ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,000 ಮೆ. ವಾಟ್ ವಿದ್ಯುತ್‌ ಖರೀದಿಗೆ ನಿರ್ಧಾರ

Last Updated 12 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸೆಪ್ಟಂಬರ್ ಬಳಿಕ ವಿದ್ಯುತ್‌ ಕೊರತೆ ಆಗುವುದರಿಂದ 1,000 ಮೆ.ವಾಟ್ ವಿದ್ಯುತ್‌ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ  ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವಿದ್ಯುತ್‌ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಮಾಧ್ಯಮ ಪ್ರತಿನಿಧಿಗಳಿಗೆ ಸಭೆಯ ವಿವರ ನೀಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ‘ವಿದ್ಯುತ್‌ ಖರೀದಿ ಸಂಬಂಧ ತಕ್ಷಣವೇ ಟೆಂಡರ್‌ ಕರೆಯುತ್ತೇವೆ. ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್‌ ಖರೀದಿಸುತ್ತೇವೆ’ ಎಂದರು.

‘ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಆಗಿದೆ.  ರೈತರು, ವಿದ್ಯಾರ್ಥಿಗಳು ಮತ್ತು ಉದ್ಯಮಗಳು ವಿದ್ಯುತ್‌ ಕೊರತೆ ಎದುರಿಸಬಾರದು ಎಂಬ ಕಾರಣಕ್ಕೆ  ಈಗಲೇ ವಿದ್ಯುತ್‌ ಖರೀದಿಗೆ ನಿರ್ಧರಿಸಿದ್ದೇವೆ’ ಎಂದು ಅವರು ತಿಳಿಸಿದರು.

‘ಜಲಾಶಯಗಳಲ್ಲಿ ನೀರು ಇಲ್ಲ. ಶಾಖೋತ್ಪನ್ನ ಕೇಂದ್ರಗಳಿಗೆ ಕಲ್ಲಿದ್ದಲು ಕೊರತೆ ಇದೆ. ದೂರದಿಂದ ಕಲ್ಲಿದ್ದಲು ಪೂರೈಕೆ ದುಬಾರಿ ಆಗುತ್ತದೆ. ಇವೆಲ್ಲ ಕಾರಣದಿಂದ ವಿದ್ಯುತ್‌ ಖರೀದಿಯೇ ಸೂಕ್ತ. ಅಕ್ಟೋಬರ್‌ನಿಂದ ವಿದ್ಯುತ್‌ಗೆ ಬೇಡಿಕೆ ಹೆಚ್ಚಲಿದೆ. ಅದಕ್ಕೆ ಈಗಲೇ ತಯಾರಿ ನಡೆಸಿದ್ದೇವೆ’ ಎಂದು ಶಿವಕುಮಾರ್‌ ತಿಳಿಸಿದರು.

ಕಳೆದ ವರ್ಷ ಪ್ರತಿ ಯುನಿಟ್‌ಗೆ ₹ 4. 08 ಕೊಟ್ಟು ವಿದ್ಯುತ್‌ ಖರೀದಿ ಮಾಡಲಾಗಿತ್ತು ಎಂದು ಹೇಳಿದರು.

ರಾಜ್ಯದಲ್ಲಿ ಜಲ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ 3,071 ಮೆ.ವಾ ಇದ್ದು, ಈಗ 1,257 ಮೆ.ವಾ ಉತ್ಪಾದನೆ ಮಾಡಲಾಗುತ್ತಿದೆ ಎಂದರು.
ವಿದ್ಯುತ್‌ ಬೇಡಿಕೆ ಬೇಸಿಗೆಯಲ್ಲಿ 10,000 ಮೆ.ವಾಟ್ ಇತ್ತು. ಈಗ ಅದು 8,000 ಮೆ.ವಾಟ್‌ಗೆ ಇಳಿದಿದೆ. ಪ್ರಸ್ತುತ 9,375 ವಿದ್ಯುತ್‌ ಉತ್ಪಾದನೆ ಆಗುತ್ತಿದ್ದು,  ವಿದ್ಯುತ್‌ ಕೊರತೆ ಇಲ್ಲ ಎಂದು ತಿಳಿಸಿದರು. ಸೌರ ವಿದ್ಯುತ್‌ ಘಟಕಗಳಿಂದ ಇನ್ನು ಒಂದು ವರ್ಷದಲ್ಲಿ 1,000 ಮೆ.ವಾ ವಿದ್ಯುತ್‌  ಗ್ರಿಡ್‌ಗೆ ಸೇರುತ್ತದೆ ಎಂದು ಸಚಿವರು ವಿವರಿಸಿದರು.

ಬೆಂಗಳೂರಿನಲ್ಲಿ  ಬೇಡಿಕೆ ಇಳಿಕೆ
ನಗರದಲ್ಲಿ ವಿದ್ಯುತ್‌ ಬೇಡಿಕೆ 4,700 ಮೆ.ವಾಟ್‌ನಿಂದ 4,200 ಮೆ.ವಾಟ್‌ಗೆ ಇಳಿಕೆ ಆಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಮಳೆಯಿಂದಾಗಿ ಹವಾ ನಿಯಂತ್ರಿತ ಯಂತ್ರಗಳ ಬಳಕೆ ಕಡಿಮೆ ಆಗಿರುವುದರಿಂದ ವಿದ್ಯುತ್‌ ಬೇಡಿಕೆ ಇಳಿಕೆಯಾಗಿದೆ ಎಂದರು.

* ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡೋಣ. ಒಂದು ದಿನದ ಮಳೆಯಿಂದ ₹100 ಕೋಟಿ ಉಳಿಯಲಿದೆ

-ಡಿ.ಕೆ.ಶಿವಕುಮಾರ್‌, ಇಂಧನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT