ಬುಧವಾರ, ಡಿಸೆಂಬರ್ 11, 2019
20 °C

ಅಪಘಾತ: ಐದು ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪಘಾತ: ಐದು ಮಂದಿ ಸಾವು

ಕನಕಪುರ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 209ರ ಬೆಂಗಳೂರು ರಸ್ತೆ ಹುಚ್ಚಮ್ಮನದೊಡ್ಡಿ ಬೋರೆ ಬಳಿ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ  ಮೃತಪಟ್ಟವರನ್ನು ವಿವಿಧ ಫೈನಾನ್ಸ್‌ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರೆಂದು ಗುರುತಿಸಲಾಗಿದೆ.

ಕಾರೊಂದು ಕ್ಯಾಂಟರ್‌ಗೆ ಡಿಕ್ಕಿ ಬಡಿದು ಈ ಅವಘಡ ಸಂಭವಿಸಿತ್ತು. ಮೃತರನ್ನು ಸುಂದರ್‌ (19),  ರಾಜು (21), ಚಂದ್ರಶೇಖರ್‌ (31), ಸಂತೋಷಕುಮಾರ್‌ (21) ಮತ್ತು ಅನಿಲ್‌ಕುಮಾರ್‌ (23) ಎಂದು ಗುರುತಿಸಲಾಗಿದೆ.

ಇವರೆಲ್ಲರೂ ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತೇವೆಂದು ಹೇಳಿ ಮನೆಯಿಂದ ತೆರಳಿದ್ದರು. ಬಳಿಕ ತಾಲ್ಲೂಕಿನ ಕಬ್ಬಾಳಮ್ಮನ ದೇವಸ್ಥಾನದ ಬಳಿ ದೇವರ ಸೇವೆಯಲ್ಲಿ ಊಟ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದರು.

ಕನಕಪುರ ತಾಲ್ಲೂಕಿನ ಶೆಟ್ಟಿಕೆರೆದೊಡ್ಡಿ ಗ್ರಾಮದ ಮರೀಗೌಡರ ಮಗ ಸುಂದರ್‌, ತಾಯಿಯ ಜತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರು, ಮೋಟಾರ್‌ ಬೈಕ್‌ ಕಂಪೆನಿಯ ಫೈನಾನ್ಸ್‌ ವಿಭಾಗದಲ್ಲಿ, ರಾಜು, ಮಂಡ್ಯ ಟಿ.ವಿ.ಎಸ್‌. ಕಂಪೆನಿಯಲ್ಲಿ ಹಾಗೂ ಚಂದ್ರಶೇಖರ್‌, ಟಾಟಾ ಫೈನಾನ್ಸ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.

ಸಂತೋಷಕುಮಾರ್‌ ಹೊಸೂರಿನವರಾಗಿದ್ದು ಬೆಂಗಳೂರಿನ ಕೂಡ್ಲು ಗೇಟ್‌ನಲ್ಲಿ ವಾಸವಿದ್ದರು. ಅವರೂ ಫೈನಾನ್ಸ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.

ಅನಿಲ್‌ಕುಮಾರ್‌, ಆಂಧ್ರ ಪ್ರದೇಶದವರಾಗಿದ್ದು ಬೆಂಗಳೂರಿನ ಎಚ್‌್.ಎಸ್‌.ಆರ್‌. ಲೇಔಟ್‌ನಲ್ಲಿ ವಾಸವಿದ್ದರು. ಅವರು ಸ್ವಂತ ಟ್ಯಾಕ್ಸಿ ಇಟ್ಟುಕೊಂಡಿದ್ದರು. ಈ ಸ್ನೇಹಿತರು ಜತೆಗೂಡಿ ಅನಿಲ್‌ಕುಮಾರ್‌ ಅವರ ಕಾರಿನಲ್ಲೇ ಕಬ್ಬಾಳಮ್ಮನ ದೇವಾಲಯಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಬಾರದ ರಾಜು ಸಂಬಂಧಿಕರು: ರಾಜು ಅವರ ಸಂಬಂಧಿಕರು, ಬಾರದಿದ್ದರಿಂದ ಅವರ ಮೃತದೇಹವು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲೇ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)