ಶುಕ್ರವಾರ, ಡಿಸೆಂಬರ್ 13, 2019
20 °C
ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆ: ಕೃಷಿ, ಆರೋಗ್ಯ, ಶಿಕ್ಷಣ ಇಲಾಖೆ ಪ್ರಗತಿ ಕುರಿತು ನಡೆಯದ ಚರ್ಚೆ

ಅಂಕಿಅಂಶಗಳ ಮಾಹಿತಿಗೆ ಸೀಮಿತವಾದ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕಿಅಂಶಗಳ ಮಾಹಿತಿಗೆ ಸೀಮಿತವಾದ ಸಭೆ

ಯಾದಗಿರಿ: ಅರಣ್ಯ, ಕಾರ್ಮಿಕ, ಭೂಸೇನಾ ನಿಗಮ, ಸಣ್ಣ ಕೈಗಾರಿಕೆ, ಅಬಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಪೂರಕ ಮಾಹಿತಿ, ಅಂಕಿಅಂಶ ಕೇಳುವುದಕ್ಕಷ್ಟೇ ಬುಧವಾರ ಜಿಲ್ಲಾ ಪಂಚಾಯಿತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಸೀಮಿತಗೊಂಡಿತು.

ಅಜೆಂಡಾ ಪ್ರಕಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಬೇಕಿತ್ತು. ಆದರೆ, ಅಧ್ಯಕ್ಷರ ಅಪ್ಪಣೆ ಮೇರೆಗೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕೈಗೆತ್ತಿಕೊಳ್ಳಲಾಯಿತು.

ಅರಣ್ಯ, ಕಾರ್ಮಿಕ, ಭೂಸೇನಾ ನಿಗಮ, ಸಣ್ಣ ಕೈಗಾರಿಕೆ, ಅಬಕಾರಿ, ಲೋಕೋಪಯೋಗಿ ಇಲಾಖೆಗಳಿಗೆ ಸಂಬಂಧಿಸಿದಂತೆ ಕೇವಲ ಪೂರಕ ಮಾಹಿತಿ, ಅಂಕಿಅಂಶ, ಕಾಮಗಾರಿಗಳ ವಿವರ, ಸರ್ಕಾರದ ಅನುದಾನದ ಬಿಡುಗಡೆ, ಅನುದಾನಕ್ಕೆ ಪ್ರಸ್ತಾವ ಸಲ್ಲಿಕೆ ಸುತ್ತಲೇ ವಿಷಯ ಗಿರಿಕಿ ಹೊಡೆಯಿತು. ಸಭೆ ಆರಂಭಗೊಂಡು ಒಂದು ತಾಸಿನ ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜೇಂದ್ರನ್‌ ಮೆನನ್ ಅಧ್ಯಕ್ಷರ ಕಿವಿಯಲ್ಲಿ ಉಸುರಿ ಸಭೆಯಿಂದ ನಿರ್ಗಮಿಸಿದರು.

ನಂತರ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿಪಾಟೀಲ ಅವರೊಬ್ಬರೇ ಅಧಿಕಾರಿಗಳಿಂದ ಪ್ರಶ್ನೋತ್ತರ ಸಭೆ ಮುಂದುವರಿಸಿದರು. ಅಧ್ಯಕ್ಷರಿಗೆ ಉಪಾಧ್ಯಕ್ಷೆ ಚಂದ್ರಕಲಾ ಆಗಾಗ ದನಿಗೂಡಿಸಿದ್ದು ಬಿಟ್ಟರೆ ಗಂಭೀರ ಚರ್ಚೆ ನಡೆಯಲೇ ಇಲ್ಲ.

ಚರ್ಚೆಯಾಗದ ಸಕಾಲಿಕ ವಿಷಯಗಳು: ಮಳೆಗಾಲದ ಆರಂಭದ ತಿಂಗಳಲ್ಲಿ ಕೃಷಿ, ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಡಿಪಿ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಯಲಿಲ್ಲ. ಮಳೆಗಾಲ ಆರಂಭವಾಗಿದ್ದು ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಹಾಗೂ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಸೇರಿದಂತೆ ರೈತರ ಸಮಸ್ಯೆ, ಹೆಚ್ಚಿರುವ ಕಳಪೆ ಬಿತ್ತನೆ ಬೀಜ ಮಾರಾಟ ದಂದೆ ಇತರೆ ವಿಷಯಗಳ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆಗಳು ನಡೆಸುವ ಸಕಾಲ ಇದಾಗಿದ್ದರೂ, ಸಭೆ ಗಮನಹರಿಸಲಿಲ್ಲ.

ಜಿಲ್ಲೆಯಲ್ಲಿ ನಿತ್ಯ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರ, ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗ ಹಾವಳಿ ಹೆಚ್ಚಿದೆ. ಡೆಂಗಿ, ಕಾಲರಾ, ಮಲೇರಿಯಾ ಭೀತಿ ಜನರನ್ನು ಕಂಗೆಡಿಸಿದೆ. ಈ ಕುರಿತು ಆರೋಗ್ಯ ಇಲಾಖೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆಗೆ ಸಭೆ ಮಹತ್ವ ನೀಡಲಿಲ್ಲ.

ಜಿಲ್ಲೆಯಾದ್ಯಂತ ಶಾಲೆಗಳು ಆರಂಭಗೊಂಡು ತಿಂಗಳು ಕಳೆದರೂ, ಸಾಕಷ್ಟು ಶಾಲೆಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಪೂರೈಕೆ ಆಗಿಲ್ಲ. ಶೈಕ್ಷಣಿಕ ವರ್ಷಾರಂಭದಲ್ಲೇ ಉದ್ಭವಿಸಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಸಂಬಂಧಿಸಿದ ಇಲಾಖೆ ಕುರಿತು ಗಮನ ಹರಿಸಲೇ ಇಲ್ಲ. ಹೀಗೆ ಮಳೆಗಾಲ, ಶೈಕ್ಷಣಿಕ ವರ್ಷಾರಂಭದಲ್ಲಿ ಸಕಾಲಿಕವಾಗಿ ಚರ್ಚಿಸಬೇಕಾದ ಇಲಾಖೆಯ ಮಹತ್ತರ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನೇ ಸಭೆ ಕಡೆಗಣಿಸಿತು.

ಅಧ್ಯಕ್ಷರ ಕೆಲ ಪ್ರಶ್ನೆಗಳಿಗೆ ಚುಟುಕು ಉತ್ತರ ನೀಡಿದ ಅಧಿಕಾರಿಗಳು ಸಭೆಯ ಮಧ್ಯದಲ್ಲೇ ನಿರ್ಗಮಿಸಲು ಆರಂಭಿಸಿದರು. ಅಲ್ಪಸಂಖ್ಯಾತರ ಇಲಾಖೆ ಹಾಗೂ ಸಣ್ಣ ಕೈಗಾರಿಕೆ ಇಲಾಖೆ ಮಹಿಳಾ ಅಧಿಕಾರಿಗಳು ನಿರ್ಗಮಿಸಿದರು. ನಂತರ ಕೆಲ ಅಧಿಕಾರಿಗಳು ಮಹಿಳಾ ಅಧಿಕಾರಿಗಳನ್ನು ಅನುಸರಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರ ಪಾಟೀಲ, ಸಾಮಾಜಿಕ ನ್ಯಾಯ ಸ್ಥಮಿತಿ ಅಧ್ಯಕ್ಷೆ ಭೀಮಾಬಾಯಿ, ಮುಖ್ಯ ಯೋಜನಾಧಿಕಾರಿ ಸುನೀಲ್‌ ಬಿಸ್ವಾಸ್ ಹಾಜರಿದ್ದರು.

***

ಅನುದಾನ ದುರುಪಯೋಗ: ಜೈಲು

‘ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ದುರ್ಬಳಕೆಯಾದರೆ ತನಿಖೆಗೊಳಪಡಿಸಿ ಜೈಲಿಗೆ ಅಟ್ಟುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿ ಪಾಟೀಲ ಅಧಿಕಾರಿಗಳ ಮೇಲೆ ಚಾಟಿ ಬೀಸಿದರು.

‘ಜಿಲ್ಲೆಯಲ್ಲಿನ ಕೆಂಭಾವಿ, ಗುರುಮಠಕಲ್‌ನಲ್ಲಿ ಜಿಲ್ಲಾ ಪಂಚಾಯಿತಿಯಿಂದ ನಿರ್ಮಾಣ ಮಾಡುತ್ತಿರುವ ಶೌಚಾಲಯ ಕಾಮಗಾರಿಗಳು ಅಪೂರ್ಣಗೊಂಡಿವೆ. ಶೌಚಾಲಯ ಅನುದಾನ ದುರ್ಬಳಕೆ ಆಗಿರುವ ಬಗ್ಗೆ ಶಂಕೆ ಇದೆ. ತನಿಖೆಗೊಳಪಡಿಸಲಾಗುವುದು. ಅನುದಾನ ದುರ್ಬಳಕೆ ಸಾಬೀತಾದರೆ ಜೈಲಿಗೆ ಅಟ್ಟುತ್ತೇನೆ. ಈ ಕುರಿತು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ’ ಎಂದು ಅಧ್ಯಕ್ಷರು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

***

ಮಾಹಿತಿ ಒದಗಿಸದ 10 ಇಲಾಖೆಗಳು

ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಕುರಿತು ಜಿಲ್ಲಾ ಪಂಚಾಯಿತಿಗೆ ಒಟ್ಟು 10 ಇಲಾಖೆಗಳು ಮಾಹಿತಿಯೇ ಒದಗಿಸಿಲ್ಲದಿರುವುದು ಕಂಡುಬಂತು. ಪ್ರಗತಿ ಪರಿಶೀಲನಾ ಸಭೆಗೆ ಮುಂಚಿತವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿಗಳು ಇಲಾಖೆಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದರು. 

ಆದರೆ, ಸಭೆ ನಿಗದಿಗೊಂಡರೂ ರೇಷ್ಮೆ, ನಿರ್ಮಿತಿ ಕೇಂದ್ರ, ಪಿಎಂಜಿಎಸ್‌ವೈ, ವಿಶ್ವಕರ್ಮ ಅಭಿವೃದ್ಧಿ ನಿಗಮ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸಾಮಾಜಿಕ ಭದ್ರತೆ ಯೋಜನೆ (ಜಿಲ್ಲಾಧಿಕಾರಿ ಕಚೇರಿ), ಪ್ರಾದೇಶಿಕ ಸಾರಿಗೆ ಇಲಾಖೆ, ಪ್ರವಾಸೋದ್ಯಮ, ಸಣ್ಣ ನಿರಾವರಿ ಇಲಾಖೆಗಳು ಮಾಹಿತಿ ಒದಗಿಸಿಲ್ಲ.

ಪ್ರತಿಕ್ರಿಯಿಸಿ (+)