ಶುಕ್ರವಾರ, ಡಿಸೆಂಬರ್ 6, 2019
19 °C
ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ

ಸೊಲ್ಲಾಪುರ–ವಿಜಯಪುರ ಹೆದ್ದಾರಿಗೆ ಚತುಷ್ಪಥ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊಲ್ಲಾಪುರ–ವಿಜಯಪುರ  ಹೆದ್ದಾರಿಗೆ ಚತುಷ್ಪಥ ಭಾಗ್ಯ

ನವದೆಹಲಿ: ಸೊಲ್ಲಾಪುರ–ವಿಜಯಪುರ  ನಡುವಣ ಹೊಸ ರಾಷ್ಟ್ರೀಯ ಹೆದ್ದಾರಿ ಯನ್ನು (ಎನ್‌ಎಚ್‌–52)  ಚತುಷ್ಪಥ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಬುಧವಾರ ಒಪ್ಪಿಗೆ ನೀಡಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದ ಮಧ್ಯೆ ಸಂಪರ್ಕ ಕಲ್ಪಿಸುವ ಒಟ್ಟು  118 ಕಿ.ಮೀ ಉದ್ದದ ಚತುಷ್ಪಥ ನಿರ್ಮಾಣಕ್ಕೆ ಅಂದಾಜು ₹1,889 ಕೋಟಿ ವೆಚ್ಚವಾಗಲಿದೆ.

ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಸ್ವಾಧೀನ,  ನಿರ್ಮಾಣ ಪೂರ್ವ ಚಟುವಟಿಕೆಗಳ ವೆಚ್ಚವನ್ನೂ ಈ ಮೊತ್ತ ಒಳಗೊಂಡಿದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿಯು ಚತುಷ್ಪಥ ನಿರ್ಮಾಣ ಯೋಜನೆಗೆ ಒಪ್ಪಿಗೆ ನೀಡಿದೆ.

ಈ ಹಿಂದೆ ಎನ್‌ಎಚ್–13 ಎಂದು ಕರೆಯಲಾಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಸದ್ಯ ದ್ವಿಪಥ ಹೊಂದಿದ್ದು,  ಮಹಾರಾಷ್ಟ್ರದ ಸೊಲ್ಲಾಪುರ, ಟಾಕಳಿ, ನಾಂದಣಿ ಮತ್ತು ಕರ್ನಾಟಕದ ಝಳಕಿ, ಹೊರ್ತಿ ಮತ್ತು ವಿಜಯಪುರ ಮಾರ್ಗವಾಗಿ ಹಾಯ್ದುಹೋಗುತ್ತದೆ.

ಈ ರಸ್ತೆ ಅತ್ಯಂತ ಜನನಿಬಿಡ ಬೆಂಗಳೂರು, ಚಿತ್ರದುರ್ಗ, ವಿಜಯಪುರ, ಸೊಲ್ಲಾಪುರ, ಔರಂಗಾಬಾದ್, ಧುಲೆ, ಇಂದೋರ್ ಮತ್ತು ಗ್ವಾಲಿಯರ್‌ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದೆ.

ಚತುಷ್ಪಥ ಹೇಗಿರುತ್ತದೆ?: ಹೊಸ ಚತುಷ್ಪಥದಲ್ಲಿ ವಾಹನ ಚಾಲಕರು, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ.

24 ಬಸ್‌ ತಂಗುದಾಣಗಳು, ಲಾರಿ ಚಾಲಕರ ವಿಶ್ರಾಂತಿ ತಾಣ, ಅನೇಕ ಸರ್ವೀಸ್‌ ರಸ್ತೆ, ಸಂಪರ್ಕ ರಸ್ತೆಗಳನ್ನು ಈ ಹೊಸ ಚತುಷ್ಪಥ ಹೊಂದಿರುತ್ತದೆ.

ಸೊಲ್ಲಾಪುರ ಮತ್ತು ವಿಜಯಪುರ ನಗರದ ಹೊರಭಾಗದಿಂದ (ಬೈಪಾಸ್‌)   ಹಾಯ್ದು ಹೋಗುವ ರಸ್ತೆಯಲ್ಲಿ ಆರು ಮೇಲುಸೇತುವೆ ನಿರ್ಮಿಸಲಾಗುತ್ತದೆ.

ಇದರಿಂದ ಎರಡು ನಗರಗಳ ನಡುವಣ ಪ್ರಯಾಣ ಅಂತರ ತಗ್ಗಲಿದ್ದು,  ಸಾಕಷ್ಟು ಸಮಯ ಉಳಿತಾಯವಾಗಲಿದೆ. ನಿರ್ಮಾಣ ಕಾಮಗಾರಿಗೆ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)