ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಗೆ ಚತುಷ್ಪಥ ಭಾಗ್ಯ

ಸೊಲ್ಲಾಪುರ– ವಿಜಯಪುರ ರಸ್ತೆ ಯೋಜನೆಗೆ ಕೇಂದ್ರದ ಒಪ್ಪಿಗೆ
Last Updated 13 ಜುಲೈ 2017, 16:24 IST
ಅಕ್ಷರ ಗಾತ್ರ

ಬೆಂಗಳೂರು: ಸೊಲ್ಲಾಪುರ–ವಿಜಯಪುರ ನಡುವಣ ಹೊಸ ರಾಷ್ಟ್ರೀಯ ಹೆದ್ದಾರಿಯನ್ನು (ಎನ್‌ಎಚ್‌–52)  ಚತುಷ್ಪಥ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಬುಧವಾರ ಒಪ್ಪಿಗೆ ನೀಡಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದ ಮಧ್ಯೆ ಸಂಪರ್ಕ ಕಲ್ಪಿಸುವ 118 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಅಂದಾಜು ₹1,889 ಕೋಟಿ ವೆಚ್ಚವಾಗಲಿದೆ. ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಸ್ವಾಧೀನ, ನಿರ್ಮಾಣ ಪೂರ್ವ ಚಟುವಟಿಕೆಗಳ ವೆಚ್ಚವನ್ನೂ ಈ ಮೊತ್ತ ಒಳಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿಯು ಚತುಷ್ಪಥ ನಿರ್ಮಾಣ ಯೋಜನೆಗೆ ಒಪ್ಪಿಗೆ ನೀಡಿದೆ. ಈ ಹಿಂದೆ ಎನ್‌ಎಚ್–13 ಎಂದು ಕರೆಯಲಾಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಸದ್ಯ ದ್ವಿಪಥ ಹೊಂದಿದ್ದು,  ಮಹಾರಾಷ್ಟ್ರದ ಸೊಲ್ಲಾಪುರ, ಟಾಕಳಿ, ನಾಂದಣಿ ಮತ್ತು ಕರ್ನಾಟಕದ ಝಳಕಿ, ಹೊರ್ತಿ ಮತ್ತು ವಿಜಯಪುರ ಮಾರ್ಗವಾಗಿ ಹಾಯ್ದುಹೋಗುತ್ತದೆ.

ಈ ರಸ್ತೆ ಅತ್ಯಂತ ಜನನಿಬಿಡ ಬೆಂಗಳೂರು, ಚಿತ್ರದುರ್ಗ, ವಿಜಯಪುರ, ಸೊಲ್ಲಾಪುರ, ಔರಂಗಾಬಾದ್, ಧುಲೆ, ಇಂದೋರ್ ಮತ್ತು ಗ್ವಾಲಿಯರ್‌ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದೆ.

ಚತುಷ್ಪಥ ಹೇಗಿರುತ್ತದೆ?: ಚತುಷ್ಪಥದಲ್ಲಿ ವಾಹನ ಚಾಲಕರು, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ.

24 ಬಸ್‌ ತಂಗುದಾಣಗಳು, ಲಾರಿ ಚಾಲಕರ ವಿಶ್ರಾಂತಿ ತಾಣ, ಅನೇಕ ಸರ್ವೀಸ್‌ ರಸ್ತೆ, ಸಂಪರ್ಕ ರಸ್ತೆಗಳನ್ನು ಈ ಹೊಸ ಚತುಷ್ಪಥ ಹೊಂದಿರುತ್ತದೆ.

ಸೊಲ್ಲಾಪುರ ಮತ್ತು ವಿಜಯಪುರ ನಗರದ ಹೊರಭಾಗದಿಂದ (ಬೈಪಾಸ್‌)   ಹಾಯ್ದು ಹೋಗುವ ರಸ್ತೆಯಲ್ಲಿ ಆರು ಮೇಲುಸೇತುವೆ ನಿರ್ಮಿಸಲಾಗುತ್ತದೆ. ಇದರಿಂದ ಎರಡು ನಗರಗಳ ನಡುವಣ ಪ್ರಯಾಣ ಅಂತರ ತಗ್ಗಲಿದ್ದು,  ಸಾಕಷ್ಟು ಸಮಯ ಉಳಿತಾಯವಾಗಲಿದೆ.

ನಿರ್ಮಾಣ ಕಾಮಗಾರಿಗೆ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT