ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ಬಸ್ನಿಲ್ದಾಣಗಳಿಗೆ ನೇರ ಸಂಪರ್ಕ

ಬೆಂಗಳೂರು: ಮೆಜೆಸ್ಟಿಕ್ನಲ್ಲಿ ಕೆಂಪೇಗೌಡ ಇಂಟರ್ಚೇಂಜ್ ಮೆಟ್ರೊ ನಿಲ್ದಾಣದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಬಸ್ ನಿಲ್ದಾಣ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲು ಪಾದಚಾರಿ ಮಾರ್ಗ ನಿರ್ಮಾಣವಾಗಲಿದೆ.
ಸದ್ಯ ಮೆಟ್ರೊ ನಿಲ್ದಾಣದಿಂದ ಪಶ್ಚಿಮದ ದ್ವಾರದಿಂದ ಹೊರಬರುವ ಪ್ರಯಾಣಿಕರು ಗುಬ್ಬಿ ತೋಟದಪ್ಪ ರಸ್ತೆ ಪಕ್ಕದ ಪಾದಚಾರಿ ಮಾರ್ಗದಲ್ಲಿ ಸಾಗಿ ಬಿಎಂಟಿಸಿ ಅಥವಾ ಕೆಎಸ್ಆರ್ಟಿಸಿ ಬಸ್ನಿಲ್ದಾಣಗಳನ್ನು ತಲುಪಬೇಕಾಗಿದೆ. ಇಲ್ಲಿನ ರಸ್ತೆಗಳಲ್ಲಿ ಸದಾ ವಾಹನ ಸಂಚಾರ ಇರುವುದರಿಂದ ಪ್ರಯಾಣಿಕರು ಆತಂಕದಿಂದಲೇ ರಸ್ತೆ ದಾಟಬೇಕಾಗಿದೆ. ಈ ಸಮಸ್ಯೆ ನಿವಾರಿಸುವ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮ, ಕೆಎಸ್ಆರ್ಸಿಟಿ, ಸಂಚಾರ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ.
ಮೆಟ್ರೊನಿಲ್ದಾಣದ ಪಶ್ಚಿಮದ್ವಾರದ ಬಳಿಯಿಂದ ನೇರವಾಗಿ ರೈಲ್ವೆ ನಿಲ್ದಾಣದ ಸಬ್ವೇ ವರೆಗೆ ಇನ್ನೊಂದು ಸಬ್ವೇ ನಿರ್ಮಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ಜಾಗವನ್ನು ಕೆಎಸ್ಆರ್ಟಿಸಿ ಒದಗಿಸಲಿದೆ. ಸಬ್ವೇ ನಿರ್ಮಿಸುವ ಹೊಣೆಯನ್ನು ಬಿಎಂಆರ್ಸಿಎಲ್ ವಹಿಸಿಕೊಳ್ಳಲಿದೆ. ಇದಕ್ಕೆ ತಗಲುವ ವೆಚ್ಚವನ್ನೂ ಅವರೇ ಭರಿಸಲಿದ್ದಾರೆ. ಶೀಘ್ರದಲ್ಲೇ ಸಬ್ ನಿರ್ಮಾಣವಾಗಲಿದೆ’ ಎಂದು ಕೆಎಸ್ಆರ್ಟಿಸಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ನಮ್ಮ ಮೆಟ್ರೊ ಮೊದಲ ಹಂತದಲ್ಲಿ ಪೂರ್ಣಪ್ರಮಾಣದಲ್ಲಿ ಸಂಚಾರ ಆರಂಭಗೊಂಡ ಬಳಿಕ ಕೆಂಪೇಗೌಡ ಇಂಟರ್ಚೇಂಜ್ ನಿಲ್ದಾಣವನ್ನು ಬಳಸುವವರ ಸಂಖ್ಯೆ ಹೆಚ್ಚಿದೆ. ದಿನವೊಂದಕ್ಕೆ ಸರಾಸರಿ 60 ಸಾವಿರಕ್ಕೂ ಹೆಚ್ಚು ಮಂದಿ ಈ ನಿಲ್ದಾಣವನ್ನು ಬಳಸುತ್ತಾರೆ.