ಶುಕ್ರವಾರ, ಡಿಸೆಂಬರ್ 13, 2019
20 °C
ದಾಳಿಯಿಂದ ಅಂತರ ಕಾಯ್ದುಕೊಂಡ ಲಷ್ಕರ್‌

ಅಬು ಇಸ್ಮಾಯಿಲ್‌ ಬೇಟೆ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ಅಬು ಇಸ್ಮಾಯಿಲ್‌ ಬೇಟೆ ಆರಂಭ

ಶ್ರೀನಗರ:  ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯ ಸಂಚುಕೋರನಾಗಿರುವ ಪಾಕಿಸ್ತಾನ ಪ್ರಜೆ, ಲಷ್ಕರ್‌– ಎ –ತಯಬಾ (ಎಲ್‌ಇಟಿ) ಸಂಘಟನೆಯ ಕಮಾಂಡರ್ ಅಬು ಇಸ್ಮಾಯಿಲ್‌ಗಾಗಿ ಭದ್ರತಾ ಪಡೆಗಳು ಹುಡುಕಾಟ ಆರಂಭಿಸಿವೆ.

ದಾಳಿಯಲ್ಲಿ ಇಸ್ಮಾಯಿಲ್‌ನ ಪಾತ್ರ ಇರುವುದು ಉಗ್ರರ ನಡುವೆ ನಡೆದಿರುವ ಸಂವಹನದ ಕುರಿತು ಕಲೆಹಾಕಿರುವ ಮಾಹಿತಿ ಹಾಗೂ ಇತರ ತನಿಖೆಗಳಿಂದ ತಿಳಿದುಬಂದಿದೆ. ಹಾಗಾಗಿ ಆತನ ಪತ್ತೆಗಾಗಿ ದಕ್ಷಿಣ ಕಾಶ್ಮೀರದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಉಗ್ರ ಬಶೀರ್‌ ಲಷ್ಕರಿ ಸೇರಿದಂತೆ ಲಷ್ಕರ್‌ ಸಂಘಟನೆಯ ಹಲವು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದಕ್ಕೆ ಪ್ರತಿಯಾಗಿ ಈ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು  ಹೇಳಿದ್ದಾರೆ.

‘ಕಳೆದ ತಿಂಗಳಿನಿಂದೀಚೆಗೆ ಉಗ್ರರ ವಿರುದ್ಧ ನಡೆಸಲಾಗಿರುವ ಕಾರ್ಯಾಚರಣೆಗಳಲ್ಲಿ ಆಗಿರುವ ಜೀವಹಾನಿಯಿಂದ ಭಯೋತ್ಪಾದಕರು ಹತಾಶೆಗೊಂಡಿದ್ದಾರೆ. ಹಾಗಾಗಿ ಈಗ ನಾಗರಿಕರು ಮತ್ತು ಪ್ರವಾಸಿಗರನ್ನು ಗುರಿಯಾಗಿಸಿಕೊಳ್ಳಲು ಅವರು ಆರಂಭಿಸಿದ್ದಾರೆ’ ಎಂದು ಅಧಿಕಾರಿ ಹೇಳಿದ್ದಾರೆ.

ಹಲವು ವರ್ಷಗಳಿಂದ ಕಾಶ್ಮೀರದಲ್ಲಿ ಸಕ್ರಿಯನಾಗಿರುವ ಇಸ್ಮಾಯಿಲ್‌, ವರ್ಷದ ಹಿಂದೆ ದಕ್ಷಿಣ ಕಾಶ್ಮೀರದಲ್ಲಿ ನೆಲೆ ಕಂಡುಕೊಂಡಿದ್ದಾನೆ ಎಂದು  ಹೇಳಿದ್ದಾರೆ.

ಲಷ್ಕರ್‌ ಸಂಘಟನೆಗೆ ನೆರವಾಗುತ್ತಿದ್ದ ಉತ್ತರಪ್ರದೇಶದ ಮುಜಫ್ಫರನಗರದ ನಿವಾಸಿ, ಹಿಂದೂ ಧರ್ಮಕ್ಕೆ ಸೇರಿದ ಉಗ್ರನೊಬ್ಬನ ಬಂಧನ ವಿಚಾರವನ್ನು ಪೊಲೀಸರು ಘೋಷಿಸಿರುವ ದಿನವೇ ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆದಿದೆ.

ಕೃತ್ಯ ಖಂಡಿಸಿದ ಲಷ್ಕರ್‌:  ಈ ಮಧ್ಯೆ, ಯಾತ್ರಿಕರ ಮೇಲೆ ನಡೆದಿರುವ ದಾಳಿ ಪ್ರಕರಣದಿಂದ ಎಲ್‌ಇಟಿ ಅಂತರ ಕಾಯ್ದುಕೊಂಡಿದೆ. ಅಲ್ಲದೇ, ಈ ಕೃತ್ಯವನ್ನು ಖಂಡಿಸಿದೆ.

ಈ ದಾಳಿಯು ಇಸ್ಲಾಂನ ಬೋಧನೆಗೆ ವಿರುದ್ಧವಾದದ್ದು ಎಂದು ಸಂಘಟನೆ ವಕ್ತಾರ ಅಬ್ದುಲ್ಲಾ ಘಜ್ನವಿ ಹೇಳಿದ್ದಾನೆ.

ಐ.ಎಸ್‌ ನಂಟಿನ ಶಂಕೆ: ಕೇರಳದ ವ್ಯಕ್ತಿ ಸೆರೆ

ನವದೆಹಲಿ:  ಭಯೋತ್ಪಾದನಾ ಸಂಘಟನೆ ಐ.ಎಸ್‌ ಜತೆಗೆ ನಂಟು ಹೊಂದಿರುವ ಶಂಕೆಯಲ್ಲಿ ಟರ್ಕಿಯಿಂದ ಗಡೀಪಾರು ಮಾಡಲಾಗಿರುವ ಕೇರಳದ ಶಹಜಹಾನ್‌ ವಿ.ಕೆ (32) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಕಣ್ಣೂರಿನ ಈ ವ್ಯಕ್ತಿಯನ್ನು ಕಳೆದ ವಾರ ಟರ್ಕಿಯಿಂದ ಗಡೀಪಾರು ಮಾಡಲಾಗಿತ್ತು. ಇದು ಈತ ಟರ್ಕಿಗೆ ನೀಡಿದ ಎರಡನೇ ಭೇಟಿಯಾಗಿತ್ತು. ಎರಡು ಬಾರಿಯೂ ಈತ ನಕಲಿ ಪಾಸ್‌ಪೋರ್ಟ್‌ ಬಳಸಿ ಅಲ್ಲಿಗೆ ಹೋಗಿದ್ದಾನೆ.

ಟರ್ಕಿಯಿಂದ ಸಿರಿಯಾಕ್ಕೆ ಹೋಗಿ ಐ.ಎಸ್‌ಗೆ ಸೇರಿಕೊಳ್ಳಬೇಕು ಎಂಬುದು ಈತನ ಬಯಕೆಯಾಗಿದ್ದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೋಸ, ವಂಚನೆ ಮತ್ತು ಪಾಸ್‌ಪೋರ್ಟ್‌ ಕಾಯ್ದೆ ಅಡಿಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಫೆಬ್ರುವರಿಯಲ್ಲಿ ಚೆನ್ನೈ ಮೂಲಕ ಈತ ಟರ್ಕಿಗೆ ಹೋಗಿದ್ದ. ಟರ್ಕಿಯಲ್ಲಿ ಸಿಕ್ಕಿಬಿದ್ದ ಈತನನ್ನು ಗಡೀಪಾರು ಮಾಡಲಾಗಿತ್ತು. ಮತ್ತೊಂದು ನಕಲಿ ಪಾಸ್‌ಪೋರ್ಟ್‌ ಮಾಡಿಕೊಂಡ ಈತ ಮತ್ತೆ ಟರ್ಕಿಗೆ ಹೋಗಿದ್ದ. ಎರಡನೇ ಬಾರಿಯೂ ಸಿಕ್ಕಿಬಿದ್ದು ಗಡೀಪಾರಾಗಿದ್ದಾನೆ.

ಟೆಲಿಗ್ರಾಂ ಆ್ಯಪ್‌ ಮೂಲಕ ಶಹಜಹಾನ್‌ ಐ.ಎಸ್‌ ಪರ ಒಲವಿರುವ ಜನರೊಂದಿಗೆ ಸಂಪರ್ಕದಲ್ಲಿದ್ದ. ಹಾಗಾಗಿ ತಾಂತ್ರಿಕ ಪರಿಣತರು ಈತನ ಫೋನ್‌ನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡೆರಡು ಬಾರಿ ಶಹಜಹಾನ್‌ ನಕಲಿ ಪಾಸ್‌ಪೋರ್ಟ್‌ ಪಡೆಯುವುದು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಐ.ಎಸ್‌ ಸೇರುವುದಕ್ಕಾಗಿ ಕೇರಳದಿಂದ ಹೋದ ಗುಂಪಿನ ಜತೆ ಈತನಿಗೆ ಸಂಪರ್ಕ ಇತ್ತೇ ಎಂಬುದನ್ನೂ ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)