ಭಾನುವಾರ, ಡಿಸೆಂಬರ್ 15, 2019
23 °C
ಎಐಡಿವೈಒ, ಎಐಡಿಎಸ್‌ಒ, ಎಐಎಂಎಸ್‌ಎಸ್‌ ಸಂಘಟನೆಗಳಿಂದ ಪ್ರತಿಭಟನೆ

ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಿ

ರಾಯಚೂರು: ‘ಗ್ರಾಮೀಣ ಭಾಗಗಳಿಂದ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಆರಂಭದಲ್ಲಿಯೆ ಉಚಿತ ಬಸ್‌ಪಾಸ್‌ ಸೌಲಭ್ಯ ಒದಗಿಸಬೇಕು ಹಾಗೂ ಶಾಲಾ–ಕಾಲೇಜುಗಳ ಆರಂಭದೊಂದಿಗೆ ವಸತಿ ನಿಲಯಗಳನ್ನೂ ತೆರೆಯುವ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟುಡೆಂಟ್ಸ್‌ ಆರ್ಗನೈಜೇಷನ್‌ (ಎಐಡಿಎಸ್‌ಒ), ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂಥ್‌ ಆರ್ಗನೈಜೇಷನ್‌ (ಎಐಡಿವೈಒ) ಹಾಗೂ ಆಲ್‌ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌) ನೇತೃತ್ವದಲ್ಲಿ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

‘ಬಸ್‌ಪಾಸ್‌ ಇಲ್ಲ ಹಾಗೂ ವಸತಿ ನಿಲಯ ತೆರೆದಿಲ್ಲ ಎನ್ನುವ ಕಾರಣಗಳಿಂದ ಜೂನ್‌್ ತಿಂಗಳು ಅನೇಕ ವಿದ್ಯಾರ್ಥಿಗಳು ಶಾಲಾ– ಕಾಲೇಜುಗಳಿಗೆ ಅನಿವಾರ್ಯವಾಗಿ ಗೈರು ಹಾಜರಾಗುತ್ತಿದ್ದಾರೆ. ಪ್ರತಿಯೊಂದು ವಸ್ತುಗಳು ದುಬಾರಿ ಆಗಿರುವುದರಿಂದ ಬಡ ವಿದ್ಯಾರ್ಥಿಗಳು ಒಂದು ದಿನ ಕಳೆಯುವುದೂ ದುಸ್ತರವಾಗಿದೆ.

ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

‘ಜೂನ್‌ ತಿಂಗಳಿನಲ್ಲಿಯೆ ಅನೇಕ ವಿದ್ಯಾರ್ಥಿಗಳು ಕೂಲಿ ಮಾಡುವುದಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಸರ್ಕಾರವು ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ಸ್ಥಾಪಿಸಿದ್ದರೂ ಸಮಯಕ್ಕೆ ಸರಿಯಾಗಿ ಅವು ಕಾರ್ಯನಿರ್ವಹಿಸದ ಕಾರಣ ಉದ್ದೇಶ ಸಫಲವಾಗುತ್ತಿಲ್ಲ’ ಎಂದು ದೂರಿದರು.

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುತ್ತಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಲು ಉಚಿತ ಬಸ್‌ಪಾಸ್‌ ಸೌಲಭ್ಯವನ್ನು ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು. ಜೂನ್‌ ಮುಗಿದರೂ ಪಾಸ್‌ ವಿತರಣೆ ಸರಿಯಾಗಿಲ್ಲ. ಇದರಿಂದ ಶೈಕ್ಷಣಿಕ ಜೀವನ ಕುಂಠಿತವಾಗುತ್ತಿದೆ’ ಎಂದು ಹೇಳಿದರು.

ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಉದ್ಬಾಳ್‌, ಎಐಎಂಎಸ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಚೇತನಾ ಬನಾಳೆ ಇದ್ದರು.

***

ವರ್ಷವಿಡೀ ಕಾಲೇಜುಗಳು ನಡೆದರೂ ಬಸ್‌ ಪಾಸ್‌ 10 ತಿಂಗಳಮಟ್ಟಿಗೆ ಮಾತ್ರ ಕೊಡಲಾಗುತ್ತಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಮಹೇಶ ಚಿಕಲಪರ್ವಿ, ಅಧ್ಯಕ್ಷ, ಎಐಡಿಎಸ್‌ಒ ಜಿಲ್ಲಾ ಘಟಕ

ಪ್ರತಿಕ್ರಿಯಿಸಿ (+)