ಶುಕ್ರವಾರ, ಡಿಸೆಂಬರ್ 13, 2019
20 °C

ತೆರಿಗೆ ಪಾವತಿಸಲು 15 ದಿನ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆರಿಗೆ ಪಾವತಿಸಲು 15 ದಿನ ಗಡುವು

ಬೆಂಗಳೂರು: ನಗರದಲ್ಲಿ ಅಳವಡಿಸಿರುವ ಮೊಬೈಲ್‌ ಟವರ್‌ ಸಂಖ್ಯೆ ಮತ್ತು ಆಪ್ಟಿಕಲ್‌ ಫೈಬರ್‌ ಕೇಬಲ್‌ ವ್ಯಾಪ್ತಿ ಅಧಿಕೃತ ಘೋಷಣೆ ಮಾಡಿಕೊಳ್ಳುವಂತೆ ಟೆಲಿಕಾಂ ಕಂಪೆನಿಗಳಿಗೆ ಬಿಬಿಎಂಪಿ 15 ದಿನಗಳ ಗಡುವು ನೀಡಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ   ಈ ವಿಷಯ ತಿಳಿಸಿದ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ  ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಕೆ.ಗುಣಶೇಖರ್, ‘ಏರ್‌ಟೆಲ್‌, ವೊಡಾಫೋನ್, ಏರ್‌ಸೆಲ್, ರಿಲಯನ್ಸ್, ಬಿಎಸ್‌ಎನ್‌ಎಲ್‌, ಇಂಡಸ್, ಎಸಿಟಿ ಕಂಪೆನಿಗಳಿಂದ ಪಾಲಿಕೆಗೆ ನೂರಾರು ಕೋಟಿ ತೆರಿಗೆ ವಂಚನೆಯಾಗಿದೆ’ ಎಂದು ಆರೋಪಿಸಿದರು.

‘ನಗರದಲ್ಲಿ ಸುಮಾರು 10,000 ಸಾವಿರ ಮೊಬೈಲ್‌ ಟವರ್‌ಗಳಿರುವ ಬಗ್ಗೆ ಮಾಹಿತಿ ಇದೆ. 250 - 300 ಮೊಬೈಲ್‌ ಟವರ್‌ಗಳಿಂದ ಮಾತ್ರ ತೆರಿಗೆ ಬರುತ್ತಿದೆ. ಅಧಿಕೃತಗೊಳಿಸಿಕೊಳ್ಳಲು ಒಂದೊಂದು ಟವರ್‌ಗೆ ತಲಾ ₹50,000 ಏಕಕಂತಿನ ತೆರಿಗೆ ಪಾವತಿಸಬೇಕು. ಗಡುವು ಮೀರಿದರೆ ಟವರ್‌ ಸೇವೆ  ನಿಷ್ಕ್ರಿಯಗೊಳಿಸುವ ಎಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದರು.

‘ಇಂಡಸ್ ಕಂಪೆನಿ 300 ಟವರ್‌ ಘೋಷಿಸಿಕೊಂಡಿದೆ. ಆದರೆ, ಈ ಕಂಪೆನಿಗೆ ಸೇರಿದ ಅಂದಾಜು 2,000 ಟವರ್‌ಗಳಿವೆ. ರಿಲಯನ್ಸ್ ಕಂಪೆನಿ

860 ಟವರ್‌ ಪ್ರಕಟಿಸಿದೆ. ಆದರೆ, ಈ ಕಂಪೆನಿಗೆ ಸೇರಿದ 1200 ಮೊಬೈಲ್‌ ಟವರ್‌ಗಳಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಳಿದ ಕಂಪೆನಿಗಳು ಇದುವರೆಗೂ ಘೋಷಿಸಿಕೊಂಡಿಲ್ಲ. ಈಗಾಗಲೇ ಎರಡು ಬಾರಿ ನೋಟಿಸ್‌ ನೀಡಿದರೂ ಎಚ್ಚೆತ್ತುಕೊಂಡಿಲ್ಲ’ ಎಂದರು.

‘ಒಎಫ್‌ಸಿ ಕೇಬಲ್ ಹಾಗೂ ಟವರ್ ಅಳವಡಿಸಿರುವ ಟೆಲಿಕಾಂ ಕಂಪೆನಿಗಳು ಆನ್ ಲೈನ್‌ನಲ್ಲಿ ತೆರಿಗೆ ಪಾವತಿಸುವುದಾಗಿ ಹೇಳುತ್ತಿವೆ. ತೆರಿಗೆ ಸಂಗ್ರಹಕ್ಕೆ 15 ದಿನಗಳೊಳಗೆ ಆ್ಯಪ್ ಸಿದ್ಧಪಡಿಸುತ್ತೇವೆ’  ಎಂದು ತಿಳಿಸಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ 14,118 ಕಿಲೋಮೀಟರ್ ರಸ್ತೆ ಇದೆ. ಬಹುತೇಕ ಎಲ್ಲ ಕಡೆ ಒಎಫ್‌ಸಿ ಕೇಬಲ್‌ ಇದೆ. ಆದರೆ, ಯಾವೊಂದು ಕಂಪೆನಿಗಳು ಎಷ್ಟು ಮೀಟರ್‌ ಕೇಬಲ್‌ ಅಳವಡಿಸಿದ್ದೇವೆಂದು ಅಧಿಕೃತ ಘೋಷಣೆ ಮಾಡಿಲ್ಲ. ಪಾಲಿಕೆ ಎಂಜಿನಿಯರ್‌ಗಳ ಗಮನಕ್ಕೆ ತಾರದೇ, ಒಎಫ್‌ಸಿ ಕೇಬಲ್‌ಗಳನ್ನು  ಸಮಾಜಘಾತುಕ ಶಕ್ತಿಗಳ ನೆರವಿನಿಂದ ರಾತ್ರೋರಾತ್ರಿ  ಅಳವಡಿಸಿಕೊಳ್ಳುತ್ತಿರುವ ಬಗ್ಗೆಯೂ ಪಾಲಿಕೆ ಸದಸ್ಯರು ದೂರು ಕೊಟ್ಟಿದ್ದಾರೆ. ಅನಧಿಕೃತವಾಗಿ ಕೇಬಲ್ ಅಳವಡಿಸುವವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ಧರಿಸಿದ್ದೇವೆ’ ಎಂದರು.

ಟೆಂಡರ್‌ಶ್ಯೂರ್‌ನಡಿ ಅಭಿವೃದ್ಧಿಯಾಗಿರುವ 7 ರಸ್ತೆಗಳಲ್ಲಿ ಒಎಫ್‌ಸಿ ಕೇಬಲ್‌ಗೆ ಪ್ರತ್ಯೇಕ ಡಕ್ಟ್‌ ಇದೆ. ಈ ಡಕ್ಟ್‌ಗಳಲ್ಲಿ ಕೇಬಲ್‌ ಅಳವಡಿಸಲು ಪ್ರತಿ ಮೀಟರ್‌ಗೆ ₹1500  ತೆರಿಗೆ ಮತ್ತು ಹಿಂತಿರುಗಿಸುವ ಠೇವಣಿ ಪ್ರತಿ ಮೀಟರ್‌ಗೆ ₹500 ನಿಗದಿಪಡಿಸಿ, ಫೆಬ್ರುವರಿಯಲ್ಲೇ ಆದೇಶ ಹೊರಡಿಸಲಾಗಿದೆ’.

‘ರಿಲಯನ್ಸ್‌ ಜಿಯೋ, ಡಿಫೆನ್ಸ್, 3ಜಿ ಟೆಲಿಕಾಂ ಮಾತ್ರ ಪರವಾನಗಿ ಪಡೆದಿವೆ. ಉಳಿದ ಕಂಪೆನಿಗಳಿಗೆ ಸೇರಿದ ಒಎಫ್‌ಸಿ ಕೇಬಲ್‌ಗಳು ನೆಲಮಟ್ಟದ ಮೇಲೆ ನೇತುಕೊಂಡೇ ಇವೆ. ತೆರಿಗೆ ಪಾವತಿಸಿ ಟೆಂಡರ್‌ಶ್ಯೂರ್‌ ರಸ್ತೆಗಳ  ಡಕ್ಟ್‌

ಗಳಿಗೆ ಕೇಬಲ್‌ ಅಳವಡಿಸಿಕೊಳ್ಳಲೂ 15 ದಿನ ಗಡುವು ನೀಡಲಾಗಿದೆ. ಗಡುವು ಮೀರಿದರೆ ಒಎಫ್‌ಸಿ ಕೇಬಲ್‌

ಸಂಪರ್ಕ ಕಡಿತಗೊಳಿಸುತ್ತೇವೆ’ ಎಂದು ತಿಳಿಸಿದರು.

ಟರ್ಫ್‌ ಕ್ಲಬ್‌: ₹61 ಕೋಟಿ ತೆರಿಗೆ ಬಾಕಿ

‘ಇಲ್ಲಿನ ಟರ್ಫ್ ಕ್ಲಬ್ ಬಿಬಿಎಂಪಿಗೆ ₹61.32 ಕೋಟಿ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಅಲ್ಲದೆ, ₹15 ಲಕ್ಷ ಜಾಹೀರಾತು ತೆರಿಗೆಯನ್ನು ಪಾವತಿಸಿಲ್ಲ’ ಎಂದು ಎಂ.ಕೆ.ಗುಣಶೇಖರ್ ತಿಳಿಸಿದರು.

‘ತೆರಿಗೆ ವಸೂಲಿಗೆ ಮಂಗಳವಾರ ಸ್ಥಾಯಿ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ  ಟರ್ಫ್‌ ಕ್ಲಬ್‌ಗೆ ಭೇಟಿ ನೀಡಲಾಗಿತ್ತು. ಎರಡು ದಿನಗಳೊಳಗೆ ಬಾಕಿ ತೆರಿಗೆ ಪಾವತಿಸಲು ಗಡುವು ನೀಡಿದ್ದೇವೆ’ ಎಂದರು.

‘ವಾರ್ಷಿಕ ₹2 ಕೋಟಿ ಆಸ್ತಿ ತೆರಿಗೆ ಮತ್ತು  ₹15 ಲಕ್ಷ ಜಾಹೀರಾತು ತೆರಿಗೆಯನ್ನು ಕ್ಲಬ್‌ ಪಾವತಿಸಬೇಕು. ಆದರೆ, ವಾರ್ಷಿಕ ₹50 ಲಕ್ಷ ಆಸ್ತಿ ತೆರಿಗೆ ಮತ್ತು ವಾರ್ಷಿಕ ₹5 ಲಕ್ಷ ಜಾಹೀರಾತು ತೆರಿಗೆ ಪಾವತಿಸುತ್ತಿದೆ. 2008–09ರಿಂದ ಇದುವರೆಗೆ ತೆರಿಗೆ ಬಾಕಿ, ಬಡ್ಡಿ ಹಾಗೂ ದಂಡ ಸೇರಿ ಸುಮಾರು ₹61.32 ಕೋಟಿ ಬಾಕಿ ಉಳಿದಿದೆ ಎಂದು ತಿಳಿಸಿದರು.

‘ಟರ್ಫ್‌ ಕ್ಲಬ್‌ನಲ್ಲಿ ವಾರ್ಷಿಕ 300ರಿಂದ 350 ರೇಸ್‌ಗಳು ನಡೆದರೆ, ಒಂದೊಂದು ಪಂದ್ಯದಲ್ಲಿ 10ರಿಂದ 12 ಕುದುರೆಗಳು ಭಾಗವಹಿಸುತ್ತವೆ. ರೇಸ್‌ಗೆ ಇಳಿಯುವ ಒಂದೊಂದು ಕುದುರೆಗೆ ತಲಾ ₹500 ಜಾಹೀರಾತು ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕು. ಆದರೆ, ಇದರಲ್ಲೂ ಕ್ಲಬ್‌ ಪಾಲಿಕೆಗೆ ವಂಚಿಸಿರುವುದು ಕಂಡುಬಂದಿದೆ’ ಎಂದರು.

ಟರ್ಫ್‌ ಕ್ಲಬ್‌ ಅಧ್ಯಕ್ಷ ಜಗನ್ನಾಥ್‌ ಮತ್ತು ಸಿಇಒ ನಿರ್ಮಲ್‌ ಪ್ರಸಾದ್‌ ಅವರು ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)