ಶುಕ್ರವಾರ, ಡಿಸೆಂಬರ್ 6, 2019
19 °C

ಹಳೆ ಚಿನ್ನಕ್ಕೂ ಶೇ 3 ಜಿಎಸ್‌ಟಿ

Published:
Updated:
ಹಳೆ ಚಿನ್ನಕ್ಕೂ ಶೇ 3 ಜಿಎಸ್‌ಟಿ

ನವದೆಹಲಿ: ಹಳೆಯ ಚಿನ್ನಾಭರಣ ಅಥವಾ ಚಿನ್ನವನ್ನು ಮಾರಾಟ ಮಾಡುವಾಗ ಅದರ ಮೌಲ್ಯದ ಮೇಲೆ ಶೇ 3ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಅಧಿಯಾ ತಿಳಿಸಿದ್ದಾರೆ.

ಹಳೆಯ ಚಿನ್ನ ಮಾರಿ ಬಂದ ಹಣದಲ್ಲಿ ಹೊಸ ಚಿನ್ನ ಖರೀದಿಸುವುದಾದರೆ ಹಳೆಯ ಚಿನ್ನದ ಮೌಲ್ಯಕ್ಕೆ ಪಾವತಿಸಿದ ಜಿಎಸ್‌ಟಿಯನ್ನು ಹೊಸ ಚಿನ್ನಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.

ಉದಾಹರಣೆಗೆ, ₹1 ಲಕ್ಷ ಮೌಲ್ಯದ ಹಳೆಯ ಚಿನ್ನ ಮಾರುವಾಗ ₹3,000 ಜಿಎಸ್‌ಟಿ ಪಾವತಿಸಬೇಕು. ಅದೇ ಹಣವನ್ನು ನೀಡಿ ಹೊಸ ಚಿನ್ನ ಖರೀದಿಸಿದರೆ ಹೊಸ ಚಿನ್ನಕ್ಕೆ ಜಿಎಸ್‌ಟಿ ಇರುವುದಿಲ್ಲ. ಹೊಸ ಚಿನ್ನದ ಮೌಲ್ಯ ಹಳೆಯ ಚಿನ್ನ ಮಾರಿ ಬಂದ ಮೊತ್ತಕ್ಕಿಂತ  ಹೆಚ್ಚಾದರೆ ಹೆಚ್ಚಾದ ಮೊತ್ತಕ್ಕೆ ಶೇ 3ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಹಳೆಯ ಚಿನ್ನವನ್ನು ಕರಗಿಸಿ ಹೊಸ ಆಭರಣ ಮಾಡಿಸುವುದನ್ನು ಒಂದು ಕೆಲಸ (ಜಾಬ್‌ವರ್ಕ್‌) ಎಂದು ಪರಿಗಣಿಸಲಾಗುವುದು. ಹಾಗಾಗಿ ಆ ಕೆಲಸದ ಮಜೂರಿಯ ಮೇಲೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುವುದು ಎಂದು ಅಧಿಯಾ ಹೇಳಿದ್ದಾರೆ.

‘ಹಳೆಯ ಚಿನ್ನವನ್ನು ಕರಗಿಸಿ ಹೊಸ ಆಭರಣವನ್ನು ಮಾಡಿಕೊಡುವ ವ್ಯಕ್ತಿಯು  ನೋಂದಾಯಿತ ವ್ಯಾಪಾರಿಯೇ ಆಗಿರಬೇಕು. ಚಿನ್ನವನ್ನು ಕರಗಿಸಿ ಮಾಡುವ ಆಭರಣವನ್ನು ಹೊಸ ಆಭರಣ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಜಿಎಸ್‌ಟಿ ವಿಧಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಈ ತಿಂಗಳ ಒಂದರಿಂದ ಜಾರಿಗೆ ಬಂದ ಜಿಎಸ್‌ಟಿ ವ್ಯವಸ್ಥೆ ಅಡಿಯಲ್ಲಿ ಚಿನ್ನಕ್ಕೆ ಶೇ 3ರಷ್ಟು ತೆರಿಗೆ ಇದೆ. ಯಾವುದೇ ಕೆಲಸಕ್ಕೆ ಶೇ 5ರಷ್ಟು ತೆರಿಗೆ ಹಾಕಲಾಗುತ್ತದೆ.

ಆ. 15ರೊಳಗೆ ನೋಂದಣಿ: ಆಗಸ್ಟ್‌ 15ರೊಳಗೆ ಎಲ್ಲ ವ್ಯಾಪಾರಿಗಳು ಜಿಎಸ್‌ಟಿಯೊಳಗೆ ನೋಂದಣಿ ಆಗುವಂತೆ ನೋಡಿಕೊಳ್ಳಿ ಎಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದ್ದಾರೆ.

ಸಿನಿಮಾ ಡೌನ್‌ಲೋಡ್‌ಗೆ ಜಿಎಸ್‌ಟಿ

ಅಮೆರಿಕದ ಸಂಸ್ಥೆ ನೆಟ್‌ಫ್ಲಿಕ್ಸ್‌ ಮೂಲಕ ಸಿನಿಮಾ ಮತ್ತು ಟಿ.ವಿ ಕಾರ್ಯಕ್ರಮಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದರ ತೆರಿಗೆಯ ಬಗ್ಗೆಯೂ ಅಧಿಯಾ ಸ್ಪಷ್ಟೀಕರಣ ನೀಡಿದ್ದಾರೆ. ಸಂಸ್ಥೆಯು ಹಿಂದೆ ಸೇವಾ ತೆರಿಗೆ ಪಾವತಿಸುತ್ತಿತ್ತು. ಈಗ ಅದನ್ನು ಜಿಎಸ್‌ಟಿಯಾಗಿ ಪರಿವರ್ತಿಸಲಾಗಿದೆ ಎಂದರು.

ವೆಬ್‌ ಜಾಹೀರಾತು ತೆರಿಗೆ ವೆಬ್‌ಸೈಟ್‌ನಲ್ಲಿ ನೀಡುವ ಜಾಹೀರಾತುಗಳ ಮೇಲೆ ವಿಧಿಸುವ ತೆರಿಗೆ ಬಗ್ಗೆ ಸರ್ಕಾರವು ಶೀಘ್ರವೇ ಸ್ಪಷ್ಟನೆ ನೀಡಲಿದೆ.

ಪ್ರತಿಕ್ರಿಯಿಸಿ (+)