ಶನಿವಾರ, ಡಿಸೆಂಬರ್ 14, 2019
21 °C
ಜಿಲ್ಲೆಯ ಅಧಿಕಾರಿಗಳ ಕಾರ್ಯನಿರ್ವಹಣೆಗೆ ಪಂಡಿತರಾವ್‌ ಚಿದ್ರಿ ಅಸಮಾಧಾನ

ಅನುದಾನ ಬಳಸದ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನುದಾನ ಬಳಸದ ಅಧಿಕಾರಿಗಳು

ರಾಯಚೂರು: ‘ಕುರಿ ಹಾಗೂ ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ರಾಜ್ಯ ಸರ್ಕಾರವು ಜಾರಿಗೊಳಿಸಿದ ವಿವಿಧ ಯೋಜನೆಗಳನ್ನು ಜಿಲ್ಲೆಯ ಅಧಿಕಾರಿಗಳು ಜನರಿಗೆ ತಲುಪಿಸುತ್ತಿಲ್ಲ. ಅನುದಾನವಿದ್ದರೂ ಬಳಕೆ ಮಾಡಿಕೊಂಡಿಲ್ಲ’ ಎಂದು ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಳಿ ಅಧ್ಯಕ್ಷ ಪಂಡಿತರಾವ್‌ ಚಿದ್ರಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.

‘ಜಿಲ್ಲೆಯಲ್ಲಿ ಆಡು ಹಾಗೂ  ಕುರಿಗಾಹಿಗಳ ಸಮೀಕ್ಷೆಯಾಗಿಲ್ಲ. ಈ ಕುರಿತು ಅಧಿಕಾರಿಗಳು ತಪ್ಪು ಮಾಹಿತಿ ಹೇಳುತ್ತಿದ್ದಾರೆ. ಸರ್ಕಾರವು ಪ್ರತಿ ವರ್ಷ ನಿಗಮಕ್ಕೆ ಮೂಲ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ. ಆದರೆ ಅಧಿಕಾರಿಗಳು ಸಾಲ ಒದಗಿಸುತ್ತಿಲ್ಲ ಎಂದು ಕುರಿಗಾಹಿಗಳು ಆರೋಪಿಸುತ್ತಿದ್ದಾರೆ. ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಿಲ್ಲ’ ಎಂದು ಹೇಳಿದರು.

‘ಕುರಿಗಳಿಗೆ ಔಷಧೋಪಚಾರ, ಚಿಕಿತ್ಸೆ ಹಾಗೂ ಕುರಿಗಳ ಸಾವಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಇದರ ಅನುದಾನ ದುರ್ಬಳಕೆ ಆಗುತ್ತಿದೆ. ಈ ವರ್ಷ ಕುರಿಗಳ ಚಿಕಿತ್ಸೆಗಾಗಿ ₹8.16 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕುರಿಗಳ ರೋಗ ತಪಾಸಣೆಗಾಗಿ ಸ್ಥಳಕ್ಕೆ ತೆರಳಲು ವಾಹನ ಸೌಲಭ್ಯ ಕೂಡಾ ಇದೆ. ಆಕಸ್ಮಿಕವಾಗಿ ಸಾಯುವ ಒಂದು ಕುರಿಗೆ ₹5 ಸಾವಿರ ಪರಿಹಾರ ಕೊಡಬೇಕು. ಅಧಿಕಾರಿಗಳಿಗೂ ಈ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಕುರಿಗಾಹಿಗಳಿಗೆ ಇದರ ಸೌಲಭ್ಯವನ್ನು ಒದಗಿಸಿಲ್ಲ’ ಎಂದರು.

‘ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಇಲ್ಲದಿದ್ದರೆ ಜನರಲ್ಲಿ ಹೇಗೆ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ಕುರಿ ಉದ್ಯಮ ಬೆಳೆಸುವುದಕ್ಕೆ ರಾಜ್ಯ ಸರ್ಕಾರವು ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಜವಾಬ್ದಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ನಿಗಮದ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)