್ರಿಕ್‌ ಟನ್‌ ಅದಿರು ತೆಗೆಯಲಾಗುತ್ತಿದೆ. ಜಿಂದಾಲ್‌ ಉಕ್ಕು ಕಾರ್ಖಾನೆಯೊಂದೇ 2.2 ಕೋಟಿ ಮೆಟ್ರಿಕ್‌ ಟನ್‌ ಅದಿರನ್ನು ಉಕ್ಕು ತಯಾರಿಕೆಗೆ ಬಳಸುತ್ತಿದೆ. ಉಳಿದದ್ದನ್ನು ಸಣ್ಣ ಪುಟ್ಟ ಘಟಕಗಳು ಬಳಸುತ್ತಿವೆ ಎಂದರು.

ಗಣಿ ಹಗರಣದ ಬಳಿಕ 2011 ರಲ್ಲಿ 1.1 ಕೋಟಿ ಮೆಟ್ರಿಕ್‌ ಟನ್‌ ಅದಿರು ತೆಗೆಯಲಾಯಿತು. 2013–14 ರಲ್ಲಿ ಒಂಭತ್ತು  ಕೋಟಿ ಮೆಟ್ರಿಕ್‌ ಟನ್‌ ಮತ್ತು ಈಗ 2.6 ಕೋಟಿ ಮೆಟ್ರಿಕ್‌ ಟನ್‌ ತೆಗೆಯಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

‘ಸಿ ’ ಗುಂಪಿಗೆ ಸೇರಿದ 56 ಗಣಿಗಳಿವೆ.  ಅದರಲ್ಲಿ 14   ಗಣಿಗಳ ಪೈಕಿ ಏಳು ಗಣಿಗಳನ್ನು ಹರಾಜು ಹಾಕಲಾಗಿದೆ. ಮುಂದಿನ ತಿಂಗಳು 16 ಗಣಿಗಳನ್ನು ಹರಾಜು ಹಾಕಲಾಗುವುದು ಎಂದು ಅವರು ತಿಳಿಸಿದರು.

2020 ರ ವೇಳೆಗೆ 5.4 ಕೋಟಿ ಮೆಟ್ರಿಕ್‌ ಟನ್‌ ಅದಿರು ಗಣಿಗಾರಿಕೆಯ ಗುರಿ ಹೊಂದಲಾಗಿದೆ. ಗಣಿಗಾರಿಕೆಗೆ ಸಂಬಂಧಿಸಿದಂತೆ  ಉನ್ನತಾಧಿಕಾರ ಸಮಿತಿ ಇನ್ನು ಮೂರು ದಿನಗಳಲ್ಲಿ ವರದಿ ನೀಡಲಿದೆ. ಅದನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವುದು ಎಂದರು.

ಕಬ್ಬಿಣ ಅದಿರು ಶೋಧನೆಯನ್ನು ಇನ್ನು ಮುಂದೆ ಖನಿಜ ಶೋಧನೆ ನಿಗಮ(ಎಂಇಸಿಎಲ್‌)ಕ್ಕೆ ನೀಡಲಾಗುವುದು ಎಂದೂ ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)