ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಹಣಿ ವಿತರಣೆ ವಿಳಂಬಕ್ಕೆ ರೈತರ ಆಕ್ರೋಶ

ಹುಮಾನಾಬಾದ್‌: ರೊಚ್ಚಿಗೆದ್ದ ರೈತರಿಂದ ತಹಶೀಲ್ದಾರ್‌ ಮುತ್ತಿಗೆ
Last Updated 13 ಜುಲೈ 2017, 6:33 IST
ಅಕ್ಷರ ಗಾತ್ರ

ಹುಮನಾಬಾದ್: ಪಹಣಿ ನೀಡುವ ವೇಳೆ ಆಗುತ್ತಿರುವ ವಿಳಂಬವನ್ನು ಖಂಡಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು   ತಹಶೀಲ್ದಾರ್‌ ಡಿ.ಎಂ.ಪಾಣಿ ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆಯಿತು.

‘ಬ್ಯಾಂಕಿನಲ್ಲಿ ಬೆಳೆ ವಿಮೆ ಪರಿಹಾರಕ್ಕಾಗಿ ಪಹಣಿ ಪತ್ರ ಕಡ್ಡಾಯಗೊಳಿಸಲಾಗಿದೆ. ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ನೆಪ ಹೇಳಿ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಪಹಣಿ ಪಡೆಯಲು ಎಲ್ಲ ಕೆಲಸಗಳನ್ನು ಬಿಟ್ಟು ಬೆಳಿಗ್ಗೆಯಿಂದ ಸಂಜೆವರೆಗೂ ಸಾಲಲ್ಲಿ ನಿಂತರೂ ಪಹಣಿ ಲಭ್ಯವಾಗದೇ ಮನೆಗೆ ವಾಪಸ್‌ ಹೋಗುತ್ತಿದ್ದೇವೆ’ ಎಂದು ತಾಲ್ಲೂಕಿನ ಗಡವಂತಿ ಗ್ರಾಮದ ರೈತ ಪ್ರಕಾಶ ರೂಗನ್‌ ಬೇಸರ ವ್ಯಕ್ತಪಡಿಸಿದರು.

‘ಸರ್ಕಾರ ಒಂದೆಡೆ ವಿಮೆಗಾಗಿ ಸಕಾಲಕ್ಕೆ ದಾಖಲೆ ಸಲ್ಲಿಸುವಂತೆ ಆದೇಶಿಸುತ್ತದೆ. ಇನ್ನೊಂದೆಡೆ ತಾಂತ್ರಿಕ ದೋಷ ನೆಪವೊಡ್ಡಿ ಅಧಿಕಾರಿಗಳು ಪಹಣಿ ವಿತರಣೆಗೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಅಷ್ಟಕ್ಕೂ ಸಕಾಲಕ್ಕೆ ಪಹಣಿ ಸಿಗದೇ ವಿಮೆ ಸೌಲಭ್ಯದಿಂದ ವಂಚಿತರಾದರೇ ಯಾರು ಹೊಣೆ’ ಎಂದು ಮೋಳಕೇರಾ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಕಾಂತ ಜಡಗೆ ಪ್ರಶ್ನಿಸಿದರು.

‘ ದೇಶಕ್ಕೆ ಅನ್ನ ಕೊಡುವ ರೈತರು ಎಲ್ಲ ಕೆಲಸ ಬಿಟ್ಟು ತಹಶೀಲ್ದಾರ್‌ ಕಚೇರಿ ಕಾಯಬೇಕಾದ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ’ ಎಂದು ತಾಲ್ಲೂಕಿನ ಕಂದಗೂಳ್‌ ಗ್ರಾಮದ ಮಾರುತಿ, ಲಕ್ಷ್ಮಣ, ಚಂದ್ರನಹಳ್ಳಿ ಗ್ರಾಮದ ತುಕಾರಾಮ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬೆಳಿಗ್ಗೆಯಿಂದಲೇ ಬಂದು ಸಾಲಲ್ಲಿ ನಿಂತ ಶರಣವ್ವಜ್ಜಿ, ವಿಮಲಾಬಾಯಿ, ನರಸಮ್ಮ, ಸರಸ್ವತಿ, ಮಾಣಿಕಮ್ಮ, ಲಕ್ಷ್ಮಿ ಸುಶೀಲಾಬಾಯಿ ಅಧಿಕಾರಿಗಳ ವಿಳಂಬ ಧೋರಣೆಯನ್ನು ಖಂಡಿಸಿದರು.

‘ಅತಿವೃಷ್ಟಿ, ಅನಾವೃಷ್ಟಿ ಒಂದಿಲ್ಲೊಂದು ಕಾರಣದಿಂದ ತೊಂದರೆಗೆ ಸಿಲುಕಿರುವ ರೈತರಿಗೆ ನೆರವು ನೀಡುವ ಉದ್ದೇಶದಿಂದ ಸರ್ಕಾರ ಪಹಣಿ ಸಲ್ಲಿಸಲು ಸೂಚಿಸಿದೆ. ಸಮಸ್ಯೆ ಇದ್ದರೆ ಅದನ್ನು ಸರಿಪಡಿಸುವುದು ನಮ್ಮ ಜವಾಬ್ದಾರಿ. ಇಂದಿನಿಂದ ದಿನಾಂಕ ಮುಗಿಯುವ ತನಕ ನಿತ್ಯ ತಡರಾತ್ರಿವರೆಗೂ ಪಹಣಿ ವಿತರಿಸಲಾಗುವುದು. ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ’ ಎಂದು ತಹಶೀಲ್ದಾರ್‌ ಡಿ.ಎಂ.ಪಾಣಿ ಅವರು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಸ್ಥಗಿತಗೊಳಿಸಿದರು.

***

ಹೆಚ್ಚುವರಿ ಪಹಣಿ ವಿತರಣಾ ಕೇಂದ್ರ ತೆರೆಯಲು  ಆಗ್ರಹ

ಬಸವಕಲ್ಯಾಣ: ಇಲ್ಲಿನ ಮಿನಿ ವಿಧಾನಸೌಧದಲ್ಲಿ ಒಂದೇ ಪಹಣಿ ವಿತರಣಾ ಕೇಂದ್ರ ಇರುವುದರಿಂದ ರೈತರು ತೊಂದರೆ ಅನುಭವಿಸುತ್ತಿದ್ದು ಮತ್ತೊಂದು ಕೇಂದ್ರ ಆರಂಭಿಸಬೇಕು ಎಂದು ತಾಲ್ಲೂಕು ರೈತ ಸಂಘ ಅಧ್ಯಕ್ಷ ಚಂದ್ರಶೇಖರ ಜಮಖಂಡಿ ಒತ್ತಾಯಿಸಿದ್ದಾರೆ.

‘ತಾಲ್ಲೂಕಿನಲ್ಲಿ 50 ಸಾವಿರಕ್ಕೂ ಅಧಿಕ ರೈತರು ಪಹಣಿ ಹಕ್ಕುದಾರರಾಗಿದ್ದು, ಕೇವಲ ಒಂದು  ಪಹಣಿ ವಿತರಣಾ    ಕೇಂದ್ರ ಆರಂಭಿಸಲಾಗಿದೆ. ಹೋಬಳಿ ಮಟ್ಟದಲ್ಲಿ ಇಂಥ ಕೇಂದ್ರಗಳನ್ನು ಆರಂಭಿಸಿದ್ದರೂ ಅವು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಆದ್ದರಿಂದ ಎಲ್ಲರೂ ತಾಲ್ಲೂಕು ಕೇಂದ್ರಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.

ತಾಲ್ಲೂಕಿನ ಮಿನಿ ವಿಧಾನಸೌಧದಲ್ಲಿ ಇನ್ನೊಂದು ಪಹಣಿ ಕೇಂದ್ರ ಆರಂಭಿಸುವ ಜತೆಗೆ ಪ್ರತಿ ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಕೇಂದ್ರದಲ್ಲಿನ ಪಹಣಿ ವಿತರಣಾ ಕೇಂದ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

***

ತಾಂತ್ರಿಕ ದೋಷದಿಂದ ಪಹಣಿ ಲಭ್ಯವಾಗದೆ ರೈತರು ಮಂಗಳವಾರ ವಾಪಸ್‌ ಹೋಗಿದ್ದರು. ಇಂದು ಏಕ ಕಾಲಕ್ಕೆ ಹೆಚ್ಚಿನ ರೈತರು ಬಂದ ಕಾರಣ ಸಮಸ್ಯೆಯಾಗಿದೆ. 
ಡಿ.ಎಂ.ಪಾಣಿ, ತಹಶೀಲ್ದಾರ್‌, ಹುಮನಾಬಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT