ಶನಿವಾರ, ಡಿಸೆಂಬರ್ 14, 2019
25 °C
ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯಿಂದ ವರದಿ ಸಲ್ಲಿಕೆ

ವಾರ್ತಾ ಇಲಾಖೆ ಪುನರ್‌ರಚನೆಗೆ ಕ್ರಮ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರ್ತಾ ಇಲಾಖೆ ಪುನರ್‌ರಚನೆಗೆ ಕ್ರಮ: ಸಿ.ಎಂ

ಬೆಂಗಳೂರು: ‘ವಾರ್ತಾ ಇಲಾಖೆ ಪುನರ್‌ರಚನೆ ಸಂಬಂಧ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಶ್ರೀನಿವಾಸ ಮೂರ್ತಿ ನೇತೃತ್ವದ ಸಮಿತಿ ಮಾಡಿರುವ ಶಿಫಾರಸುಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪುನರ್‌ರಚನೆ ಅಧ್ಯಯನ ಸಮಿತಿ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಲ್ಲಿಸಿದ ವರದಿ ಸ್ವೀಕರಿಸಿ ಅವರು ಮಾತನಾಡಿದರು.

‘ಸರ್ಕಾರದ ಯೋಜನೆಗಳ ಪ್ರಚಾರ ಮತ್ತಷ್ಟು ಚುರುಕಾಗಬೇಕಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವಾರ್ತಾ ಇಲಾಖೆಗೆ ಕಡಿಮೆ ಅನುದಾನ ನಿಗದಿ ಮಾಡಲಾಗಿದೆ. ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರೆ  ಹೆಚ್ಚಿನ ಅನುದಾನ ನೀಡಲಾಗುವುದು’ ಎಂದು ಅವರು  ಹೇಳಿದರು.

ಸಮಿತಿ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಮಾತನಾಡಿ, ‘ವಾರ್ತಾ ಇಲಾಖೆ ಸಿಬ್ಬಂದಿ ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಸರ್ಕಾರದ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುತ್ತಿದ್ದಾರೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಇಲಾಖೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಶಿಫಾರಸು ಮಾಡಲಾಗಿದೆ’ ಎಂದು ಹೇಳಿದರು.

‘ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕೆ ಮುದ್ರಣ ಮಾಧ್ಯಮಗಳನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ದೃಶ್ಯ ಮಾಧ್ಯಮ ಹಾಗೂ ಡಿಜಿಟಲ್‌  ಮಾಧ್ಯಮಗಳಿಗೂ ವಿಸ್ತರಿಸುವ ಅಗತ್ಯವಿದೆ’ ಎಂದು ಹೇಳಿದರು.

‘ದೆಹಲಿಯಲ್ಲಿ ರಾಜ್ಯದ ಪತ್ರಕರ್ತರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಅಲ್ಲಿ ಕರ್ನಾಟಕ ಮಾಧ್ಯಮ ಕೇಂದ್ರ ತೆರೆಯುವ ಬಗ್ಗೆಯೂ ಸರ್ಕಾರದ ಗಮನಕ್ಕೆ ತರಲಾಗಿದೆ’ ಎಂದು ವಿವರಿಸಿದರು.

**

ಪರ್ಸ್‌ ತೆಗೆದು ಹಣ ಕೊಟ್ಟರು

ಕಾಲು ನೋವಿನಿಂದ ಬಳಲುತ್ತಿದ್ದ ವೃದ್ಧರೊಬ್ಬರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 9,500 ಕೊಟ್ಟು ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದರು.

ಜನತಾ ದರ್ಶನದ ಸಂದರ್ಭದಲ್ಲಿ ಕಾಲು ನೋವಿನಿಂದ ಬಳಲುತ್ತಿರುವ ಬಗ್ಗೆ ವೃದ್ಧರೊಬ್ಬರು ಮುಖ್ಯಮಂತ್ರಿ ಅವರ ಗಮನ ಸೆಳೆದರು. ತಮ್ಮ ಪರ್ಸ್‌ ತೆಗೆದು ಅದರಲ್ಲಿ ಇದ್ದಷ್ಟೂ ಹಣವನ್ನು ಅವರ ಕೈಗೆ ಇಟ್ಟರು.

**

‘ವರುಣಾ ಕ್ಷೇತ್ರದ ಸಭೆ ನಡೆಸಬಾರದೇ?’

‘ನಾನು ವರುಣಾ ಕ್ಷೇತ್ರದ ಅಭಿವೃದ್ಧಿಯ ಪ್ರಗತಿ ಪರಿಶೀಲನೆ ಮಾಡಬಾರದೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳನ್ನು ಸಿಟ್ಟಿನಿಂದ ಪ್ರಶ್ನಿಸಿದರು.

ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಿದ್ದರಾಮಯ್ಯ ಅವರನ್ನು ಮಾಧ್ಯಮ ಪ್ರತಿನಿಧಿಗಳು ವರುಣಾ ಬಗ್ಗೆ ಪ್ರಶ್ನಿಸಿದಾಗ, ಗರಂ ಆದ ಸಿದ್ದರಾಮಯ್ಯ, ‘ಅದು ಒಂದು ಸುದ್ದಿನಾ, ಸುದ್ದಿ ಆಗುತ್ತೇನ್ರೀ’ ಎಂದು ಕೇಳಿದರು.

ಕಾರ್ಯಕರ್ತನ ಮೇಲೂ ಸಿಟ್ಟು: ಮಂಡ್ಯ ಜಿಲ್ಲೆ ಕಾಂಗ್ರೆಸ್‌ ಬೆಳವಣಿಗೆಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿ ತೋರಿಸಲು ಮುಂದಾದ ಕಾರ್ಯಕರ್ತನ ವಿರುದ್ಧವೂ ಮುಖ್ಯಮಂತ್ರಿ ಹರಿಹಾಯ್ದರು.

‘ಪತ್ರಿಕೆಗಳಲ್ಲಿ ಹೇಳಿಕೆ ನೀಡುವುದು ದೊಡ್ಡ ಸಾಧನೆಯೇ. ಎಲ್ಲ ಪತ್ರಿಕೆಗಳನ್ನು ನಾನೂ ಓದುತ್ತೇನೆ’ ಎಂದರು.

ಪ್ರತಿಕ್ರಿಯಿಸಿ (+)