ಬುಧವಾರ, ಡಿಸೆಂಬರ್ 11, 2019
20 °C
5 ವರ್ಷ ಗ್ಯಾರಂಟಿ ಇರುವ ಗ್ರೈಂಡರ್

ಖರೀದಿಸಿದ 5 ದಿನದಲ್ಲಿ ಸ್ಫೋಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖರೀದಿಸಿದ 5 ದಿನದಲ್ಲಿ ಸ್ಫೋಟ!

ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಸೀತಾಳ ನಿವಾಸಿ ಸುಂದರಿ ಸಪಲ್ಯ ಅವರು ಬಿ.ಸಿ.ರೋಡ್ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಈಚೆಗೆ ಖರೀದಿಸಿದ ಹೊಸ ಗ್ರೈಂಡರ್ ಮನೆಯಲ್ಲಿ ಸ್ಫೋಟಗೊಂಡು ಸುಟ್ಟು ಕರಕಲಾಗಿದೆ.

ಸುಂದರಿ ಅವರು ಸೊಸೆ ರೇಖಾ ಕೃಷ್ಣ ಅವರ ಮೂಲಕ ಇದೇ 4ರಂದು ಬಿ.ಸಿ.ರೋಡ್‌ನ ಪ್ರಿಯಾ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ₹6,490 ಪಾವತಿಸಿ ವಿಜಯಲಕ್ಷ್ಮಿ ಹೋಂ ಅಪ್ಲಾಯೆನ್ಸಸ್ ಕಂಪೆನಿಯ ಗ್ರೈಂಡರ್ ಖರೀದಿಸಿದ್ದಾರೆ. ಇದೇ 8ರಂದು  ಏಕಾಏಕಿ ಸ್ಫೋಟಗೊಂಡು ಮನೆಯವರನ್ನು ಭಯಭೀತರನ್ನಾಗಿಸಿದೆ.  ಇದಕ್ಕೆ 5 ವರ್ಷಗಳ ಗ್ಯಾರಂಟಿ ಕಾರ್ಡ್‌  ಕೂಡಾ ನೀಡಲಾಗಿದೆ.

  ಕಳೆದ 8ರಂದು ದೋಸೆಗೆ ಅಕ್ಕಿ ಅರೆದು ಬಳಿಕ ವಿದ್ಯುತ್ ಸಂಪರ್ಕದ ಪ್ಲಗ್ ಕಳಚಿಟ್ಟು, ಗ್ರೈಂಡರ್ ಶುಚಿಗೊಳಿಸಿ ಬಟ್ಟೆ ಮುಚ್ಚಿದ್ದರು. ಬೆಳಿಗ್ಗೆ  10.45ಗಂಟೆಗೆ ಅಡುಗೆ ಕೋಣೆಯಲ್ಲಿ ಭಾರೀ ಸದ್ದು ಕೇಳಿಸಿದೆ. ಸ್ಥಳದಲ್ಲಿದ್ದ ಮಗು ಅಳುತ್ತಾ ಹೊರಗೆ ಬಂದಿದೆ. ತಕ್ಷಣವೇ ಸುಂದರಿ ಅವರು ಓಡಿ ಹೋಗಿ ನೋಡಿದಾಗ  ಗ್ರೈಂಡರ್ ಸ್ಪೋಟಗೊಂಡು ಬೆಂಕಿ ಹೊತ್ತಿ ಉರಿಯುತ್ತಿತ್ತು. ಸ್ಪೋಟದ ರಭಸಕ್ಕೆ ಗ್ರೈಂಡರ್ ಸುಟ್ಟು ಕರಕಲಾಗಿತ್ತು.

‘ಗ್ರೇಂಡರ್‌ನ ಶಬ್ಧಕ್ಕೆ ಗೋಡೆಯ ಮೇಲೆ ಅಳವಡಿಸಿದ್ದ ಮರದ ಹಲಗೆ ಮತ್ತು ಅದರ ಮೇಲಿನ ಸಾಂಬಾರ ಪದಾರ್ಧಗಳು ಚೆಲ್ಲಾಪಿಲ್ಲಿಯಾಗಿದ್ದವು. ನೆರೆಮನೆಯ ವಾಣಿ ಶೆಟ್ಟಿಗಾರ್ ಸ್ಥಳಕ್ಕೆ ಧಾವಿಸಿ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಇದೇ ಅಡುಗೆ ಕೋಣೆ ಮೇಲ್ಭಾಗದಲ್ಲಿ 15 ಗೋಣಿ ಅಕ್ಕಿ ಸಂಗ್ರಹಿಡಿಸಲಾಗಿದ್ದು, ಪಕ್ಕದಲ್ಲೇ ತೆರೆದ ಕೋಣೆಯಲ್ಲಿ ಅಡುಗೆ ಸಿಲಿಂಡರ್ ಕೂಡಾ ಇತ್ತು’ ಎಂದು ತಿಳಿಸಿದ್ದಾರೆ.

ಈ ಸ್ಪೋಟದ ಬಗ್ಗೆ ಎಲೆಕ್ಟ್ರಾನಿಕ್ಸ್ ಮಳಿಗೆಗೆ ತಿಳಿಸಲು ಎರಡೆರಡು ಬಾರಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇದರಿಂದಾಗಿ ಗ್ರಾಹಕರ ವೇದಿಕೆ ಸಹಿತ ಯಾರಿಗೆ ತಿಳಿಸಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.                                  

‘ಇದು ಒಂದು ಅಪರೂಪದ ಪ್ರಕರಣವಾಗಿದ್ದು, ಸ್ಫೋಟಗೊಂಡ ಗ್ರೈಂಡರ್ ಅನ್ನು ಬದಲಿಸಿಕೊಡಲಾಗುವುದು. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಂಬಂಧಪಟ್ಟ ಕಂಪೆನಿಗೆ ಸೂಚಿಸಲಾಗುವುದು’ ಎಂದು ಪ್ರಿಯಾ ಎಲೆಕ್ಟ್ರಾನಿಕ್ಸ್ ಮಳಿಗೆಯ ಮಾಲೀಕ ಪ್ರೀತಂ ರೋಡ್ರಿಗ್ರಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆದರೆ ಬಿ.ಸಿ.ರೋಡ್‌ನಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ನೆನಪಿಸುವಾಗ ಈ ಸ್ಪೋಟದ ಬಗ್ಗೆಯೂ ತಜ್ಞರಿಂದ ಸಮಗ್ರ ತನಿಖೆ ನಡೆಸುವ ಅನಿವಾರ್ಯತೆಯೂ ಇದೆ ಎಂಬುದು ಎಲೆಕ್ಟ್ರಾನಿಕ್ಸ್ ತಂತ್ರಜ್ಞರೊಬ್ಬರು ಅಭಿಪ್ರಾಯ.

ಪ್ರತಿಕ್ರಿಯಿಸಿ (+)