ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಾಟ ಪ್ರಚಾರಕ್ಕೆ ಬೇಕಿದೆ ವ್ಯವಸ್ಥಿತ ಶಕ್ತಿಕೇಂದ್ರ

ದಾವಣಗೆರೆಯಲ್ಲಿ 50 ವರ್ಷದ ಹಿಂದೆ ನನ್ನ ಜೀವನದ ಮೊದಲ ಸನ್ಮಾನ ಸ್ವೀಕರಿಸಿದ್ದೆ: ಬೆಳಗಲ್ಲು ವೀರಣ್ಣ
Last Updated 13 ಜುಲೈ 2017, 5:16 IST
ಅಕ್ಷರ ಗಾತ್ರ

* ಅಧಿಕಾರಾವಧಿಯಲ್ಲಿ ಪ್ರಮುಖವಾಗಿ ಕೈಗೊಂಡ ಕಾರ್ಯಕ್ರಮಗಳು ಯಾವುವು?
     ತೆಂಕನಾಡ ಯಕ್ಷಗಾನ, ವರ್ಣವೈಷಮ್ಯ, ದೀಕ್ಷಾಕಂಕಣ, ನಿಜಗುಣ ಶಿವಯೋಗಿ, ಬಡಗುತಿಟ್ಟು ಬಣ್ಣದ ಕಲಾವಿದ ಸಕ್ಕಟ್ಟು (ಲಕ್ಷ್ಮೀನಾರಾಯಣಯ್ಯ) ಅವರ ಆತ್ಮಕಥನ ಮತ್ತು ಲೇಖನಗಳು, ಉಲ್ಲಾಸದತ್ತ ವಿಜಯ ಹಾಗೂ ಇತರೆ ಪ್ರಸಂಗಗಳು, ಎರಡು ಯಕ್ಷಗಾನ ಪ್ರಸಂಗಗಳನ್ನು ಪುಸ್ತಕಗಳಾಗಿ ಪ್ರಕಟಿಸಲಾಗಿದೆ. ಇನ್ನೂ ಐದು ಬಯಲಾಟ ಪುಸ್ತಕಗಳು ಪ್ರಕಟಣೆ ಹಂತದಲ್ಲಿವೆ.

ಬಯಲಾಟ, ಯಕ್ಷಗಾನ, ಶ್ರೀಕೃಷ್ಣಪಾರಿಜಾತ, ಸಣ್ಣಾಟ, ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟ, ಮೂಡಲಪಾಯ ಪ್ರಕಾರಗಳ 18 ಪ್ರಸಿದ್ಧ ಕಲಾವಿದರ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲಾಗಿದೆ. ಇವುಗಳ ಕಾಲಾವಧಿ 30 ನಿಮಿಷ. 19ನೇ ಸಾಕ್ಷ್ಯಚಿತ್ರ ಸಿದ್ಧಗೊಳ್ಳುತ್ತಿದೆ. ಕಲಾವಿದರು, ಸಾರ್ವಜನಿಕರಿಂದ ಸಾಕ್ಷ್ಯಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿಭಿನ್ನ ವಿಷಯಗಳ ಕುರಿತಂತೆ ಕ್ಷೇತ್ರಕಾರ್ಯ ನಡೆಸಿ ಪ್ರಬಂಧ ರಚಿಸಲು ಈ ಮೂರು ವರ್ಷಗಳಲ್ಲಿ 24 ಜನರಿಗೆ ತಲಾ ₹ 1ಲಕ್ಷ ಫೆಲೋಶಿಪ್‌ ನೀಡಲಾಗಿದೆ.

ವೈಯಕ್ತಿಕವಾಗಿ ತುಂಬಾ ಖುಷಿಕೊಟ್ಟ ಸಂಗತಿ ಕಲಾವಿದರ ಸಮೀಕ್ಷೆ ನಡೆಸಿದ್ದು; ದೊಡ್ಡಾಟ, ಸಣ್ಣಾಟ ಕಲಾವಿದರು 250 ಹಾಗೂ ಯಕ್ಷಗಾನ ಕಲಾವಿದರು 250.  ಒಟ್ಟು 500 ಕಲಾವಿದರ ಸಮೀಕ್ಷೆ ನಡೆಸಿ, ಅವರ ಪ್ರದರ್ಶನವನ್ನೂ ದಾಖಲೀಕರಣಗೊಳಿಸಲಾಗಿದೆ. ಉಳಿದಂತೆ ಅಕಾಡೆಮಿ ಕಾರ್ಯಕ್ರಮಗಳನ್ನು ಸಕಾಲಕ್ಕೆ ಆಯೋಜಿಸುತ್ತಾ ಬರಲಾಗಿದೆ.

* ಸರ್ಕಾರ ಈಗಾಗಲೇ ಬಯಲಾಟ ಅಕಾಡೆಮಿಯನ್ನು ಪ್ರತ್ಯೇಕವಾಗಿ ಘೋಷಿಸಿದ್ದು, ಇದರಿಂದ ಯಕ್ಷಗಾನ ಬಯಲಾಟ ಅಕಾಡೆಮಿಯ ಅಸ್ವಿತ್ತಕ್ಕೆ ಧಕ್ಕೆಯಾಗುವುದಿಲ್ಲವೇ?
     ಇಲ್ಲ. ಪ್ರತ್ಯೇಕಗೊಳ್ಳುವುದರಿಂದ ಎರಡೂ ಕಲಾ ಪ್ರಕಾರಗಳು ಇನ್ನಷ್ಟು ಶಕ್ತಿಶಾಲಿಯಾಗಲಿವೆ. ಯಕ್ಷಗಾನ ಹಾಗೂ ಬಯಲಾಟ ಅಕಾಡೆಮಿಗಳು ಪ್ರತ್ಯೇಕಗೊಳ್ಳಬೇಕು ಎಂಬ ಒತ್ತಡ ಬಹಳ ಹಿಂದಿನಿಂದಲೂ ಇತ್ತು. ಆದರೆ, 27 ಜಿಲ್ಲೆಯಲ್ಲಿರುವ ಬಯಲಾಟಕ್ಕೆ ₹ 50 ಲಕ್ಷ ಹಾಗೂ ಮೂರು ಜಿಲ್ಲೆಯಲ್ಲಿರುವ ಯಕ್ಷಗಾನ ಕಲೆಗೆ ₹50 ಲಕ್ಷ ಅನುದಾನ ಸಮಾನ ಹಂಚಿಕೆ ಮಾಡಿರುವುದು ಸರಿ ಅಲ್ಲ.

* ಯಕ್ಷಗಾನದಂತೆ ಬಯಲಾಟ ಕಲೆಯನ್ನು ಪೋಷಿಸುವ ನಿಟ್ಟಿನಲ್ಲಿ ಅಕಾಡೆಮಿ ಕೈಗೊಂಡಿರುವ ಕ್ರಮಗಳೇನು?
    ಕಲೆ, ಬೆಳವಣಿಗೆ ಕಾಣುವುದು ಯುವ ಜನಾಂಗದ ಮೂಲಕ ಎಂಬ ಅರಿವಿದೆ. ಹಾಗಾಗಿ, ಯುವಕ–ಯುವತಿಯರಿಗೆ ಬಯಲಾಟದಲ್ಲಿ ತರಬೇತಿ ನೀಡಲಾಗಿದೆ. ನಮ್ಮಲ್ಲಿ ಸಂಪನ್ಮೂಲ ವ್ಯಕ್ತಿಗಳು ಇದ್ದಾರೆ. ಆದರೆ, ಅವರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಒಂದೆರಡು ವಾರಗಳ ತರಬೇತಿಗಳಿಂದ ಅನುಕೂಲವಾಗುವುದಿಲ್ಲ ಎಂಬ ಅರಿವೂ ಇದೆ. ಹಾಗಾಗಿ, ತರಬೇತಿಯನ್ನು ಐದು ತಿಂಗಳಿಗೆ ನಿಗದಿಗೊಳಿಸಿ, ಶಿಬಿರಾರ್ಥಿ ಹಾಗೂ ಸಂಪನ್ಮೂಲ ವ್ಯಕ್ತಿಗಳು ಇಬ್ಬರಿಗೂ ಅಕಾಡೆಮಿಯಿಂದ ಸಂಭಾವನೆ ನೀಡಲಾಗಿದೆ. 

* ಆಡಳಿತಾವಧಿ ಮುಕ್ತಾಯ ಹಂತದಲ್ಲಿದೆ. ಕಂಡ ಕನಸುಗಳು ಈಡೇರಿವೆಯೇ?
    12 ಸದಸ್ಯರ ಸಹಕಾರ, ರಿಜಿಸ್ಟ್ರಾರ್ ಎಸ್‌.ಎಚ್‌.ಶಿವರುದ್ರಪ್ಪ ಸಲಹೆಗಳಿಂದಾಗಿ ಅಕಾಡೆಮಿಯು ಉತ್ತಮ ಕೆಲಸ ಮಾಡಿದೆ ಎನ್ನುವ ತೃಪ್ತಿ ಇದೆ. ಪಠ್ಯಪುಸ್ತಕದಲ್ಲಿ ಬಯಲಾಟದ ಪ್ರಸಂಗಗಳು ಬರಬೇಕು. ಯಕ್ಷಗಾನ ಪ್ರಕಾರವನ್ನು ಪ್ರಚುರಪಡಿಸಲು ವ್ಯವಸ್ಥಿತವಾದ ಶಕ್ತಿಕೇಂದ್ರಗಳಿವೆ. ಆದರೆ, ಬಯಲಾಟವನ್ನು ತಿಳಿದವರೂ ಅದನ್ನು ಪ್ರಚುರಪಡಿಸಲು ಹಿಂಜರಿಯುತ್ತಾರೆ.

ಇಂತಹ ಕಲೆಗಳಿಂದ ಲಾಭ ಪಡೆದ ವಿದ್ವಾಂಸರು, ತಜ್ಞರು ಈ ಬಗ್ಗೆ ಹೆಚ್ಚು ಮಾತನಾಡಬೇಕು. ಜನಪ್ರತಿನಿಧಿಗಳು ಒಲವು ವ್ಯಕ್ತಪಡಿಸಬೇಕು. ಇಂದಿಗೂ ರಾಜ್ಯದ ಹಲವು ಹಳ್ಳಿಗಳಲ್ಲಿ ಈ ಕಲೆ ಜೀವಂತವಾಗಿದೆ. ಅದನ್ನು ಮುನ್ನೆಲೆಗೆ ತರುವುದಕ್ಕೆ ಪ್ರಜ್ಞಾವಂತರೇ ಹಿಂಜರಿಯುತ್ತಿರುವುದು ಬೇಸರದ ಸಂಗತಿ. ನನ್ನ ಒಲವು ತೊಗಲುಗೊಂಬೆಯಾಟ. ಅಧಿಕಾರಾವಧಿ ಮುಗಿಯುತ್ತಿದ್ದಂತೆ ತೊಗಲುಗೊಂಬೆಯಾಟದಲ್ಲಿ ಬುದ್ಧ, ಆದಿಶಂಕರ, ಸ್ವಾಮಿ ವಿವೇಕಾನಂದ ಅವರನ್ನು ತರಬೇಕು ಎನ್ನುವುದು ಆಸೆ.

* ತೊಗಲುಗೊಂಬೆಯಾಟದ ಜತೆ ನೀವು ನಾಟಕ ಕಲಾವಿದರೂ ಹೌದು. ಆ ಅನುಭವವನ್ನು ಸಂಕ್ಷಿಪ್ತವಾಗಿ ಹೇಳಿ.
     ಇದೇ ದಾವಣಗೆರೆಯಲ್ಲಿ 50 ವರ್ಷದ ಹಿಂದೆ ನನ್ನ ಜೀವನದ ಮೊದಲ ಸನ್ಮಾನ ಸ್ವೀಕರಿಸಿದ್ದೆ. ನಾನು ಮೂಲತಃ ನಾಟಕ ಕಲಾವಿದ. ಹೊನ್ನಪ್ಪ ಭಾಗವತರ ನಾಟಕದ ಕಂಪೆನಿ ದಾವಣಗೆರೆಯಲ್ಲಿ ಬೀಡುಬಿಟ್ಟಾಗ ಇಲ್ಲಿನ ಪ್ರಸಿದ್ಧ ಕಲಾವಿದ ಶಾಂತಕುಮಾರ್‌ ಜತೆ ಮೀರ್‌ ಸಾದಿಕ್‌ ಹಾಗೂ ತಿಪ್ಪಣ್ಣ ಪಾತ್ರಗಳಿಗಾಗಿ ಅಭಿನಂದನೆ ಸ್ವೀಕರಿಸಿದ್ದೆ. ಜೀವನದಲ್ಲಿ ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ನನ್ನೂರು ಬಳ್ಳಾರಿ ಜಿಲ್ಲೆ ಬೆಳಗಲ್ಲು. 1936ರಲ್ಲಿ ನನ್ನ ಜನನ. ತಂದೆ ದೊಡ್ಡ ಹನುಮಂತಪ್ಪ ಪ್ರಸಿದ್ಧ ಪಿಟೀಲು ವಾದಕರಾಗಿದ್ದರು. ಅಲ್ಲದೇ, ಬಯಲಾಟದ ಸ್ತ್ರೀ ಪಾತ್ರ ವೇಷಧಾರಿಯಾಗಿದ್ದರು. ತಂದೆಯ ಬಯಲಾಟದ ವಿದ್ಯೆಯನ್ನು ಮೈಗೂಡಿಸಿಕೊಂಡಿದ್ದೆ. ಬಾಲ್ಯದಲ್ಲಿ ಹಾಡುಗಾರಿಕೆ ಒಲಿದಿತ್ತು. 10ನೇ ವಯಸ್ಸಿಗೆ ‘ಪ್ರಹ್ಲಾದ’ನ ಪಾತ್ರ ಮಾಡಿದ್ದೆ. ನನ್ನ ಧ್ವನಿ ಮತ್ತು ಗಾಯನ ಸಿರಿಯನ್ನು ಮೆಚ್ಚಿಕೊಂಡಿದ್ದ ಜೋಳದರಾಶಿ ದೊಡ್ಡನಗೌಡರು, ವೈ.ಎಂ.ಚಂದ್ರಯ್ಯಸ್ವಾಮಿ ತಮ್ಮ ಕಂಪೆನಿ ನಾಟಕಗಳಲ್ಲಿ ಅವಕಾಶ ಕೊಟ್ಟು ಪ್ರೋತ್ಸಾಹಿಸಿದರು. 

ಹೊನ್ನಪ್ಪ ಭಾಗವತರ ಶ್ರೀಉಮಾಮಹೇಶ್ವರ ನಾಟ್ಯ ಸಂಘ, ಬಳ್ಳಾರಿ ಲಲಿತಮ್ಮನವರ ಶ್ರೀಲಲಿತ ಕಲಾ ನಾಟ್ಯ ಸಂಘ, ಚಂದ್ರಯ್ಯಸ್ವಾಮಿ ಅವರ ಶ್ರೀನಟರಾಜ ನಾಟಕ ಮಂಡಳಿಗಳಲ್ಲಿ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಬಾಲನಟ, ಸ್ತ್ರೀ ಪಾತ್ರಧಾರಿ, ಖಳನಾಯಕ, ಹಾಸ್ಯಗಾರನಾಗಿ ಅಭಿನಯಿಸಿದ್ದೆ. ಕಂದಗಲ್ಲು ಹನುಮಂತರಾಯರ ‘ರಕ್ತರಾತ್ರಿ’ ನಾಟಕದ ಶಕುನಿ ಪಾತ್ರ ನನಗೆ ಅಪಾರ ಯಶಸ್ಸು ತಂದಿತು. ಮುಂದೆ ಸ್ವಂತ ‘ನಾಟಕ ಕಲಾ ಮಿತ್ರ ಮಂಡಳಿ’ ಸ್ಥಾಪಿಸಿ ಎರಡು ದಶಕಕ್ಕೂ ಹೆಚ್ಚು ಕಾಲ ನಡೆಸಿದ್ದೆ.

***

ಬೆಳಗಲ್ಲು ವೀರಣ್ಣ ವೃತ್ತಿರಂಗಭೂಮಿ ಹಾಗೂ ತೊಗಲು ಗೊಂಬೆಯಾಟದ ಹೆಸರಾಂತ ಕಲಾವಿದ. ಪೌರಾಣಿಕ ಕಥೆಗಳಿಗಷ್ಟೇ ಸೀಮಿತವಾಗಿದ್ದ ತೊಗಲು ಗೊಂಬೆಯಾಟದ ಪ್ರಕಾರವನ್ನು ಐತಿಹಾಸಿಕ ಮತ್ತು ಸಾಮಾಜಿಕ ವಸ್ತುಗಳ ಕಥಾ ಪ್ರಸಂಗಗಳನ್ನು ನಿರೂಪಿಸಲು ಮೊಟ್ಟಮೊದಲಿಗೆ ಭಾರತದಲ್ಲಿ ಬಳಸಿದ ಏಕೈಕ ಕಲಾವಿದರೆಂಬ ಹೆಗ್ಗಳಿಕೆ ಇವರದು. ವೀರಣ್ಣ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಸ್ತುತ ಅಧ್ಯಕ್ಷರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿ ಪುರಸ್ಕೃತರು. ಬರುವ ಆಗಸ್ಟ್‌ನಲ್ಲಿ ವೀರಣ್ಣ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಅಕಾಡೆಮಿ, ಜುಲೈ 13 ಮತ್ತು 14ರಂದು ದಾವಣಗೆರೆಯಲ್ಲಿ ‘ಬಯಲಾಟ ಯಕ್ಷಗಾನ ಕಲಾ ಸಂಭ್ರಮ’ ಹಮ್ಮಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT