ಬುಧವಾರ, ಡಿಸೆಂಬರ್ 11, 2019
20 °C

‘ಪ್ರಾಂಶುಪಾಲ ಹುದ್ದೆಗಳ ಭರ್ತಿ ಶೀಘ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪ್ರಾಂಶುಪಾಲ ಹುದ್ದೆಗಳ ಭರ್ತಿ ಶೀಘ್ರ’

ಬೆಂಗಳೂರು: ‘ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಈ ವರ್ಷದ ಅಂತ್ಯದಲ್ಲಿ  ಭರ್ತಿ ಮಾಡುತ್ತೇವೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.

ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಮತ್ತು ರಾಜ್ಯ ಸಹಕಾರಿ ಮಹಾಮಂಡಳಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಒಟ್ಟು 1,203 ಪಿಯು ಕಾಲೇಜುಗಳಿವೆ. 2016–17ನೇ ಸಾಲಿನಲ್ಲಿ 806 ಪ್ರಾಂಶುಪಾಲರ ಹುದ್ದೆಗಳು ಖಾಲಿಯಾಗಿತ್ತು. ಇದರಲ್ಲಿ ಸುಮಾರು 400 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ನೇರ ಹಾಗೂ ಬಡ್ತಿ ಮೂಲಕ ಉಳಿದ ಹುದ್ದೆಗಳಿಗೆ ನೇಮಕಾತಿ ಮಾಡುತ್ತೇವೆ’ ಎಂದು ತಿಳಿಸಿದರು.

‘ಶಿಕ್ಷಕರು ಪರೀಕ್ಷೆ ಸಮಯದಲ್ಲಿ ಪ್ರತಿಭಟನೆ ಮಾಡುವ ಮೂಲಕ ಮಕ್ಕಳ ಭವಿಷ್ಯ ಜತೆ ಆಟ ಆಡುವುದನ್ನು ಸಹಿಸುವುದಿಲ್ಲ. ಶಿಕ್ಷಕರು ಆ ಚಾಳಿಯನ್ನು ಬಿಟ್ಟು, ವಿದ್ಯಾರ್ಥಿಗಳು ಹಾಗೂ ಪೋಷಕರು ಇಟ್ಟಿರುವ ಗೌರವವನ್ನು ಉಳಿಸಿಕೊಳ್ಳಬೇಕು’ ಎಂದರು.

‘ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ಸೇರಿ 20 ಸಾವಿರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅನುಮೋದನೆ ನೀಡಿದ್ದೇವೆ. ಇದರಲ್ಲಿ 16 ಸಾವಿರ ಪ್ರಾಥಮಿಕ ಶಾಲೆ, 1500 ಪ್ರೌಢಶಾಲೆ ಹಾಗೂ 2500 ಪಿಯು ಅತಿಥಿ ಉಪನ್ಯಾಸಕರು ಸೇರಿದ್ದಾರೆ’ ಎಂದು ಹೇಳಿದರು.

ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ‘ವರ್ಗಾವಣೆ ವೇಳೆ ಉಪನ್ಯಾಸಕರಿಗೆ ಕೌನ್ಸೆಲಿಂಗ್ ಅವಕಾಶ ನೀಡಬೇಕು. ಪಿಎಚ್‌.ಡಿ ಹಾಗೂ ಎಂ.ಫಿಲ್ ಮಾಡಿರುವ ಉಪನ್ಯಾಸಕರಿಗೆ ಬಡ್ತಿ ನೀಡಬೇಕು. ವಿಜ್ಞಾನ ವಿಭಾಗದ ಉಪನ್ಯಾಸಕರು ವಾರಕ್ಕೆ 20 ತರಗತಿ ಪಾಠ ಮಾಡಬೇಕು ಎಂದು ನಿಗದಿಪಡಿಸಲಾಗಿದೆ. ಆದರೆ, ಕೆಲವು ಕಡೆ ಕಲೆ ಮತ್ತು ವಾಣಿಜ್ಯ ಉಪನ್ಯಾಸಕರಿಗೂ 20 ತರಗತಿಗಳನ್ನು ತೆಗೆದುಕೊಳ್ಳುವಂತೆ ಹೇಳುತ್ತಿದ್ದಾರೆ. ಈ ಬಗ್ಗೆ ಇಲಾಖೆ ಸರಿಯಾದ ಆದೇಶ ಹೊರಡಿಸಬೇಕು’ ಎಂಬ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಪಿಯುಸಿ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ‘ವಿಶ್ವಾಸ ಕಿರಣ’ ಯೋಜನೆಯನ್ನು ಈ ವರ್ಷದಿಂದ ಎಲ್ಲಾ ವಿದ್ಯಾರ್ಥಿಗಳಿಗೂ ವಿಸ್ತರಿಸುತ್ತೇವೆ

ತನ್ವೀರ್ ಸೇಠ್

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ

ಪ್ರತಿಕ್ರಿಯಿಸಿ (+)