ಶುಕ್ರವಾರ, ಡಿಸೆಂಬರ್ 6, 2019
17 °C

ಅರ್ಕಾವತಿ ಬಡಾವಣೆ ಸಂತ್ರಸ್ತರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಕಾವತಿ ಬಡಾವಣೆ ಸಂತ್ರಸ್ತರಿಂದ ಪ್ರತಿಭಟನೆ

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ಮಂಜೂರಾದ ನಿವೇಶನಗಳನ್ನು ಡಿನೋಟಿಫಿಕೇಷನ್‌ ಹಾಗೂ ರೀಡೂ ಪ್ರಕ್ರಿಯೆಯಿಂದಾಗಿ ಕಳೆದುಕೊಂಡಿರುವ ಸಂತ್ರಸ್ತರು ಬುಧವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಯಾವುದೇ ಅಧಿಕಾರಿ ಮನವಿ ಸ್ವೀಕರಿಸಲು ಬಾರದ್ದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರರ ಮುಖಂಡ ಚಂದ್ರಶೇಖರ್‌, ‘ಅರ್ಕಾವತಿ ಬಡಾವಣೆಯಲ್ಲಿ ಲಭ್ಯ ಇರುವ ನಿವೇಶನಗಳನ್ನು ಪತ್ತೆ ಹಚ್ಚಲು ಬಿಡಿಎ ಅಧಿಕಾರಿಗಳು ಶ್ರಮವಹಿಸುತ್ತಿದ್ದಾರೆ. 1,200 ಚದರ ಅಡಿ  ವಿಸ್ತೀರ್ಣದ ಸುಮಾರು 50 ನಿವೇಶನಗಳು ಹಾಗೂ 600 ಚದರ ಅಡಿ ವಿಸ್ತೀರ್ಣದ ಸುಮಾರು 150 ನಿವೇಶನಗಳನ್ನು ಗುರುತಿಸಿದ್ದೇವೆ. ನಿವೇಶನಕ್ಕೆ ಶುಲ್ಕ ಪಾವತಿ ಮಾಡಿದ ದಿನಾಂಕವನ್ನು ಆಧರಿಸಿ ಜ್ಯೇಷ್ಠತಾ ಪಟ್ಟಿ ತಯಾರಿಸಿಕೊಂಡು ಈ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು  ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಮುಂದಾದರು.

ಆಗ ಅವರನ್ನೇ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ‘ ನಮ್ಮ ಸಮಸ್ಯೆಗೆ ಪರಿಹಾರ ಸಿಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ನಾವು ಪ್ರತಿವಾರವೂ ಇಲ್ಲಿ ಬಂದು ಧರಣಿ ಕುಳಿತು ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

‘ಅರ್ಕಾವತಿಯಲ್ಲಿ ನಿವೇಶನ ಕಳೆದುಕೊಂಡವರಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ  ನೀಡಲು ಬಿಡಿಎ ಸಿದ್ಧವಿದೆ. ನಾವು ಅದಕ್ಕೊಪ್ಪುತ್ತಿಲ್ಲ. ನಿಮ್ಮಲ್ಲಿ ಯಾರಾದರೂ ಈ ಬಗ್ಗೆ ಆಸಕ್ತಿ ವಹಿಸಿದರೆ ನಾವು ತಡೆಯುವುದಿಲ್ಲ. ತಾಳ್ಮೆ ಕಳೆದುಕೊಂಡರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇನ್ನೂ ಒಂದು ವಾರ ಕಾಯೋಣ. ಬಿಡಿಎಯ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳೋಣ’ ಎಂದು ಚಂದ್ರಶೇಖರ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)