ಶನಿವಾರ, ಡಿಸೆಂಬರ್ 7, 2019
24 °C
ಮತದಾರರ ಪಟ್ಟಿಯಲ್ಲಿ ತಪ್ಪು: ನಿರ್ಲಕ್ಷ್ಯದ ಪರಮಾವಧಿ: -ಶಾಸಕಿ ಶಕುಂತಳಾ ಶೆಟ್ಟಿ

ಗಲಭೆ ಎಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಲಭೆ ಎಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಪುತ್ತೂರು: ‘ಯಾವುದೇ ಪ್ರಕರಣಗಳಾಗಲಿ, ನಾನಂತೂ ಪೊಲೀಸರ ತನಿಖೆಯಲ್ಲಿ ಈ ಮೊದಲು ಹಸ್ತಕ್ಷೇಪ ಮಾಡಿಲ್ಲ. ಕೋಮು ಗಲಭೆ ವಿಚಾರದಲ್ಲಿ ಗಲಭೆ ಮಾಡುವವರು ಯಾವ ಜಾತಿ, ಧರ್ಮ, ಪಕ್ಷದವರೇ ಆಗಿರಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕಿ ಶಕುಂತಳಾ ಶೆಟ್ಟಿ ಸೂಚಿಸಿದರು.

ಮಂಗಳವಾರ ನಡೆದ ಪುತ್ತೂರು ತಾಲ್ಲೂಕು ಕೆಡಿಪಿ ಸಭೆಯಲ್ಲಿ ಪೊಲೀಸ್ ಇಲಾಖೆಗೆ ಈ ಸೂಚನೆ ನೀಡಿದ ಅವರು, ‘ಉಪ್ಪಿನಂಗಡಿಯ ಪುಷ್ಪಲತಾ ನಿಗೂಢ ಸಾವಿಗೆ ಮೂರು ವರ್ಷ ತುಂಬಿದೆ. ಕಕ್ಕೂರು ಸಾಮೂಹಿಕ ಹತ್ಯೆ ಘಟನೆಗೆ 5 ವರ್ಷವಾಗಿದೆ. ಇನ್ನೂ ಕೂಡ ತನಿಖೆ ಮುಗಿದಿಲ್ಲದಿರುವುದು ನಾಚಿಕೆಗೇಡು’ ಎಂದು ಅತೃಪ್ತಿ ವ್ಯಕ್ತಪಡಿಸಿದರು.

‘ಕಾಲೇಜು ಹುಡುಗಿಯರು ಗಾಂಜಾ, ಸಿಗರೇಟ್ ಸೇವನೆ ಮಾಡುವ ದೃಶ್ಯಾವಳಿಗಳು ವಾಟ್ಸ್‍ಆ್ಯಪ್‌ನಲ್ಲಿ ಹರಿದಾಡುತ್ತಿದ್ದು ವೇಳೆ  ಅದು ಯಾವ ಕಾಲೇಜಿನ ಹುಡುಗಿಯರೆಂದು ಅನಗತ್ಯ ಚರ್ಚೆ ಮಾಡುವ ಬದಲು ಪೊಲೀಸರು ತಕ್ಷಣ ಸಂಶಯ ಬಂದ ಸಂಸ್ಥೆಗೆ ತಿಳಿಸಿ ಪೊಲೀಸರು ತನಿಖೆ ನಡೆಸಬೇಕು. ಗಾಂಜಾ ಮಾರಾಟ ಸ್ಥಳಗಳ ಬಗ್ಗೆ ನಿಗಾ ವಹಿಸಬೇಕು’ ಎಂದು ಸೂಚಿಸಿದರು.

‘ಪುತ್ತೂರು - ಉಪ್ಪಿನಂಗಡಿ ಮಧ್ಯೆ ಕೋಡಿಂಬಾಡಿಯಲ್ಲಿ ಸುಂದರ ರಸ್ತೆ ನಿರ್ಮಾಣವಾಗಿದ್ದು, ಈಗ ಹೊಸ ರಸ್ತೆಯ ಪಕ್ಕದಲ್ಲೇ  ಪುತ್ತೂರು ನಗರಸಭೆಯ ನೀರಿನ ಪೈಪ್‌ಲೈನ್‌ ತುಂಡಾಗಿ ಸಮಸ್ಯೆಯಾಗಿದೆ.  ಈ ಪೈಪ್ ಅನ್ನು ಸ್ಥಳಾಂತರ ಮಾಡಿಲ್ಲ’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಗೋಕುಲದಾಸ್ ಆಪಾದಿಸಿದರು.

‘ಇದಕ್ಕೆ ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಪ್ರತಿಕ್ರಿಯಿಸಿ, ಅದು ದಶಕಗಳಷ್ಟು ಹಳೆಯ ಪೈಪ್. ಅದನ್ನು ಸ್ಥಳಾಂತರ ಮಾಡಲು ಈಗ ಕಷ್ಟವಿದೆ. ಎಡಿಬಿ ಯೋಜನೆಯ ಎರಡನೇ ಹಂತದ ನೀರು ಸರಬರಾಜು ಕಾಮಗಾರಿಗೆ ₹40 ಕೋಟಿ ಮಂಜೂರಾಗಿದೆ. ಆ ಕಾಮಗಾರಿ ಆರಂಭಗೊಂಡಾಗ ಹಳೆಯ ಪೈಪ್ ತೆಗೆದು ಹೊಸ ಪೈಪ್‌ಲೈನ್ ಅಳವಡಿಸಲಾಗುತ್ತದೆ’ ಎಂದರು.

ಇದಕ್ಕೆ ತೃಪ್ತರಾಗದ ಶಾಸಕರು, ‘ನಿಮ್ಮ ₹40 ಕೋಟಿ ಮಂಜೂರಾಗುವಾಗ ಎಷ್ಟು ವರ್ಷವಾಗುತ್ತದೋ ಗೊತ್ತಿಲ್ಲ. ಅದಕ್ಕೆ ಕಾದು ನಮ್ಮ ರಸ್ತೆ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ. 

ಪುತ್ತೂರು ಮತ್ತು ಉಪ್ಪಿನಂಗಡಿ ಮಧ್ಯೆ ಪೂರ್ತಿ ರಸ್ತೆ ವಿಸ್ತರಣೆ ಮಾಡುವುದು ನನ್ನ ಯೋಜನೆ. ಅದು ಹಂತ ಹಂತವಾಗಿ ನಡೆಯುತ್ತದೆ. ಅದಕ್ಕೆ ಮೊದಲೇ ನೀವು ಪೈಪ್‌ಲೈನ್‌ ಸ್ಥಳಾಂತರ ಮಾಡಿದರೆ ಉತ್ತಮ. ಕಾಮಗಾರಿ ಮುಗಿದ ಮೇಲೆ ಸ್ಥಳಾಂತರ ಮಾಡಲು ಬಂದರೆ ಆಗ ನೀವು ದಂಡ ಕಟ್ಟಬೇಕಾದೀತು’ ಎಂದು ಪೌರಾಯುಕ್ತರಿಗೆ ಎಚ್ಚರಿಕೆ ನೀಡಿದರು.

ಕುದ್ಮಾರು ಗ್ರಾಮದ ಶಾಂತಿಮುಗೇರಿನಲ್ಲಿ ಕುಮಾರಧಾರಾ ನದಿಗೆ ನಿರ್ಮಾಣವಾದ ನೂತನ ಸೇತುವೆಯ ಕಾಮಗಾರಿ ಮುಗಿದಿದ್ದರೂ ಉದ್ಘಾಟನೆ ವಿಳಂಬ ಮಾಡುತ್ತಿರುವುದಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರಮೀಳಾ ಜನಾರ್ದನ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಶಾಸಕರು ಉತ್ತರಿಸಿ, ‘ಉದ್ಘಾಟನೆಗೆ ಲೋಕೋಪಯೋಗಿ ಸಚಿವರನ್ನು ಕರೆಯಲು ನಿರ್ಧರಿಸಲಾಗಿದ್ದು, ಅವರ ದಿನಾಂಕಕ್ಕೆ ಕಾಯಲಾಗುತ್ತಿದೆ. ಅವರು ಬರುವುದಿಲ್ಲ ಎಂದರೆ ಮತ್ತೆ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಕಾರ್ಯಕ್ರಮ ಮಾಡಬಹುದು’ ಎಂದರು.

ಉಪ್ಪಿನಂಗಡಿಯಲ್ಲಿ ನೆರೆ ಮುಂಜಾಗರೂಕತಾ ಸಭೆ ಕೇವಲ ಕಾಟಾಚಾರಕ್ಕೆ ಮಾತ್ರ ನಡೆಯುತ್ತಿದೆ ಎಂದು ನಾಮ ನಿರ್ದೇಶಿತ ಸದಸ್ಯ ಅಶ್ರಫ್ ಬಸ್ತಿಕಾರ್  ಆಪಾದಿಸಿದರು. ನೆಕ್ಕಿಲಾಡಿ ಗ್ರಾಮದ ಬೈತಡ್ಕದಲ್ಲಿ ಸಾರ್ವಜನಿಕ ಮೈದಾನವನ್ನು ಅತಿಕ್ರಮಣ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಯನಾ ಜಯಾನಂದ್ ಆಪಾದಿಸಿದರು. ಅದು ಸರ್ಕಾರಿ ಜಾಗವಾಗಿದ್ದು, ಅದನ್ನು ಸಾರ್ವಜನಿಕ ಮೈದಾನವಾಗಿ ಮೀಸಲಿಡುವಂತೆ ಗ್ರಾಮ ಪಂಚಾಯಿತಿ ನಿರ್ಣಯ ಅಂಗೀಕರಿಸಿ ಕಳುಹಿಸಿದೆ. ಶೀಘ್ರ ಮೀಸಲಿಟ್ಟು ದಾಖಲೆ ಮಾಡಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ್, ಉಪಾಧ್ಯಕ್ಷೆ ರಾಜೇಶ್ವರಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಜಗದೀಶ್ ಎಸ್, ತಹಶೀಲ್ದಾರ್ ಅನಂತ ಶಂಕರ್ ಇದ್ದರು.

***

ಗೊಂದಲ ಪರಿಹರಿಸಲು ಸೂಚನೆ

ಮತದಾರರ ಪಟ್ಟಿಯಲ್ಲಿ ಅನೇಕ ತಪ್ಪುಗಳು ಕಾಣಿಸಿಕೊಂಡಿರುವುದಕ್ಕೆ ಶಾಸಕಿ ಶಕುಂತಳಾ ಶೆಟ್ಟಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

‘ಮತದಾರರ ಪಟ್ಟಿಯಲ್ಲಿ ಸಾಕಷ್ಟು ಗೊಂದಲಗಳು ಇದ್ದು, ಇದರಿಂದ ಜನ ಮುಜುಗರಕ್ಕೆ ಒಳಗಾಗುತ್ತಿದ್ದಾರೆ.  ಅಧಿಕೃತ ದಾಖಲೆಯ ಮೇಲಿನ ವಿಶ್ವಾಸಾರ್ಹತೆಯೇ ಇದರಿಂದ ಹೊರಟು ಹೋಗುತ್ತದೆ. ಮತದಾರನ ಹೆಸರಿನಲ್ಲಿ, ಪೋಷಕರ ಹೆಸರಿನಲ್ಲಿ, ಅವರ ಜಾತಿ, ಧರ್ಮ ನಮೂದಿಸುವಲ್ಲಿ ತಪ್ಪಾಗುವುದು  ಇಂಥ ಹಲವಾರು ಪ್ರಮಾದಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇದೆಲ್ಲ ಟೈಪ್ ಮಾಡುವಾಗ ಆದ ತಪ್ಪು ಆಗಲು ಸಾಧ್ಯವಿಲ್ಲ.ಇದು  ನಿರ್ಲಕ್ಷ್ಯದ ಪರಮಾವಧಿ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು’ ಎಂದರು.

ಪ್ರತಿಕ್ರಿಯಿಸಿ (+)