ಮಂಗಳವಾರ, ಡಿಸೆಂಬರ್ 10, 2019
17 °C

ವಿಂಬಲ್ಡನ್‌: ಆ್ಯಂಡಿ ಮರ್ರೆಗೆ ಆಘಾತ

Published:
Updated:
ವಿಂಬಲ್ಡನ್‌: ಆ್ಯಂಡಿ ಮರ್ರೆಗೆ ಆಘಾತ

ಲಂಡನ್‌: ಹಾಲಿ ಚಾಂಪಿಯನ್‌, ಅಗ್ರ ಶ್ರೇಯಾಂಕದ ಆ್ಯಂಡಿ ಮರ್ರೆ ವಿಂಬಲ್ಡನ್‌ ಟೆನಿಸ್ ಟೂರ್ನಿಯಲ್ಲಿ ಆಘಾತ ಅನುಭವಿಸಿದ್ದಾರೆ. ಬುಧವಾರ ನಡೆದ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಅವರನ್ನು ಅಮೆರಿಕದ ಸ್ಯಾಮ್‌ ಕ್ವೆರಿ ಮಣಿಸಿದರು. ಈ ಮೂಲಕ ಚಾಂಪಿ ಯನ್‌ಷಿಪ್‌ನಲ್ಲಿ ಇದೇ ಮೊದಲ ಬಾರಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದರು. 

2015ರ ಚಾಂಪಿಯನ್‌ ನೊವಾಕ್ ಜೊಕೊವಿಚ್ ಅವರನ್ನು ಕಳೆದ ವರ್ಷ ಮೂರನೇ ಸುತ್ತಿನಲ್ಲಿ ಮಣಿಸಿ ಗಮನ ಸೆಳೆದಿದ್ದ ಸ್ಯಾಮ್‌ ಈ ಬಾರಿ ಹಾಲಿ ಚಾಂಪಿಯನ್‌ನನ್ನೇ ಹೊರದೂಡಿದರು. ವಿಶ್ವ ಕ್ರಮಾಂಕದಲ್ಲಿ 28ನೇ ಸ್ಥಾನದಲ್ಲಿರುವ ಅವರು ರೋಚಕ ಪಂದ್ಯದಲ್ಲಿ 3–6, 6–4, 6–7 (4), 6–1 ಹಾಗೂ 6–1ರಲ್ಲಿ ಎದುರಾಳಿಯನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಕ್ವೆರಿ ಏಳನೇ ಶ್ರೇಯಾಂಕದ ಆಟಗಾರ ಮರಿನ್ ಸಿಲಿಕ್ ವಿರುದ್ಧ ಸೆಣಸುವರು. ಕ್ರೊಯೇಷಿಯಾದ ಸಿಲಿಕ್ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಕ್ಸಂಬರ್ಗ್‌ನ ಗಿಲಿಸ್ ಮುಲ್ಲರ್‌ ವಿರುದ್ಧ 3–6, 7–6 (6), 7–5, 5–7, 6–1ರಲ್ಲಿ ಜಯ ಗಳಿಸಿದರು.

ನಡು ನೋವಿನಿಂದ ಬಳಲುತ್ತಿದ್ದ ಮರ್ರೆ ಪಂದ್ಯದ ಮೊದಲ ಸೆಟ್‌ನಲ್ಲಿ ಮಾತ್ರ ಪ್ರತಿರೋಧ ಒಡ್ಡಿದರು. ಎರಡನೇ ಸೆಟ್‌ನಿಂದ ಕ್ವೆರಿ ಆಧಿಪತ್ಯ ಸ್ಥಾಪಿಸಿದರು. ಮೂರನೇ ಸೆಟ್‌ನಲ್ಲಿ ಉಭಯ ಆಟಗಾರರು ಜಿದ್ದಾಜಿದ್ದಿನ ಹೋರಾಟ ನಡೆಸಿದರು.  ನಾಲ್ಕು ಮತ್ತು ಐದನೇ ಸೆಟ್‌ಗಳಲ್ಲಿ ಮರ್ರೆ ತೀವ್ರ ನೋವು ಅನುಭವಿಸಿದರು. ಇದರ ಪೂರ್ಣ ಲಾಭ ಪಡೆದುಕೊಂಡ ಕ್ವೆರಿ ಜಯ ತಮ್ಮದಾಗಿಸಿಕೊಂಡರು.

‘ಈ ಗೆಲುವು ನನಗೇ ಅಚ್ಚರಿ ತಂದಿದೆ. ಆರಂಭದಲ್ಲಿ ಉತ್ತಮ ಆಟವಾಡಲು ಸಾಧ್ಯವಾಗಲಿಲ್ಲ ’ ಎಂದು ಕ್ವೆರಿ ಹೇಳಿದರು.

ಪ್ರತಿಕ್ರಿಯಿಸಿ (+)