ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣಾಧೀನ ಕೈದಿಗೂ ಸಿಗಲಿ ಗೌರವ

ತಮಿಳು ಚಿತ್ರ ನಿರ್ದೇಶಕ ವೆಟ್ರಿ ಮಾರನ್‌ ಅಭಿಮತ
Last Updated 12 ಜುಲೈ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ಜಗತ್ತಿನಲ್ಲಿ ಏನೆಲ್ಲ ಬದಲಾವಣೆಯಾಗಿದೆ. ಆದರೆ, ವಿಚಾರಣಾಧೀನ ಕೈದಿಗಳನ್ನು ನಡೆಸಿಕೊಳ್ಳುವ ಮನಸ್ಥಿತಿ ಮಾತ್ರ ಬದಲಾಗಿಲ್ಲ’ ಎಂದು ತಮಿಳು ಚಿತ್ರ ನಿರ್ದೇಶಕ ವೆಟ್ರಿ ಮಾರನ್‌ ಬೇಸರ ವ್ಯಕ್ತಪಡಿಸಿದರು.

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ನಗರದಲ್ಲಿ ಬುಧವಾರ ಆಯೋಜಿಸಿದ್ದ, ದೇಶದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ವಿಚಾರಣಾಧೀನ ಕೈದಿಗಳ ಸಮಸ್ಯೆ ಕುರಿತ  ‘ಜಾಮೀನು ಕೊಡಿ, ಜೈಲು ಬೇಡ’  ಚರ್ಚೆಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ತಂತ್ರಜ್ಞಾನ ಪ್ರಗತಿಯಾಗಿದೆ. ಆದರೆ, ಪೊಲೀಸ್‌ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದೂ ಬದಲಾಗಿಲ್ಲ. ಹಳೆಯ ವ್ಯವಸ್ಥೆಯೇ ಮುಂದುವರಿದಿದೆ.’

‘ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸುವ ವ್ಯವಸ್ಥೆ ಇದೆ. ಆದರೂ, 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಟ್ಟವರು ವಿಚಾರಣೆ ನಡೆಯದೇ ಮೂರು ತಿಂಗಳು ಜೈಲಿನಲ್ಲಿ ಕಳೆದಿರುವ ನಿದರ್ಶನಗಳಿವೆ. ಇಂತಹ ವ್ಯವಸ್ಥೆ ಈಗಲೂ ಇರುವುದು ವೈಯಕ್ತಿಕವಾಗಿ ಸಾಕಷ್ಟು ನೋವುಂಟು ಮಾಡಿದೆ.’

‘ಕಂಬಿ ಹಿಂದೆ ಇರುವವರು ಮತ್ತು ಹೊರಗೆ ಇರುವವರು ಎಲ್ಲರೂ ಮನುಷ್ಯರೇ. ಮನುಷ್ಯನಿಗೆ ಕೊಡಬೇಕಾದ ಕನಿಷ್ಠ ಗೌರವ ಕೊಡಲೇಬೇಕು’ ಎಂದರು.

‘2016ರಲ್ಲಿ ದೇಶದಾದ್ಯಂತ ಜೈಲುಗಳಲ್ಲಿ 1,700 ಕೈದಿಗಳು ಮೃತಪಟ್ಟಿದ್ದಾರೆ. ಇದರಲ್ಲಿ ಶೇ 30ರಷ್ಟು ಕೈದಿಗಳು ಜೈಲು ಪ್ರವೇಶಿಸಿದ ಎರಡು ತಿಂಗಳೊಳಗೆ ಸಾವಿಗೀಡಾಗಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಂದ  ಕ್ರೂರ ಹಿಂಸೆ ಅನುಭವಿಸಿದ ಕಾರಣಕ್ಕೆ ಜೀವ ತೆತ್ತಿರುವುದು ಅಧ್ಯಯನ ವರದಿಯಿಂದ ಬೆಳಕಿಗೆ ಬಂದಿದೆ’ ಎಂದು ಬಂದೀಖಾನೆಗಳ ಸುಧಾರಕ ಮುರಳಿ ಕರ್ಣಂ ಅಭಿಪ್ರಾಯಪಟ್ಟರು.

ನಿವೃತ್ತ ಡಿಜಿಪಿ ಕುಚ್ಚಣ್ಣ ಶ್ರೀನಿವಾಸ್‌ ಮಾತನಾಡಿ, ‘ಪಾಳೆಗಾರಿಕೆ ಮತ್ತು ಬ್ರಿಟಿಷ್‌ ಕಾಲದ ಜೈಲು ವ್ಯವಸ್ಥೆ ಮುಂದುವರಿಸುತ್ತಿದ್ದೇವೆ. ಕೊಟ್ಟಿಗೆಯಲ್ಲಿ ದನಗಳನ್ನು ಕೂಡಿಹಾಕಿದಂತೆ ಬ್ಯಾರಕ್‌ಗಳಲ್ಲಿ ಕೈದಿಗಳನ್ನು ಉಸಿರಾಟಕ್ಕೂ ಜಾಗವಿಲ್ಲದಂತೆ ಬಂಧಿಸಿಡಲಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ 2,000 ಕೈದಿಗಳನ್ನು ಇಡಲು ಸ್ಥಳಾವಕಾಶವಿದೆ. ಆದರೆ, 5,000 ಸಾವಿರ ಕೈದಿಗಳನ್ನು ತುಂಬಲಾಗಿದೆ. ಇಷ್ಟು ಕೈದಿಗಳನ್ನು ನೋಡಿಕೊಳ್ಳಲು ಇರುವುದು 45 ಸಿಬ್ಬಂದಿ. ಮೊದಲು ಜೈಲುಗಳನ್ನು ಸುಧಾರಣೆ ಮಾಡಬೇಕಿದೆ’ ಎಂದರು.

‘ಭದ್ರತೆಗೆ ಪೊಲೀಸರು ಇಲ್ಲ ಎನ್ನುವ ನೆಪವೊಡ್ಡಿ ವಿಚಾರಣೆ ಮುಂದೂಡಿಸುವ ವ್ಯವಸ್ಥೆ ತಪ್ಪಬೇಕು’ ಎಂದು ಸಂಶೋಧಕಿ ಲಿಯಾ ವರ್ಗೀಸ್‌ ಅಭಿಪ್ರಾಯಪಟ್ಟರು.

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಕಾರ್ಯಕ್ರಮ ನಿರ್ದೇಶಕಿ ಅಸ್ಮಿತಾ ಬಸು ಸಂವಾದ ನಿರ್ವಹಿಸಿದರು.

**

ಹೊಸ ಚಿತ್ರ ಸದ್ಯದಲ್ಲೇ ತೆರೆಗೆ

‘ಧನುಷ್‌ ನಟನೆಯ ಹೊಸ ತಮಿಳು ಸಿನಿಮಾವನ್ನು ನಿರ್ದೇಶಿಸುತ್ತಿದ್ದೇನೆ. ಈ ತಿಂಗಳ ಅಂತ್ಯದೊಳಗೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ’ ಎಂದು ನಿರ್ದೇಶಕ ವೆಟ್ರಿ ಮಾರನ್‌ ತಿಳಿಸಿದರು.

‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು ‘ಕನ್ನಡ ಸಿನಿಮಾ ನಿರ್ದೇಶಿಸುವ ಯೋಜನೆ ಕೈಬಿಟ್ಟಿಲ್ಲ. ರಾಷ್ಟ್ರಪ್ರಶಸ್ತಿ ತಂದುಕೊಟ್ಟ ವಿಸಾರಣೈ(ವಿಚಾರಣೆ)' ತಮಿಳು ಚಿತ್ರವನ್ನು ಹಿಂದಿಯಲ್ಲಿ ನಿರ್ಮಿಸಲು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮುಂದಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT